Advertisement

ಮಂಗಳೂರು ರಥಬೀದಿ: ಶ್ರೀ ಶಾರದಾ ಮಾತೆಯ ಶತಮಾನೋತ್ಸವ ಸಂಭ್ರಮ

12:52 PM Sep 30, 2022 | Team Udayavani |

ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಠಾರದಲ್ಲಿ ಜರಗುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವಕ್ಕೆ ಈಗ 100ರ ಅಂದರೆ ಶತಮಾನೋತ್ಸವದ ಸಂಭ್ರಮ. ದೇಶವಿದೇಶಗಳಿಂದ ಬಂದಿರುವ ಅಪಾರ ಭಕ್ತ ಜನಸಾಗರದ ಸಮ್ಮುಖದಲ್ಲಿ ಬಹು ಮಾಧ್ಯಮಗಳ ಮೂಲಕ ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಓದುತ್ತಿರುವ ವೀಕ್ಷಿಸುತ್ತಿರುವ ಈ ಮಹೋನ್ನತ ಉತ್ಸವ ಕಳೆದ ಸೆಪ್ಟೆಂಬರ್‌ 25ರಂದು ಹೊರೆಕಾಣಿಕೆ ಸಮರ್ಪಣೆಯ
ಮೂಲಕ ಆರಂಭವಾಗಿದೆ. ಅಕ್ಟೋಬರ್‌ 6ರಂದು ಸಂಪನ್ನಗೊಳ್ಳಲಿದೆ.

Advertisement

ಪರಮಪೂಜ್ಯ ಶ್ರೀ ಕಾಶೀಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆರ್ಶೀವಚನ, ಮಾರ್ಗದರ್ಶನ ದಿವ್ಯ ಉಪಸ್ಥಿತಿ ಈ ಮಹೋತ್ಸವಕ್ಕೆ ಮತ್ತಷ್ಟು ಆಧ್ಯಾತ್ಮಿಕ ಮೆರುಗು ತುಂಬಿದೆ. ಮಂಗಳೂರು ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವ ಸಮಿತಿ ಮತ್ತು ಮಂಗಳೂರು ರಥಬೀದಿ ಶ್ರೀ ಶಾರದಾ ಮಹೋತ್ಸವ ಸಮಿತಿಯ ಸರ್ವರು, ಭಕ್ತಾಭಿಮಾನಿಗಳಾದ ಸ್ವಯಂ ಸೇವಕರು ಅಹರ್ನಿಶಿಯಾಗಿ ಇಲ್ಲಿ ಸೇವಾ ನಿರತರಾಗಿದ್ದಾರೆ.

ಜಗತ್ತಿಗೆ ಜ್ಞಾನದ ರೂಪದಲ್ಲಿ ಪ್ರತ್ಯಕ್ಷರಾಗಿರುವ ವೀಣೆ, ವೇದ ಮತ್ತು ಸ್ಫಟಿಕ ಜಪಮಾಲೆಗಳನ್ನು ತನ್ನ ಕೈಯಲ್ಲಿ ಹಿಡಿದಿರುವ; ವರ್ಣದಲ್ಲಿ ಶುಭ್ರವಾಗಿರುವ, ಪ್ರಥಮ ಮತ್ತು ಅಗ್ರಗಣ್ಯವಾದ ದೈವಿಕ ಶಕ್ತಿಯಾಗಿರುವ ಶ್ರೀ ಸರಸ್ವತಿ ದೇವಿಯು ನಮ್ಮನ್ನು ಸದಾ ಆಶೀರ್ವದಿಸಲಿ. ಶ್ರೀ ಶಾರದೆಯು ನಮ್ಮ ಅಜ್ಞಾನವನ್ನು ನಿವಾರಿಸಿ, ಬುದ್ಧಿಶಕ್ತಿ ದಯಪಾಲಿಸಿ ನಮ್ಮಮ್ಮ ಶಾರದೆ ನಮ್ಮೆಲ್ಲರ ಮನೆಯ ಬೆಳಕಾಗಲಿ ಎಂಬ ಪ್ರಾರ್ಥನೆಯೊಂದಿಗೆ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯರ ಮಠದ
ವಸಂತಮಂಟಪದಲ್ಲಿ ಕಳೆದ ಒಂದು ಶತಮಾನದಿಂದ ಆರಾಧಿಸಿಕೊಂಡು ಬರಲಾಗುತ್ತಿದೆ.

ಈಗ ಈ ಶತಮಾನದ ಸಂಭ್ರಮಾಚರಣೆ ನಮ್ಮೆಲ್ಲರ ಪಾಲಿನ ಸೌಭಾಗ್ಯ ಎನ್ನುತ್ತಾರೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಪಂಡಿತ್‌ ಎಂ.ನರಸಿಂಹ ಆಚಾರ್ಯ ಅವರು. ಶ್ರೀ ಶಾರದೋತ್ಸವವು ಧಾರ್ಮಿಕ, ಆಧ್ಯಾತ್ಮಿಕ ಆಚರಣೆಯೊಂದಿಗೆ ಸಾಮಾಜಿಕ, ಕಲೆ, ಸಂಘಟನೆ ಮತ್ತು ಸಾಂಸ್ಕೃತಿಕ ಮಹೋತ್ಸವವೇ ಆಗಿದೆ. ಇಲ್ಲಿನ ಸರಸ್ವತಿ ಕಲಾಮಂಟಪದಲ್ಲಿ ಪ್ರತೀ ದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ನೂರಾರು ಮಂದಿ ಕಲಾವಿದರು ಭಾಗವಹಿಸುತ್ತಾರೆ.

ಶತಮಾನಕ್ಕೆ ಮೆರುಗು ತುಂಬಿದ ಚಿನ್ನದ ವೀಣೆ, ನವಿಲು, ಸೀರೆ
ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯಮಠದ ವಠಾರದಲ್ಲಿ ನಡೆಯುತ್ತಿರುವ ಮಂಗಳೂರು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಶತಮಾನೋತ್ಸವಕ್ಕೆ ಭಕ್ತರು ವಿಶೇಷವಾದ ಸ್ವರ್ಣ ರಜತ ಸಂಭ್ರಮ ತುಂಬಿದ್ದಾರೆ. ಸುಮಾರು ಆರು ಕಿಲೋ ಬೆಳ್ಳಿ ಮತ್ತು 500 ಗ್ರಾಂ ಚಿನ್ನದಿಂದ ಶಾರದೆಗೆ ಸ್ವರ್ಣವೀಣೆ ಸಮರ್ಪಣೆ ಆಗಿದೆ.

Advertisement

750 ಗ್ರಾಂ ಚಿನ್ನದ ನವಿಲನ್ನು ನೀಡಲಾಗಿದೆ. 16 ಪವನ್‌ಚಿನ್ನದ ಕೈಕಡಗವನ್ನು ಓರ್ವಭಕ್ತ ಕುಟುಂಬ ಸಮರ್ಪಿಸಿದ್ದಾರೆ. 35 ಕಿ.ಲೋ. ಬೆಳ್ಳಿಯಿಂದ ರಜತಸಿಂಹಾಸನ, ಪೀಠಪ್ರಭಾವಳಿ; 21 ಪವನ್‌ ಚಿನ್ನದಿಂದ ಸ್ವರ್ಣ ಆರತಿ, ಈ ಬಾರಿಯ ವಿಶೇಷವಾಗಿ 8 ಲಕ್ಷ ರೂ. ಮೌಲ್ಯದ ಸ್ವರ್ಣಜರಿ ಮತ್ತು 1800 ಸ್ವರ್ಣ ಹೂವಿನಿಂದ ತಯಾರಿಸಲಾದ ಸೀರೆಯನ್ನು ಶೋಭಾಯಾತ್ರೆಯ ದಿನದಂದು ಶ್ರೀ ಶಾರದೆಗೆ ಉಡಿಸಲಾಗುತ್ತದೆ. ಶ್ರೀ ಶಾರದಾ ಮಹೋತ್ಸವಕ್ಕೆ ಈ ಬಾರಿ ಆಚಾರ್ಯ ಮಠದಲ್ಲಿ ನೂತನ ವಸಂತ ಮಂಟಪವನ್ನು ನಿರ್ಮಿಸಲಾಗಿದೆ.

ಬರಹ:
ಮನೋಹರ ಪ್ರಸಾದ್‌
ವಿಶ್ರಾಂತ ಸಹಾಯಕ
ಸಂಪಾದಕರು
ಉದಯವಾಣಿ

Advertisement

Udayavani is now on Telegram. Click here to join our channel and stay updated with the latest news.

Next