ಮಂಗಳೂರು: ನಗರದಲ್ಲಿ ನಡೆದಿದ್ದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಘಟನಾ ಸ್ಥಳದಿಂದ ಸಿಸಿ ಕ್ಯಾಮೆರಾ ಫೂಟೇಜ್ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ದೃಷ್ಟಿಯಿಂದ ಕಲ್ಲು ತೂರಾಟ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ, ಫೋಟೊಗಳಿದ್ದರೆ ಕಳುಹಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರು ಟ್ವೀಟ್ ಮೂಲಕ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿ ಸಾವಿರಕ್ಕೂ ಅಧಿಕ ದಾಖಲೆಗಳು ಪೊಲೀಸರಿಗೆ ಲಭಿಸಿವೆ ಎನ್ನಲಾಗಿದ್ದು, ಅದನ್ನು ಕ್ರೋಢೀಕರಿಸುವ ಕೆಲಸವನ್ನು ತಂತ್ರಜ್ಞರು ಮಾಡುತ್ತಿದ್ದಾರೆ. ಇನ್ನೊಂದೆಡೆ ಪೊಲೀಸರು ಘಟನೆಗೆ ಸಂಬಂ ಧಿಸಿದಂತೆ ಕೆಲವು ಫೋಟೊ, ವಿಡಿಯೋಗಳನ್ನು ಮಂಗಳೂರು ಸಿಟಿ ಪೊಲೀಸ್‌ನ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿದ್ದು, ಅವು ವೈರಲ್ ಆಗಿವೆ. ದೃಶ್ಯ ಮಾಧ್ಯಮದಲ್ಲಿಯೂ ಪ್ರಸಾರವಾಗಿವೆ.
24 ಪ್ರಕರಣ ದಾಖಲು: ಡಿ.19ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ 350ಕ್ಕೂ ಅಧಿಕ ಸಿಸಿ ಕ್ಯಾಮೆ ರಾ ಫೂಟೇಜ್ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಬಂದರು ಠಾಣೆಯಲ್ಲಿ 10, ಪಾಂಡೇಶ್ವರ ಠಾಣೆಯಲ್ಲಿ 13, ಗ್ರಾಮಾಂತರ 1 ಸೇರಿದಂತೆ ಒಟ್ಟು 24 ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 8ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
ವಿಡಿಯೋ ದಾಖಲೆ, ಸಿಸಿ ಕ್ಯಾಮೆರಾ ಫೂಟೇಜ್ ಆಧರಿಸಿ ಪೊಲೀಸರು ಈಗಾಗಲೇ 100ಕ್ಕೂ ಅಧಿಕ ಮಂದಿಯ ಚಹರೆ ಗುರುತಿಸಲಾಗಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಇಲಾಖೆ ಮತ್ತು ಖಾಸಗಿಯ ವರಿಂದ ಪಡೆದಿರುವ ಸಿಸಿ ಕ್ಯಾಮೆ ರಾ, ವಿಡಿಯೋ, ಛಾಯಾಚಿತ್ರ ದಾಖಲೆಗಳನ್ನು ಹಿರಿಯ ಅಧಿಕಾರಿಗಳ ನಿರ್ದೇಶನ ಮೇರೆಗೆ ಬೆಂಗಳೂರಿನ ಅನುಭವಿ ತಂತ್ರಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ.
ಸೈಬರ್ ಕ್ರೈಂ ಅಪರಾಧ ವಿಭಾಗ ತಂಡ, ಇಂಟೆಲಿಜೆನ್ಸ್ ತಂಡ, ತಾಂತ್ರಿಕ ತಂಡಗಳು, ಸಿಸಿಆರ್‌ಬಿ, ಸಿಸಿಬಿ ತಂಡಗಳು ತನಿಖೆಗೆ ಸಹಕಾರ ನೀಡುತ್ತಿವೆ ಎಂದು ತಿಳಿದು ಬಂದಿದೆ. ಈ ನಡುವೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಇನ್‌ಸ್ಪೆಕ್ಟರೊಬ್ಬರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದರ ವಿರುದ್ಧ ಬಂದರು ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇನ್‌ಸ್ಪೆಕ್ಟರ್ ಠಾಣಾ ಕರ್ತವ್ಯದಿಂದ ಬಿಡುಗಡೆ: ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವು ಪ್ರಚೋದನಕಾರಿ ಮಾತುಗಳನ್ನು ಆಡಿರುವ ಆರೋಪ ಎದುರಿಸುತ್ತಿರುವ ಕದ್ರಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಶಾಂತಾರಾಮ ಅವರನ್ನು ಠಾಣಾ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಈ ವಿಡಿಯೋ ತುಣುಕಿನ ಬಗ್ಗೆ ತನಿಖೆ ನಡೆಯುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಠಾಣಾ ಕರ್ತವ್ಯದಿಂದ ಬಿಡುಗಡೆ ಮಾಡಿ ಕಮಿಷನರ್ ಆದೇಶ ಹೊರಡಿಸಿದ್ದಾರೆಂದು ತಿಳಿದು ಬಂದಿದೆ.