Advertisement
ಮಹಾನಗರ ಪಾಲಿಕೆ ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪ್ರದೇಶಗಳನ್ನು ಒಳಗೊಂಡಿವೆ. ಮಂಗಳೂರು ದಕ್ಷಿಣ ಕ್ಷೇತ್ರದ 38 ವಾರ್ಡ್‌ಗಳು, ಮಂಗಳೂರು ಉತ್ತರ ಕ್ಷೇತ್ರದ 22 ವಾರ್ಡ್‌ಗಳು ಪಾಲಿಕೆ ವ್ಯಾಪ್ತಿಗೆ ಒಳಪಡುತ್ತವೆ. 2013ರ ಚುನಾವಣೆಯಲ್ಲಿ ಮಂಗಳೂರು ಉತ್ತರ ಹಾಗೂ ಮಂಗಳೂರು ದಕ್ಷಿಣ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು. ಒಟ್ಟಾರೆಯಾಗಿ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್2 , ಸಿಪಿಎಂ1, ಎಸ್‌ಡಿಪಿಐ 1 ಹಾಗೂ ಪಕ್ಷೇತರರು ಒಂದು ಸ್ಥಾನವನ್ನು ಗಳಿಸಿದ್ದರು.
ಉತ್ತರ ವಿಧಾನಸಭಾ ಕ್ಷೇತ್ರದ 10 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ 9ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. 3 ಸ್ಥಾನ ಇತರರ ಪಾಲಾಗಿತ್ತು. ಉತ್ತರ ಕ್ಷೇತ್ರದಲ್ಲಿ ಕಾಟಿಪಳ್ಳ ಪೂರ್ವ, ಇಡ್ಯಾ ಪಶ್ಚಿಮ, ಹೊಸಬೆಟ್ಟು, ಬೈಕಂಪಾಡಿ, ಕುಂಜತ್ತಬೈಲ್ ಉತ್ತರ, ಮರಕಡ, ದೇರೆಬೈಲು ಉತ್ತರ, ಕಾವೂರು, ಪಚ್ಚನಾಡಿ, ದೇರೆಬೈಲು ದಕ್ಷಿಣ ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬಿಜೆಪಿ ಸುರತ್ಕಲ್ ಪೂರ್ವ, ಕಾಟಿಪಳ್ಳ ಕೃಷ್ಣಾಪುರ, ಇಡ್ಯಾಪೂರ್ವ, ಕುಳಾಯಿ, ಕುಂಜತ್ತಬೈಲ್ ದಕ್ಷಿಣ, ಪಣಂಬೂರು ಬೆಂಗ್ರೆ, ಬಂಗ್ರ ಕುಳೂರು, ತಿರುವೈಲು, ದೇರೆಬೈಲು ಪೂರ್ವ ವಾರ್ಡ್‌ಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಸುರತ್ಕಲ್ ಪಶ್ಚಿಮದಲ್ಲಿ ಪಕ್ಷೇತರ, ಕಾಟಿಪಳ್ಳ ಉತ್ತರದಲ್ಲಿ ಎಸ್‌ಡಿಪಿಐ ಹಾಗೂ ಪಂಜಿಮೊಗರಿನಲ್ಲಿ ಸಿಪಿಎಂ ಜಯ ಸಾಧಿಸಿತ್ತು.
Related Articles
ದಕ್ಷಿಣ ವಿಧಾನಸಭಾ ಕ್ಷೇತ್ರದ ಒಟ್ಟು 38 ವಾರ್ಡ್‌ಗಳಲ್ಲಿ 25ರಲ್ಲಿ ಕಾಂಗ್ರೆಸ್, 11ರಲ್ಲಿ ಬಿಜೆಪಿ, ಎರಡು ವಾರ್ಡ್‌ಗಳಲ್ಲಿ ಜೆಡಿಎಸ್ ಜಯ ಗಳಿಸಿತ್ತು. ಪದವು ಪಶ್ಚಿಮ, ಕದ್ರಿಪದವು, ದೇರೆಬೈಲು ನೈಋತ್ಯ, ದೇರೆಬೈಲು ಪಶ್ಚಿಮ, ಬೋಳೂರು,ಕೊಡಿಯಾಲ್‌ಬೈಲು, ಬಿಜೈ, ಕದ್ರಿ ದಕ್ಷಿಣ, ಶಿವಬಾಗ್, ಪದವು ಸೆಂಟ್ರಲ್, ಪದವು ಪೂರ್ವ, ಮರೋಳಿ, ಬೆಂದೂರು, ಫಳ್ನೀರು, ಕೋರ್ಟ್, ಪೋರ್ಟ್, ಮಿಲಾ ಗ್ರಿಸ್, ಕಂಕನಾಡಿ ವೆಲೆನ್ಸಿಯಾ, ಕಂಕನಾಡಿ, ಅಳಪೆ ಉತ್ತರ, ಬಜಾಲ್, ಅತ್ತಾವರ, ಹೊಗೆ ಬಜಾರ್, ಬೋಳಾರ, ಜೆಪ್ಪು ವಾರ್ಡ್‌ನಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಮಣ್ಣಗುಡ್ಡೆ, ಕದ್ರಿ ಉತ್ತರ, ಕಂಬÛ, ಸೆಂಟ್ರಲ್ ಮಾರ್ಕೆಟ್, ಡೊಂಗರಕೇರಿ, ಕಂಟೋನ್ಮೆಂಟ್, ಅಳಪೆ ದಕ್ಷಿಣ, ಕಣ್ಣೂರು, ಜಪ್ಪಿನಮೊಗರು, ಮಂಗಳಾದೇವಿ, ಬೆಂಗ್ರೆ ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದುಕೊಂಡಿತ್ತು. ಕುದ್ರೋಳಿ, ಬಂದರ್ ಜೆಡಿಎಸ್ ಪಾಲಾಗಿತ್ತು.
Advertisement
ಮನೆ ಭೇಟಿ; ಬಿರುಸಿನ ಪ್ರಚಾರಶಾಸಕ ವೇದವ್ಯಾಸ ಕಾಮತ್ ಅವರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದು, ಮನೆ ಭೇಟಿ ಮೂಲಕ ಮತದಾರರನ್ನು ಸಂಪರ್ಕಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ| ಭರತ್ ಶೆಟ್ಟಿಯವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ವಾರ್ಡ್‌ಗಳಲ್ಲಿ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ. ಮಂಗಳೂರು ಉತ್ತರದಲ್ಲಿ ಮಾಜಿ ಶಾಸಕ ಮೊದಿನ್ ಬಾವಾ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನೊಂದೆಡೆ ಹಾಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಸದಸ್ಯರಾದ ಕ್ಯಾ| ಗಣೇಶ್ ಕಾರ್ನಿಕ್, ಮೋನಪ್ಪ ಭಂಡಾರಿ ಮೊದಲಾದವರು ಕೂಡ ಪ್ರಚಾರಕಣದಲ್ಲಿದ್ದಾರೆ. ” ಏತ್ ಸುತ್ತು ಆಂಡ್‌ಗೆ… ‘
ಟಿಕೆಟ್ ಸಿಕ್ಕಿದ ತತ್‌ಕ್ಷಣದಿಂದ ವಾರ್ಡ್ ಮಟ್ಟದಲ್ಲಿ ಪ್ರಚಾರಕ್ಕೆ ಅಭ್ಯರ್ಥಿಗಳು ಧುಮುಕಿದ್ದಾರೆ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಈಗಾಗಲೇ ಕರಪತ್ರಗಳೊಂದಿಗೆ ಮನೆಗಳಿಗೆ ಭೇಟಿ ನೀಡಿ ಒಂದು ಸುತ್ತಿನ ಪ್ರಚಾರ ಪೂರ್ತಿಗೊಳಿಸಿದ್ದಾರೆ. ಮನೆಮನೆ ಭೇಟಿ ಯಲ್ಲೂ ಪೈಪೋಟಿ ಆರಂಭವಾಗಿದೆ. ಎದುರಾಳಿ ಅಭ್ಯರ್ಥಿಗಿಂತ ಹೆಚ್ಚು ಬಾರಿ ತಮ್ಮ ಮನೆಮನೆ ಪ್ರಚಾರ ನಡೆಯಬೇಕು ಎಂಬ ಜಿದ್ದಿಗೆ ಬಿದ್ದಿರುವ ಅಭ್ಯರ್ಥಿಗಳು “ಆಕ್ಲೆನ ಏತ್ ಸುತ್ತು ಆಂಡ್‌ಗೆ ?’ಎಂದು ಪ್ರತಿಸ್ಪರ್ಧಿಗಳ ಬಗ್ಗೆ ತಮ್ಮ ಆಪ್ತರ ಮೂಲಕ ಮಾಹಿತಿ ಸಂಗ್ರಹಿಸುತ್ತಾ ತಮ್ಮ ಪ್ರಚಾರ ಬಿರುಸುಗೊಳಿಸುತ್ತಿದ್ದಾರೆ. ಬಹಿರಂಗ ಪ್ರಚಾರದ ಬದಲು ಮನೆಮನೆ ಭೇಟಿಯೇ ಹೆಚ್ಚು ಪರಿಣಾಮಕಾರಿ ಎಂದು ಮನಗಂಡಿರುವ ಅಭ್ಯರ್ಥಿಗಳು ಕನಿಷ್ಠ ಮೂರರಿಂದ ನಾಲ್ಕು ಬಾರಿಯಾದರೂ ವಾರ್ಡ್‌ನಲ್ಲಿ ಎಲ್ಲ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮತ ಯಾಚಿಸುವ ಗುರಿ ಇರಿಸಿಕೊಂಡಿದ್ದಾರೆ.