Advertisement

ಸುಳ್ಯ, ಸುಬ್ರಹ್ಮಣ್ಯ: ಗುಡುಗು ಸಹಿತ ಮಳೆ

10:48 AM Mar 16, 2017 | Harsha Rao |

ಮಂಗಳೂರು/ಉಡುಪಿ: ಉರಿಬಿಸಿಲಿನ ಝಳಕ್ಕೆ ತತ್ತರಿಸಿದ್ದ ಇಳೆ ಬುಧವಾರ ಕೆಲವೆಡೆ ತಂಪಾಗಿದೆ. ಸಂಜೆ ವೇಳೆಗೆ ದ.ಕ. ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ವಾತಾವರಣವನ್ನು ತಣ್ಣಗಾಗಿಸಿದೆ. 

Advertisement

ಸುಬ್ರಹ್ಮಣ್ಯ, ಸುಳ್ಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಸುಳ್ಯ ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಸಂಜೆ 4.30ಕ್ಕೆ ಆರಂಭವಾದ ಮಳೆ 6.30 ತನಕವೂ ಮುಂದುಧಿವರಿಯಿತು. ಸುಬ್ರಹ್ಮಣ್ಯದಲ್ಲಿ ಮಂಗಳವಾರ ಸಂಜೆಯೂ ಮಳೆಯಾಗಿತ್ತು. ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು ಪರಿಸರದಲ್ಲಿ ಸಂಜೆ ಮಳೆ ಸುರಿದಿದೆ. ಉಜಿರೆಯ ಸಿದ್ಧವನ ಸಮೀಪ ಬುಧವಾರ ಸಂಜೆ ಬೃಹತ್‌ ಗಾತ್ರದ ಮರವೊಂದು ಗಾಳಿಗೆ ಮುರಿದುಬಿದ್ದಿದೆ. ಈಶಾನ್ಯ ಸಾರಿಗೆ ಬಸ್ಸೊಂದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದೆ. 

ಬೆಳ್ಳಾರೆ, ಪಂಜ, ಉಪ್ಪಿನಂಗಡಿಯಲ್ಲಿ ಸಾಧಾರಣ ಮಳೆಯಾಗಿದೆ. ಪುತ್ತೂರಿನಲ್ಲಿ ಸಣ್ಣ ಪ್ರಮಾಣದ ಮಳೆ ಬಂದಿದ್ದು, ವೇಣೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಮಂಗಳೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಮೋಡ ಕವಿದ ವಾತಾವರಣವಿತ್ತು.

ಕೊಡಗಿನ ವಿವಿಧೆಡೆ ಮಳೆ
ಮಡಿಕೇರಿ
: ಬಿಸಿಲ ಬೇಗೆಗೆ ಮೈಯೊಡ್ಡಿದ್ದ ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಕೊಂಚ ತಂಪಾಗಿದೆ. 

ಮಂಗಳವಾರ ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಬುಧವಾರ ಕೂಡ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ದಿಢೀರ್‌ ಮಳೆಯಿಂದ ಮಡಿಕೇರಿ ನಗರದಲ್ಲಿ ಚರಂಡಿಗಳು ತುಂಬಿ ಹರಿದು ರಸ್ತೆ ಕೆಸರುಮಯವಾಗಿತ್ತು. ಬೇಸಗೆಯ ಈ ಮಳೆ ಕಾಫಿ ಹಾಗೂ ಕಾಳು ಮೆಣಸಿಗೆ ಸಕಾಲಿಕವಾಗಿದ್ದು, ಮುಂದಿನ ವರ್ಷ ಉತ್ತಮ ಫ‌ಸಲನ್ನು ನಿರೀಕ್ಷಿಸಬಹುದಾಗಿದೆ ಎಂದು ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ಕಾಡ್ಗಿಚ್ಚಿನಿಂದ ನಾಶವಾಗಿದ್ದ ಅರಣ್ಯ ಪ್ರದೇಶದ ಗಿಡಮರಗಳು ಮಳೆಯಿಂದಾಗಿ ಕೊಂಚ ಚೇತರಿಸಿಕೊಂಡಿವೆ. ಮಡಿಕೇರಿಯಲ್ಲಿ ಮೋಡದ ವಾತಾವರಣ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next