Advertisement
ಬಜಪೆಯ ದಿನೇಶ್ ರೈ, ಮೂಡುಬಿದಿರೆಯ ಜಗದೀಶ್ ಪೂಜಾರಿ, ಕಿನ್ನಿಗೋಳಿಯ ಡೆಸ್ಮಂಡ್ ಡೇವಿಸ್ ಡಿ’ಸೋಜಾ, ಉಳ್ಳಾಲದ ಪ್ರಸಾದ್ ಆನಂದ್ ಮತ್ತು ಮಂಗಳೂರು ಬಿಜೈಯ ಶ್ರವಣ್ ಅಂಚನ್ ಏರ್‌ಲಿಫ್ಟ್ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯವರು.
Related Articles
Advertisement
ಭ| ತೆರೆಸಾ ಅವರು ಇಟೆಲಿಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದು, ಈ ಕುರಿತಂತೆ ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಕುಟುಂಬಸ್ಥರ ಪ್ರಾರ್ಥನೆ:
ಧರ್ಮ ಗುರುಗಳಾದ ವಂ| ಜೆರೋಮ್ ಸಿಕ್ವೇರಾ ಮತ್ತು ವಂ| ರಾಬರ್ಟ್ ಕ್ಲೈವ್ ಹಾಗೂ ಭಗಿನಿ ತೆರೆಸಾ ಕ್ರಾಸ್ತಾ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸಾಗುವಂತೆ ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ. ಶೀಘ್ರವೇ ಇವರ ಏರ್‌ಲಿಫ್ಟ್ ಸಂಭವದ ಬಗ್ಗೆ ಕುಟುಂಬಸ್ಥರು ಆಶಾವಾದ ವ್ಯಕ್ತಪಡಿಸುತ್ತಿದ್ದಾರೆ.
ಪುತ್ತೂರು ಮೂಲದ ವ್ಯಕ್ತಿ ಸುರಕ್ಷಿತ:
ಪುತ್ತೂರು ಮೂಲದ ವ್ಯಕ್ತಿ ಅಮೆರಿಕದ ಮಿಲಿಟರಿ ನೆಲೆಯಲ್ಲಿದ್ದು, ಅವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಮಿಲಿಟರಿ ಕ್ಯಾಂಟೀನ್‌ನಲ್ಲಿ ಅಡುಗೆಯವರಾಗಿದ್ದು, ಅವರ ಜತೆ ಇತರ ಅಧಿಕಾರಿಗಳೂ ಇರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ ! :
ಮಂಗಳೂರು: “ತಾಲಿಬಾನಿಗರ ಕ್ರೌರ್ಯದಿಂದ ನಲುಗಿರುವ ಅಫ್ಘಾನಿಸ್ಥಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆ. 16ರಂದು ಪರಿಸ್ಥಿತಿ ಕೈ ಮೀರಿತ್ತು. ಆದರೂ ಅಲ್ಲಿನ ಭದ್ರತಾ ಸಿಬಂದಿಯ ಸಹಕಾರದಿಂದ ಅದೃಷ್ಟವಶಾತ್ ನಮಗೆ ಯಾವುದೇ ರೀತಿಯ ತೊಂದರೆಯಾಗದೆ ಸ್ವದೇಶಕ್ಕೆ ಮರಳಿದ್ದೇವೆ…’
ಹೀಗೆಂದು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದು, ಭಾರತೀಯ ಯುದ್ಧ ವಿಮಾನದ ಮುಖೇನ ರವಿವಾರ ಹೊಸದಿಲ್ಲಿಗೆ ಬಂದಿಳಿದ ಮೂಡುಬಿದಿರೆಯ ಹೊಸಂಗಡಿ ಮೂಲದ ಜಗದೀಶ್ ಅಂಚನ್.
ಜಗದೀಶ್ ಅವರು ಕಳೆದ 10 ವರ್ಷಗಳಿಂದ ಅಫ್ಘಾನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ತಿಂಗಳಿನಿಂದ ಕಾಬೂಲ್‌ನ ವಿಮಾನ ನಿಲ್ದಾಣದಲ್ಲಿ ಕೋಚ್ ಡ್ರೆçವರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಇತ್ತೀಚೆಗಷ್ಟೇ ಊರಿಗೆ ಬಂದಿದ್ದು, ಕೆಲಸದ ನಿಮಿತ್ತ ಆ. 11ರಂದು ಮತ್ತೆ ಕಾಬೂಲ್‌ಗೆ ತೆರಳಿದ್ದರು. ಅಲ್ಲಿ ವಿಮಾನದಿಂದ ಇಳಿಯುವಾಗಲೇ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿರುವುದು ಅವರ ಅರಿವಿಗೆ ಬಂದಿತ್ತು.
“ನಾನು ಇದೇ ತಿಂಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕೆಲಸ ಆರಂಭಿಸಿದ್ದೆ. ದಿನ ಕಳೆದಂತೆ ಅಲ್ಲಿನ ಪರಿಸ್ಥಿತಿ ಮಿತಿ ಮೀರುತ್ತಿತ್ತು. ನಾಗರಿಕ ವಿಮಾನ ನಿಲ್ದಾಣದಿಂದ ನಮ್ಮ ವಿಮಾನ ನಿಲ್ದಾಣಕ್ಕೆ ರನ್ ವೇ ಮಾತ್ರ ಗೋಡೆಯಂತಿತ್ತು. ಆದರೆ ಆ. 16ಕ್ಕೆ ತಾಲಿಬಾನ್ ಉಗ್ರರು ರನ್‌ವೇ ದಾಟಿ ನಮ್ಮ ಫ್ಲೈಟ್‌ಲೆçನ್‌ಗೆ ನುಗ್ಗಿದ್ದರು. ಆ ವೇಳೆ ಅಲ್ಲಿದ್ದ ಭದ್ರತಾ ಸಿಬಂದಿಯ ಸಹಕಾರದಿಂದ ನಮಗೆ ಯಾವುದೇ ರೀತಿಯ ತೊಂದರೆ ಉಂಟಾಗಲಿಲ್ಲ’ ಎನ್ನುತ್ತಾರೆ ಅವರು.
“ತಾಲಿಬಾನಿಗರ ಕ್ರೌರ್ಯ ಹೆಚ್ಚಾಗುತ್ತಿದ್ದಂತೆ ಆ. 17ರಂದು ಅಮೆರಿಕ ಮಿಲಿಟರಿ ಪಡೆ ನಮ್ಮನ್ನು ದೋಹಾ ಕತಾರ್‌ಗೆ ಏರ್‌ಲಿಫ್ಟ್ ಮಾಡಿತ್ತು. ಅಲ್ಲಿಂದ ಭಾರತೀಯ ವಾಯುಪಡೆಯ ವಿಮಾನದ ಮುಖೇನ ಇಂದು (ರವಿವಾರ) ಹೊಸದಿಲ್ಲಿಗೆ ಬಂದಿದ್ದೇನೆ. ಭಾರತೀಯರ ರಾಯಭಾರ ಕಚೇರಿಯ ಸಹಕಾರವನ್ನು ಎಂದಿಗೂ ಮರೆಯುವಂತಿಲ್ಲ. ವಿಮಾನ ಟಿಕೆಟ್ ಸಿಕ್ಕಿದ ಕೂಡಲೇ ಹೊಸದಿಲ್ಲಿಯಿಂದ ಊರಿಗೆ ಬರುತ್ತೇನೆ’ ಎಂದು ಜಗದೀಶ್ ತಿಳಿಸಿದ್ದಾರೆ.
ಒಮ್ಮೆ ಪಾರಾದರೆ ಸಾಕೆನಿಸಿತ್ತು: ಡೆಸ್ಮಂಡ್ :
ಮಂಗಳೂರು: “ಅಲ್ಲಿನ ಪರಿಸ್ಥಿತಿಯೇ ಭಯಾನಕ. ಒಮ್ಮೆ ಅಲ್ಲಿಂದ ಪಾರಾದರೆ ಸಾಕು’ ಎಂದು ಅಫ್ಘಾನಿಸ್ಥಾನದಲ್ಲಿದ್ದ ಮಂಗಳೂರು ತಾಲೂಕು ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಡೆಸ್ಮಂಡ್ ಡೇವಿಸ್ ಡಿ’ಸೋಜಾ (36) ಅವರು ತನ್ನ ತಾಯಿ ಲೀನಾ ಡಿ’ಸೋಜಾ ಅವರಿಗೆ ಮಾಹಿತಿ ನೀಡಿದ್ದರು.
ಡೆಸ್ಮಂಡ್ ಅವರು ರವಿವಾರ ದಿಲ್ಲಿಯ ಘಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದು, ಶೀಘ್ರವೇ ಮಂಗಳೂರಿಗೆ ತಲಪುವ ನಿರೀಕ್ಷೆ ಇದೆ. ಅವರು ಕಳೆದ 10 ವರ್ಷಗಳಿಂದ ಅಫ್ಘಾನಿಸ್ಥಾನದಲ್ಲಿದ್ದು, ಅಲ್ಲಿನ ಅಮೆರಿಕದ ಸೇನಾ ನೆಲೆಯಲ್ಲಿ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡುತ್ತಿದ್ದರು. 1 ವರ್ಷದ ಹಿಂದೆ ಊರಿಗೆ ಬಂದು ಹೋಗಿದ್ದರು. ಮತ್ತೆ ಇದೇ ಆಗಸ್ಟ್ ತಿಂಗಳಲ್ಲಿ ರಜೆಯಲ್ಲಿ ಬರುತ್ತೇನೆ ಎಂದು ಮನೆ ಮಂದಿಗೆ ತಿಳಿಸಿದ್ದರು.
ಡೆಸ್ಮಂಡ್ ಅವರು ಪಕ್ಷಿಕೆರೆಯ ಲೀನಾ ಡಿ’ಸೋಜಾ ಮತ್ತು ತಿಮೊತಿ ಡಿ’ಸೋಜಾ ಅವರ ಇಬ್ಬರು ಪುತ್ರರಲ್ಲಿ ಎರಡನೆಯವರು. ಅವರ ಪತ್ನಿ ಮತ್ತು ಪುತ್ರಿ ಊರಿನಲ್ಲಿಯೇ (ಪಕ್ಷಿಕೆರೆ) ಇದ್ದಾರೆ.
ಆ. 17ರಂದು ಅವರನ್ನು ಅಮೆರಿಕದ ಮಿಲಿಟರಿ ವಿಮಾನದಲ್ಲಿ ಕತಾರ್‌ಗೆ ಏರ್ ಲಿಫ್ಟ್ ಮಾಡಲಾಗಿತ್ತು. ರವಿವಾರ ಭಾರತದ ವಾಯುಪಡೆ ವಿಮಾನದಲ್ಲಿ ಅವರನ್ನು ಮತ್ತು ಇತರ ಭಾರತೀಯರನ್ನು ಕತಾರ್‌ನಿಂದ ದಿಲ್ಲಿಗೆ ಏರ್‌ಲಿಫ್ಟ್ ಮಾಡಲಾಗಿದೆ’ ಎಂದು ತಾಯಿ ಲೀನಾ ಅವರು ಉದಯವಾಣಿಗೆ ತಿಳಿಸಿದ್ದಾರೆ.
ದಿಲ್ಲಿಯಿಂದ ಬೆಂಗಳೂರು ಅಥವಾ ಮಂಗಳೂರಿಗೆ ವಿಮಾನ ಟಿಕೆಟ್ ಸಿಕ್ಕಿದರೆ ಸೋಮವಾರ ಅವರು ಊರಿಗೆ ತಲಪುವ ನಿರೀಕ್ಷೆ ಇದೆ.