Advertisement

ಪಾಲಿಕೆಯ ಆನ್‌ಲೈನ್‌ ಸೇವೆಗೆ ಗ್ರಹಣ

01:57 AM Jun 15, 2020 | Sriram |

ವಿಶೇಷ ವರದಿ-ಮಹಾನಗರ: ಕೋವಿಡ್-19 ಕಾರಣದಿಂದ ಸಾರ್ವಜನಿಕರು ಕಚೇರಿ ಗಳಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದು, ಆನ್‌ಲೈನ್‌ ಸೇವೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಆದರೆ ಮಂಗಳೂರು ಪಾಲಿಕೆ ಇನ್ನೂ ಆನ್‌ಲೈನ್‌ ಸೇವೆಯನ್ನು ಪೂರ್ಣ ಮಟ್ಟದಲ್ಲಿ ಜಾರಿಗೊಳಿಸದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೋವಿಡ್-19 ಆತಂಕದ ಮಧ್ಯೆ ಪಾಲಿಕೆಗೆ ಸುತ್ತಾಡುವ ಪ್ರಮೇಯ ಎದುರಾಗಿದೆ.

Advertisement

ಪಾಲಿಕೆ ಅಧಿಕಾರಿಗಳ ಪ್ರಕಾರ ಆನ್‌ಲೈನ್‌ ವ್ಯವಸ್ಥೆಗೆ ಡಾಟಾ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಮುಂಬರುವ ಸಭೆಯಲ್ಲಿ ಟೆಂಡರ್‌ಗೆ ಅನುಮೋದನೆ ಪಡೆದು ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಗಿದೆ. ಆನ್‌ಲೈನ್‌ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬ್ಯಾಂಕ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಬೇಕಿದೆ.

ವೆಬ್‌ಸೈಟ್‌ನಲ್ಲಿ ಪಾವತಿ ಚಿಂತನೆ
ಮೊಬೈಲ್‌ ಆ್ಯಪ್‌ ಮೂಲಕ ಗ್ರಾಹಕರಿಗೆ ಆನ್‌ಲೈನ್‌ ಸೇವೆ ಒದಗಿಸುವುದು ಪಾಲಿಕೆಯ ಉದ್ದೇಶವಾಗಿತ್ತು. ಆದರೆ ಇದೀಗ ಮೊದಲ ಹಂತದಲ್ಲಿ ಪಾಲಿಕೆಯ ವೆಬ್‌ಸೈಟ್‌ನಲ್ಲಿಯೇ ಹಣ ಪಾವತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ.

ಈಗಾಗಲೇ ತುಮಕೂರು ನಗರ ಪಾಲಿಕೆ ಸೇರಿದಂತೆ ಕೆಲವೆಡೆ ಬಿಲ್‌ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಯಲ್ಲಿದ್ದು, ಇದೇ ಮಾದರಿಯನ್ನು ಮನಪಾದಲ್ಲೂ ಜಾರಿಗೊಳಿಸಿ ಎಲ್ಲ ಪೌರ ಸೇವೆಗಳು ಜನರಿಗೆ ಕುಳಿತಲ್ಲಿಯೇ ಸಿಗುವಂತೆ ಮಾಡುವ ಪರಿಕಲ್ಪನೆ ಹೊಂದಲಾಗಿತ್ತು.

ಆನ್‌ಲೈನ್‌ಗೆ ಇ-ಖಾತಾ ಸೇರ್ಪಡೆ
ರಾಜ್ಯದಲ್ಲಿ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಇ-ತಂತ್ರಾಂಶ ವ್ಯವಸ್ಥೆ ಯಡಿ ಖಾಲಿ ನಿವೇಶನ ಮತ್ತು ಕಟ್ಟಡಗಳ ಅರ್ಜಿಗಾಗಿ ಇ-ಖಾತೆ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇ-ಖಾತಾ ವಿತರಣೆಗೆ 45 ದಿನಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಸದ್ಯ180 ಅರ್ಜಿಗಳು ಬಂದಿವೆ. 50ರಷ್ಟು ವಿಲೇವಾರಿ ಆಗಿವೆ. ಕೆಲವು ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಭರವಸೆಗೆ ಹಲವು ವರ್ಷ!
ಪಾಲಿಕೆ ಸೇವೆಗಳು ಆನ್‌ಲೈನ್‌ನಲ್ಲಿ ಸಿಗಲಿವೆ ಎಂದು ಮನಪಾ ಜನಪ್ರತಿನಿಧಿಗಳು ವರ್ಷಗಳ ಹಿಂದೆ ಭರವಸೆ ನೀಡಿದ್ದರು. ನೀರಿನ ಶುಲ್ಕ, ನೀರಿನ ಸಂಪರ್ಕ, ಯುಜಿಡಿ ಸಂಪರ್ಕ, ಪುರಭವನದ ಬಾಡಿಗೆ, ಮೈದಾನದ ಬಾಡಿಗೆ ಸಹಿತ ಪಾಲಿಕೆಯ 10 ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸುವುದು ಉದ್ದೇಶವಾಗಿತ್ತು. ಆದರೆ ಬೇರೆ ಬೇರೆ ನೆಪಗಳನ್ನು ಹೇಳುತ್ತಾ ಮುಂದೂಡಲಾಗುತ್ತಿದೆ.

ಇ-ಖಾತ ಸೇವೆ ಆರಂಭ
ಮಹಾನಗರ ಪಾಲಿಕೆಯ ಆನ್‌ಲೈನ್‌ ವ್ಯವಸ್ಥೆ ಕೊನೆಯ ಹಂತದಲ್ಲಿದೆ. ಮುಂಬರುವ ಕೌನ್ಸಿಲ್‌ ಸಭೆಯಲ್ಲಿ ಟೆಂಡರ್‌ ಕರೆಯುತ್ತೇವೆ. ಬಳಿಕ ಕೆಲವೇ ತಿಂಗಳುಗಳಲ್ಲಿ ಈ ಸೇವೆ ಸಾರ್ವಜನಿಕರಿಗೆ ಸಿಗಲಿವೆ. ಸದ್ಯ ಇ-ಖಾತೆ ಸೇವೆ ಆರಂಭವಾಗಿದೆ.
 - ದಿವಾಕರ ಪಾಂಡೇಶ್ವರ, ಪಾಲಿಕೆ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next