Advertisement

ರಾಜಕಾಲುವೆ ಒತ್ತುವರಿ ಆಗಿದ್ದು ನಿಜ; ಮಧ್ಯಾಂತರ ವರದಿಯಲ್ಲಿ ಉಲ್ಲೇಖ!

12:37 PM Jun 07, 2018 | |

ಮಹಾನಗರ : ನಗರದ ವ್ಯಾಪ್ತಿಯ ಕೆಲವು ರಾಜಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ನಿಜ! ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಸಮೀಕ್ಷೆ ನಡೆಸಿದ ಸಮಿತಿಯು ಬುಧವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರಿಗೆ ಸಲ್ಲಿಸಿದ ವರದಿಯಲ್ಲಿ ಇದು ಸ್ಪಷ್ಟವಾಗಿದೆ.

Advertisement

ನಗರದ ಕೊಟ್ಟಾರಚೌಕಿ, ಪಂಪ್‌ ವೆಲ್‌, ಅಳಕೆ, ಸುರತ್ಕಲ್‌ ಹಾಗೂ ಅತ್ತಾವರ ಭಾಗದಲ್ಲಿ ಸಮೀಕ್ಷೆ ನಡೆಸಿದ ತಂಡವು ವರದಿಯನ್ನು ಸಿದ್ಧಪಡಿಸಿತ್ತು. ಕೊಟ್ಟಾರ ಸೇರಿದಂತೆ ಕೆಲವು ಕಡೆಗಳಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿದ್ದು ಕಾಣಿಸಿದ್ದು, ಈ ಬಗ್ಗೆ ಪೂರ್ಣ ಸರ್ವೆ ನಡೆಸಲು ಇನ್ನಷ್ಟು ಅವಕಾಶ ನೀಡುವಂತೆ ಸಮಿತಿ ಜಿಲ್ಲಾಡಳಿತವನ್ನು ಕೋರಿದೆ. ಚರಂಡಿ ಸಮಸ್ಯೆ ಮಂಗಳೂರಿನಲ್ಲಿ ಉಲ್ಬಣಗೊಂಡ ಕಾರಣದಿಂದ ಇದನ್ನು ವಿಸ್ತಾರವಾಗಿ ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವ ಪ್ರದೇಶದಲ್ಲಿ ಒತ್ತುವರಿ ಆಗಿದೆ? ಯಾವ ರೀತಿಯಲ್ಲಿ ಒತ್ತುವರಿ ಮಾಡಲಾಗಿದೆ? ಇದರಿಂದ ಯಾವ ಸಮಸ್ಯೆ ಆಗಿದೆ ಎಂಬ ವಿಚಾರವನ್ನು ವರದಿಯಲ್ಲಿ ನೀಡಲಾಗಿದೆ. ಜತೆಗೆ, ನಗರದ ಚರಂಡಿಗಳು ಎದುರಿಸುವ ಸಮಸ್ಯೆ ಏನು? ಅಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಮಸ್ಯೆ ಏನು? ಎಂಬ ವಿಚಾರವನ್ನು ಕೂಡ ವರದಿಯಲ್ಲಿ ನಮೂದಿಸಲಾಗಿದೆ.

ಡ್ರೈನೇಜ್‌, ಪ್ಲಾಸ್ಟಿಕ್‌ನಿಂದ ಸಂಚಕಾರ
ರಾಜಕಾಲುವೆ ಒತ್ತುವರಿ ವರದಿ ಸಮಿತಿಯು ನಗರದ ವಿವಿಧ ಕಡೆ ಭೇಟಿ ಸಂದರ್ಭ ಮೇಲ್ನೋಟಕ್ಕೆ ಒತ್ತುವರಿ ದೊಡ್ಡ ಸಮಸ್ಯೆಯಾಗಿ ಕಂಡು ಬಂದಿದೆ. ಉಳಿದಂತೆ ರಾಜಕಾಲುವೆ, ಪ್ರಮುಖ ತೋಡುಗಳಲ್ಲಿರುವ ಅಡ್ಡಾದಿಡ್ಡಿ ಪೈಪ್‌ ಗಳು, ಡ್ರೈನೇಜ್‌ಗಳು ದೊಡ್ಡ ಮಟ್ಟದಲ್ಲಿ ಮಳೆ ನೀರಿಗೆ ಅಡಚಣೆಯಾಗಿದೆ. ಇದು ಮಾತ್ರವ್ಲಲದೆ ರಾಜಕಾಲುವೆಯಲ್ಲಿ ಹೂಳೆತ್ತದೆ ದೊಡ್ಡದೊಡ್ಡ ಪೊದೆಗಳಿದ್ದು ಇದರಿಂದ ಪ್ಲಾಸ್ಟಿಕ್‌ ತೊಟ್ಟೆ, ಬಾಟಲಿ ರಾಶಿಗಳು, ಬ್ಯಾಗ್‌ಗಳು ತಡೆನಿಂತು ನೀರು ಹರಿವಿಕೆಗೆ ಅಡಚಣೆಯಾಗಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಪಂಪ್‌ವೆಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾದ ಅಡೆತಡೆಗಳು, ಅತ್ತಾವರದಲ್ಲಿ ಡ್ರೈನೈಜ್‌, ಪೈಪ್‌ಲೈನ್‌, ರೈಲ್ವೇ ಬ್ರಿಡ್ಜ್ನಿಂದ ಈ ವ್ಯಾಪ್ತಿಯಲ್ಲಿ ತೊಡಕಾಗಿರುವುದು ಸಮಿತಿ ಗಮನಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.

27 ಪುಟಗಳ ಮಧ್ಯಾಂತರ ವರದಿ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್‌ ಡಾ| ಭಾಸ್ಕರ್‌ ಎನ್‌. ನೇತೃತ್ವದಲ್ಲಿ ಮಹಾನಗರಪಾಲಿಕೆ ಕಂದಾಯ ವಿಭಾಗದ ಮುಖ್ಯಸ್ಥೆ ಗಾಯತ್ರಿ ನಾಯಕ್‌, ಪ್ರೊಬೆಷನರಿ ಎಸಿ ಮದನ್‌ ಮೋಹನ್‌, ಕೆಯುಐಡಿಎಫ್‌ಸಿ ಮುಖ್ಯಾಧಿಕಾರಿ ಜಯಪ್ರಕಾಶ್‌, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್‌ ಮೋಹನ್‌ ಅವರನ್ನೊಳಗೊಂಡ ಐದು ಮಂದಿಯ ಸಮಿತಿ ನಗರದ ವಿವಿಧೆಡೆ ನಡೆದಿರುವ ರಾಜಕಾಲುವೆಗಳ ಒತ್ತುವರಿ ಕುರಿತು ಛಾಯಾಚಿತ್ರ ಸಹಿತ ವರದಿಯೊಂದನ್ನು ಸಿದ್ಧಪಡಿಸಿ 27 ಪುಟಗಳ ವರದಿಯನ್ನು ಮಂಗಳವಾರ ಸಲ್ಲಿಸಿದೆ. ಸಮಿತಿಯು ಸಮಗ್ರ ವರದಿ ತಯಾರಿಸಲು 2 ವಾರಗಳ ಕಾಲಾವಕಾಶ ಕೇಳಿದೆ. ಇದು ಮಾತ್ರವಲ್ಲದೆ 4ಮಂದಿ ಸಿಟಿ ಸರ್ವೇಯರ್‌ ನೀಡುವಂತೆ ಆಗ್ರಹ ಸಲ್ಲಿಸಿದೆ. ಮುಂದಿನ ಸರ್ವೆಗೆ ಎನ್‌ ಐಟಿಕೆ ತಂತ್ರಜ್ಞರ ಸಹಕಾರ ಕೇಳಿದ್ದು ಈ ಬೇಡಿಕೆಗಳಿಗೆಲ್ಲ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಸಮ್ಮತಿ ಸೂಚಿಸಿದ್ದಾರೆ.

Advertisement

ಉಪಗ್ರಹ ಆಧಾರಿತ ಸರ್ವೆ!
ಉಪಗ್ರಹ ಚಿತ್ರಗಳನ್ನು ಬಳಸಿ ಕೂಡ ರಾಜಕಾಲುವೆಗಳು ಒತ್ತುವರಿ ಪರಿಶೀಲನೆ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. 10 ವರ್ಷಗಳ ಹಿಂದೆ ರಾಜ ಕಾಲುವೆ ಸ್ಥಿತಿಗತಿ ಮತ್ತು ಪ್ರಸ್ತುತದ ಸ್ಥಿತಿಯ ಉಪಗ್ರಹ ಇಮೇಜ್‌ಗಳಿಂದ ಪರಿಶೀಲನೆ ನಡೆಸಿ ತೆರವು ಕಾರ್ಯಾಚರಣೆ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಕೆಲವು ಪ್ರದೇಶಗಳಲ್ಲಿ ಮಳೆ ನೀರು ಹರಿದು ಹೋಗುವ ತೋಡುಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಸಮಿತಿ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮಳೆಗಾಲಕ್ಕೆ ಸಂಬಂಧಪಟ್ಟಂತೆ ಯೋಜನೆಗಳನ್ನು ಹೊಂದಿಸಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ನೆರೆ ಪರಿಸ್ಥಿತಿ ಸೃಷ್ಟಿಯಾಗಲು ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

ಮೇಲ್ನೋಟಕ್ಕೆ ಒತ್ತುವರಿ ಸ್ಪಷ್ಟ
ರಾಜಕಾಲುವೆ ಕುರಿತಂತೆ ಮಧ್ಯಾಂತರ ವರದಿಯನ್ನು ಈಗಾಗಲೇ ಜಿಲ್ಲಾಧಿಕಾರಿ ಯವರಿಗೆ ಸಲ್ಲಿಸಲಾಗಿದ್ದು, ಪೂರ್ಣ ವರದಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶವನ್ನು ಕೇಳಿದ್ದೇವೆ. ಸಮತಿಯು ಪರಿಶೀಲನೆ ನಡೆಸಿದ ಪ್ರಕಾರ ಕೆಲವು ಕಡೆಗಳನ್ನು ರಾಜಕಾಲುವೆ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತಂತೆ ವರದಿಯಲ್ಲಿ ಉಲ್ಲೇಖೀಸಲಾಗಿದೆ. 
 - ಡಾ| ಭಾಸ್ಕರ್‌, ಆಯುಕ್ತರು,
    ನಗರಾಭಿವೃದ್ಧಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next