Advertisement

ದೇಗುಲಗಳಲ್ಲಿ ಭಕ್ತಜನ ಸಮೂಹ; ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

08:06 PM Oct 11, 2021 | Team Udayavani |

ಮಹಾನಗರ: ನಗರದಲ್ಲಿ ನವರಾತ್ರಿ ಮಹೋತ್ಸವ, ದಸರಾ ಸಂಭ್ರಮ ಮುಂದುವರಿದಿದೆ. ಸೋಮವಾರವೂ ನಗರ ಮತ್ತು ಆಸುಪಾಸಿನ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು, ವಿಶೇಷ ಪೂಜೆ, ಚಂಡಿಕಾಯಾಗ ಮೊದಲಾದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

Advertisement

ಶಾರದಾ ಪ್ರತಿಷ್ಠೆ
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶಾರದಾ ಪ್ರತಿಷ್ಠೆ ನೆರವೇರಿತು. ಬೆಳಗ್ಗೆ ಮಹಾಪೂಜೆ, ನವಕ ಕಲಶಾಭಿಷೇಕ, ಅನಂತರ ಚಂಡಿಕಾಹೋಮ, ಮಧ್ಯಾಹ್ನ ಮಹಾಪೂಜೆ, ಬಳಿಕ ಶಾರದಾ ಪ್ರತಿಷ್ಠೆ ನಡೆಯಿತು. ರಾತ್ರಿ ವಿಶೇಷ ಪೂಜೆಯ ಬಳಿಕ ಬಲಿ ಉತ್ಸವ ಆರಂಭಗೊಂಡಿತು. ಕ್ಷೇತ್ರದಲ್ಲಿ ಮಂಗಳವಾರ ಚಂಡಿಕಾಹೋಮ, ಶಾರದಾ ಪೂಜೆ ಮೊದಲಾದವು ನೆರವೇರಲಿವೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕುಮಾರಿ ದುರ್ಗಾಹೋಮ, ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ಮೊದಲಾದವು ನಡೆದವು. ಮಂಗಳವಾರ ಮಹಿಷ ಮರ್ದಿನಿ ದುರ್ಗಾ ಹೋಮ, ಪುಷ್ಪಾಲಂಕಾರ ಪೂಜೆ ಇತ್ಯಾದಿ ನಡೆಯಲಿವೆ.

ಕೊಡಿಯಾಲಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಮಹಾಪೂಜೆ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ಬೋಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಸರ್ವಾಲಂಕಾರ ಪೂಜೆ, ಮಹಾ ಪೂಜೆ, ಹೊರಗಿನ ದರ್ಶನ ಬಲಿ ಪೂಜೆ ಮೊದಲಾದವು ನಡೆದವು.

ಶಾಪಿಂಗ್‌ಗೆ ಒಲವು
ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಸರಳ ರೀತಿಯ ಆಚರಣೆಗೆ ಆದ್ಯತೆ ನೀಡಲಾಗಿದ್ದರೂ ಹೆಚ್ಚಿನ ಸಂಖ್ಯೆಯ ಭಕ್ತರು ನವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹೊರ ಜಿಲ್ಲೆಗಳಿಂದಲೂ ಅನೇಕ ಮಂದಿ ಭಕ್ತರು ನಗರದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

Advertisement

ಇದನ್ನೂ ಓದಿ:ಕರ್ನಾಟಕದಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಲವೆಡೆ ಆಗಾಗ್ಗೆ ವಾಹನ ದಟ್ಟಣೆಯುಂಟಾಗುತ್ತಿದೆ. ಇನ್ನೊಂದೆಡೆ ನವರಾತ್ರಿ ಪ್ರಯುಕ್ತ ಖರೀದಿ ಭರಾಟೆಯೂ ಆರಂಭಗೊಂಡಿದ್ದು, ಮಾರಾಟ ಮಳಿಗೆಗಳು ವಿವಿಧ ಆಫ‌ರ್‌ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಸ್ತಬ್ಧಗೊಂಡ ಸ್ಥಿತಿಗೆ ತಲುಪಿದ್ದ ಮಾರುಕಟ್ಟೆಯಲ್ಲಿ ಮತ್ತೆ ಚಟುವಟಿಕೆಗಳು ಬಿರುಸು ಪಡೆದಿವೆ. ಮಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ದಸರಾ ಮೆರುಗು ಪಡೆದಿದ್ದು, ಗ್ರಾಹಕರು ಖರೀದಿಗೆ ಮುಂದಾಗಿರುವುದು ಕಂಡುಬಂದಿದೆ.

ಕಟೀಲು: ರಂಗಪೂಜೆ
ಕಟೀಲು: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಸೋಮವಾರ ಮಧ್ಯಾಹ್ನದ ವರೆಗೆ ಸುಮಾರು 10 ಸಾವಿರ ಭಕ್ತರು ಶ್ರೀ ದೇವಿಯ ದರ್ಶನ ಪಡೆದರು. 8 ಸಾವಿರ ಭಕ್ತರು ಅನ್ನಪ್ರಸಾದ ಸೇವೆಯಲ್ಲಿ ಭಾಗಿಯಾದರು. ರಾತ್ರಿ ದೇಗುಲದಲ್ಲಿ ದೇವರಿಗೆ ವಿಶೇಷ ರಂಗ ಪೂಜೆ, ಹೂವಿನ ಪೂಜೆ ನಡೆಯಿತು. ಶ್ರೀ ಭ್ರಾಮರೀಯನ್ನು ಸ್ವರ್ಣಾಭರದಿಂದ ಅಲಂಕಾರ ಮಾಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅಚ್ಚು ಕಟ್ಟಿನ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next