ಉಳ್ಳಾಲ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ಮಗುಚಿ ಆರು ಮಂದಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಮತ್ತು ಮಂಗಳೂರು ಬಂದರಿನ ನಡುವಿನ ಆಳ ಸಮುದ್ರದಲ್ಲಿ ನಿನ್ನೆ( ನ.30) ತಡರಾತ್ರಿ ಸಂಭವಿಸಿದ್ದು, ಮುಳುಗಿರುವ ಬೋಟ್ ನಲ್ಲಿ ಸಿಲುಕಿಕೊಂಡು ನಾಪತ್ತೆಯಾಗಿರುವವರ ರಕ್ಷಣಾ ಕಾರ್ಯಾಚರಣೆ ಆಳ ಸಮುದ್ರದಲ್ಲಿ ನಡೆಯುತ್ತಿದೆ
ಹೊಸಬೆಟ್ಟು ಮೂಲದ ಮತ್ಸೋದ್ಯಮಿಗೆ ಸೇರಿದ ಶ್ರೀರಕ್ಷಾ ಬೋಟ್ ದುರಂತಕ್ಕೀಡಾಗಿದೆ. ಸೋಮವಾರ ನಸುಕಿನ ಜಾವ 5 ರ ವೇಳೆಗೆ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ 22 ಮಂದಿಯಿದ್ದ ಬೋಟ್ ತೆರಳಿತ್ತು. ಬೆಳಿಗ್ಗಿನಿಂದ ಸಂಜೆಯವರೆಗೆ ಮೀನುಗಾರಿಕೆ ನಡೆಸಿ, ಸೋಮವಾರ ತಡರಾತ್ರಿ ಮೀನುಗಾರಿಕಾ ಬಂದರಿಗೆ ಆಗಮಿಸಬೇಕಿತ್ತು, ಆದರೆ ಇಂದು ಮುಂಜಾನೆಯವರೆಗೆ ಬೋಟ್ ವಾಪಸ್ಸು ಧಕ್ಕೆ ತಲುಪದೇ ಇದ್ದಾಗ ಬೋಟ್ ನೋಡಿಕೊಳ್ಳುವ ರೈಟರ್ ಮೀನುಗಾರರಿಗೆ ಕರೆ ಮಾಡಿದ್ದು ಎಲ್ಲರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಕ್ಷಣವೇ ಬೋಟಿನ ವಯರ್ ಲೆಸ್ ಗೆ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗದೇ ಇದ್ದಾಗ ಇತರ ಮೀನಗಾರಿಕಾ ಬೋಟ್ ನವರಿಗೆ ಮಾಹಿತಿ ನೀಡಿ ಬೋಟ್ ನಾಪತ್ತೆಯಾದ ಕುರಿತು ತಿಳಿಸಿದ್ದು ಪರ್ಸೀನ್ ಬೋಟ್ ಗಳು, ಕರಾವಳಿ ರಕ್ಷಣೆ ಪಡೆ ಬೋಟ್ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದರು.
ಆಳ ಸಮುದ್ರದಲ್ಲಿ ಬಲೆ ಪತ್ತೆ: ದುರಂತಕ್ಕೀಡಾದ ಬೋಟ್ ಸೋಮವಾರ ಮೀನುಗಾರಿಕೆ ನಡೆಸಿ ಬಲೆ ಎಳೆಯುತ್ತಿದ್ದನ್ನು ಇತರ ಪರ್ಸೀನ್ ಬೋಟ್ ಗಳ ಮೀನುಗಾರರು ನೋಡಿದ್ದರು. ಮಂಗಳವಾರ ಬೋಟ್ ನಾಪತ್ತೆಯಾಗಿದೆ ಎಂದು ಮಾಹಿತಿ ತಿಳಿದಾಕ್ಷಣ ಮೀನುಗಾರರು ಅದೇ ಪ್ರದೇಶದ ಆಳ ಸಮುದ್ರದಲ್ಲಿ ಹುಡುಕಾಟ ನಡೆಸಿದಾಗ ಬಲೆ ಪತ್ತೆಯಾಗಿದ್ದು, ಅದೇ ಪ್ರದೇಶದಲ್ಲಿ ಬೋಟ್ ಮುಳುಗಡೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದು ಹುಡುಕಾಟ ನಡೆಯುತ್ತಿದೆ.
ಡಿಂಗಿಯಲ್ಲಿ ಪ್ರಾಣ ಉಳಿಸಿಕೊಂಡ 16 ಮಿನುಗಾರರು: ಶ್ರೀರಕ್ಷಾ ಪರ್ಸೀನ್ ಬೋಟ್ ನಲ್ಲಿ 22 ಮೀನುಗಾರರು ಸೋಮವಾರ ಬೆಳಗ್ಗೆ 5 ಗಂಟೆಗೆ ಮಂಗಳೂರು ಮೀನುಗಾರಿಕಾ ಧಕ್ಕೆಯಿಂದ ಹೊರಟಿದ್ದರು. 7 ಗಂಟೆಗೆ ಆಳ ಸಮುದ್ರದಲ್ಲಿ ಮೀನಿಗೆ ಬಲೆ ಬೀಸಿದ್ದು, ಮದ್ಯಾಹ್ನದ ವೇಳೆಗೆ ಬಲೆ ಎಳೆಯುವ ಕಾರ್ಯ ಆರಂಭಿಸಿದ್ದಾರೆ. ಸಂಜೆ ವೇಳೆಗೆ ಬಲೆ ಎಳೆದು ಬಲೆಯಿಂದ ಮೀನು ಬೇರ್ಪಡಿಸುವ ಕಾರ್ಯ ಆರಂಬಿಸಿದ್ದು, ತಡರಾತ್ರಿ ವೇಳೆಗೆ ಮೀನು ಬೇರ್ಪಡಿಸಿ ವಾಪಾಸ್ ಹೊರಡಲು ಅನುವಾದಾಗ ಬಲವಾದ ಗಾಳಿ ಬೀಸಿದ್ದು, ಬೋಟ್ ನಲ್ಲಿ ಮೀನು ಹೆಚ್ಚಿದ್ದ ಕಾರಣ ಗಾಳಿಗೆ ಸಿಲುಕಿ ಬೋಟ್ ಮಗುಚಿ ಬಿದ್ದಿದೆ. ಈ ಸಂರ್ಭದಲ್ಲಿ ಬೋಟಿನ ಮೇಲಿದ್ದ 16 ಮಂದಿ ಸಮುದ್ರಕ್ಜೆ ಹಾರಿ ಬೋಟ್ ಗೆ ಆಳವಡಿಸಿದ್ದ ಸಣ್ಣ ದೋಣಿ(ಡಿಂಗಿ) ಹತ್ತಿ ಪ್ರಾಣ ಉಳಿಸಿಕೊಂಡರೆ, ಬೋಟ್ ನ ಕ್ಯಾಬಿನ್ ಒಳಗಡೆ ಕುಳಿತಿದ್ದ 6 ಮಂದಿ ಬೋಟ್ ನೊಳಗೆ ಸಿಲುಕಿಕೊಂಡಿದ್ದು, ಇವರು ಪಾರಾಗಿ ಈಜಿ ದಡ ಸೇರಿದ್ದಾರಾ ? ಅಥವಾ ಬೊಟ್ ನೊಳಗೆ ಸಿಲುಕಿದ್ದಾರಾ ? ಎನ್ನುವ ಮಾಹಿತಿ ಇಲ್ಲ. ಡಿಂಗಿಯಲ್ಲಿದ್ದ 16 ಮಂದಿಯನ್ನು ನವ ಮಂಗಳೂರು ಬಂದರಿನಿಂದ 15 ನಾಟಿಕಲ್ ಮೈಲ್ ದೂರದಲ್ಲಿ ಆಳ ಸಮುದ್ರದಲ್ಲಿ ಪತ್ತೆ ಹಚ್ಚಿ ರಕ್ಷಣೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಮುಳುಗು ತಜ್ಞರು: ಬೋಟ್ ಮುಳುಗಿದೆ ಎಂದು ಶಂಕೆ ವ್ಯಕ್ತವಾಗಿರುವ ಆಳ ಸಮುದ್ರಕ್ಕೆ ಮುಳುಗು ತಜ್ಞರು ಆಗಮಿಸಿದ್ದುಕಾರ್ಯಾಚರಣೆ ಮುಂದುವರೆದಿದೆ. ಸ್ಥಳೀಯ ಪರ್ಸೀನ್ ಬೋಟ್ ಗಳಲ್ಲಿ ಮೀನುಗಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ನಾಪತ್ತೆಯಾದ ಮೀನುಗಾರರು
ಪ್ರೀತಂ ಬೊಕ್ಕಪಟ್ಣ((25)
ಚಿಂತನ್ ಬೊಕ್ಕಪಟ್ಣ(21)
ಪಾಂಡುರಂಗ ಬೊಕ್ಕಪಟ್ಣ(58)
ಹಸೈನಾರ್ ಕಸ್ಬಾ ಬೆಂಗರೆ(25)
ಅನ್ಸಾರ್ ಕಸ್ಬಾ ಬೆಂಗ್ರೆ(31)
ಜಿಯಾವುಲ್ಲಾ ಕಸ್ಬಾ ಬೆಂಗ್ರೆ(32)
ಶ್ರಿರಕ್ಷಾ ಬೋಟಿನ ಬಲೆಯನ್ನು ತುಂಡು ಮಾಡಿ ಧಕ್ಕೆಗೆ ತರಲಾಯಿತು
ಇದನ್ನೂ ಓದಿ: ಮಾಣಿ – ಬುಡೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ: ಚಾಲಕ ಅಪಾಯದಿಂದ ಪಾರು
ಇದನ್ನೂ ಓದಿ: ಉಡುಪಿ: ಲಕ್ಷದೀಪದ ತೆಪ್ಪೋತ್ಸವಕ್ಕೆ ಯಕ್ಷ ವೈಭವದ ಮೆರುಗು