ಮಂಗಳೂರು: ಕಳೆದ ತಿಂಗಳು ನಗರದ ಮೂರು ಕಡೆ ನಡೆದಿದ್ದ ಮಹಿಳೆಯ ಸರ ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂಡುಶೆಡ್ಡೆಯ ಜಗದೀಶ್ ಶೆಟ್ಟಿ (39), ಉರ್ವ ಸ್ಟೋರ್‌ನ ಸುಜಿತ್ ಶೆಟ್ಟಿ (40) ಮತ್ತು ಪಾಲ್ತಾಡಿಯ ಸುರೇಶ್ ರೈ (39) ಬಂಧಿತ ಆರೋಪಿಗಳು.
ಸುಲಿಗೆ ಮಾಡಿದ ಸುಮಾರು 90 ಗ್ರಾಂ ಚಿನ್ನಾಭರಣಗಳು, 2 ಸ್ಕೂಟರ್ ಮತ್ತು 3 ಮೊಬೈಲ್ ಫೋನ್ ಒಳಗೊಂಡಂತೆ ಒಟ್ಟು 5 ಲ. ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
3 ಪ್ರಕರಣಗಳು
ಆ. 14ರಂದು ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ, ಆ. 24ರಂದು ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಫ್ಯಾಕ್ಟರಿ ರಸ್ತೆಯಲ್ಲಿ ಹಾಗೂ ಆ. 25ರಂದು ಶಕ್ತಿನಗರದ ರಾಜೀವ ನಗರದಲ್ಲಿ ಒಟ್ಟು ಮೂವರು ಮಹಿಳೆಯರ ಸರ ಸುಲಿಗೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಕದ್ದ ಚಿನ್ನದ ಸರವನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಬಂದಾಗ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಸಿಬಂದಿ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಗಳ ಪೈಕಿ ಜಗದೀಶ್ ರಿûಾ ಚಾಲಕನಾಗಿದ್ದಾನೆ. ಸುಜಿತ್ ಶೆಟ್ಟಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಸುರೇಶ್ ರೈ ಟೆಂಪೋ ಚಾಲಕನಾಗಿದ್ದಾನೆ. ಸುಜಿತ್ ಶೆಟ್ಟಿ ಮಂಗಳೂರಿನಲ್ಲಿ 2002ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.