Advertisement
ಪಾಲಿಕೆ ಪರಿಷತ್ 20ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಗುರು ವಾರ ಚುನಾವಣೆ ನಡೆಯಿತು. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಭಾಸ್ಕರ್ ಕೆ. ಹಾಗೂ ಬಿಜೆಪಿಯಿಂದ ಸುರೇಂದ್ರ ಅವರು ಸ್ಪರ್ಧಿಸಿದ್ದರು. ಭಾಸ್ಕರ್ ಅವರು ಸುರೇಂದ್ರ ವಿರುದ್ಧ 18 ಮತ ಗಳ (ಕೈ ಎತ್ತುವ ಮೂಲಕ) ಅಂತರ ದಿಂದ ಜಯ ಸಾಧಿಸಿ ಮೇಯರ್ ಆಗಿ ಚುನಾಯಿತರಾದರು.60 ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಓರ್ವ ಸಂಸದ, ಇಬ್ಬರು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರು ಸಹಿತ ಒಟ್ಟು 65 ಮಂದಿಗೆ ಮತದಾನ ಮಾಡಲು ಅವಕಾಶವಿದೆ. ಇದರಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಮೊದಿನ್ ಬಾವಾ, ವಿಧಾನ ಪರಿಷತ್ ಸದಸ್ಯರಾದ ಕ್ಯಾ| ಗಣೇಶ್ ಕಾರ್ಣಿಕ್, ಬಿಜೆಪಿ ಸದಸ್ಯ ಹರೀಶ್ ಶೆಟ್ಟಿ ಗೈರು ಹಾಜರಾಗಿದ್ದರು. ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹಾಗೂ ಶಾಸಕ ಜೆ.ಆರ್. ಲೋಬೋ ಮತದಾನ ಮಾಡಿದರು.
Related Articles
ನೂತನ ಮೇಯರ್ ಭಾಸ್ಕರ್ ಅವರು ಪದವು ವಾರ್ಡ್ ಸದಸ್ಯ ರಾಗಿದ್ದು, ಪಾಲಿಕೆಗೆ 3ನೇ ಅವಧಿಗೆ ಆಯ್ಕೆಯಾದವರು. ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅವರು ವೃತ್ತಿಯಲ್ಲಿ ಉದ್ಯಮಿ. ಈ ಹಿಂದೆ ನಗರ ಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎನ್‌ಎಂಪಿಟಿ ಟ್ರಸ್ಟಿ, ರಾಜ್ಯ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯರಾಗಿರುವ ಭಾಸ್ಕರ ಕೆ. ಅವರು 20 ವರ್ಷಗಳಿಂದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸರಕಾರದಿಂದ ನಿಯೋಜಿತ ಏಕೈಕ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ನಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿ 60 ವಾರ್ಡ್ ಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಅರಿತು ಪರಿಹರಿಸುವ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
Advertisement