ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮತ್ತೂಂದು ಹೊಸ “ಮಂಗಳೂರು-ಬೆಂಗಳೂರು’ ರಾತ್ರಿ ರೈಲಿಗೆ ಫೆ. 21ರಂದು ನಗರದಲ್ಲಿ ಅಧಿಕೃತ ಚಾಲನೆ ದೊರೆಯಲಿದ್ದು, ಫೆ. 22ರಿಂದ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ. ಆ ಮೂಲಕ ಮಂಗಳೂರು-ಬೆಂಗಳೂರು ನಡುವೆ ಹೆಚ್ಚಿನ ರಾತ್ರಿ ರೈಲು ಸೇವೆ ಪಡೆಯುವ ಕರಾವಳಿ ಜನರ ಬಹುದಿನಗಳ ಬೇಡಿಕೆಯೊಂದು ಈಡೇರಲಿದೆ.
ಸಂಸದ ನಳಿನ್ ಕುಮಾರ್ ಕಟೀಲು ಅವರು ಫೆ. 21ರಂದು ಬೆಳಗ್ಗೆ 11 ಗಂಟೆಗೆ ರೈಲ್ವೇ ಸೇವೆಗೆ ಚಾಲನೆ ನೀಡಲಿದ್ದಾರೆ.
ವಾರದಲ್ಲಿ ಮೂರು ದಿನ ಸದ್ಯಕ್ಕೆ ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುವ ರೈಲು ಮಾರ್ಚ್‌ನ ಅನಂತರ ಪ್ರತೀ ದಿನ ರಾತ್ರಿವೇಳೆ ಸಂಚರಿಸುವ ನಿರೀಕ್ಷೆಯಿದೆ. ಹೊಸ ರೈಲು ಓಡಾಟದ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೇ ವಲಯದವರು ಅಂತಿಮಗೊಳಿಸಿ, ಹೊಸ ದಿಲ್ಲಿಯಲ್ಲಿರುವ ರೈಲ್ವೇ ಮಂಡಳಿಗೆ ಜ.24ರಂದು ಪ್ರಸ್ತಾವನೆ ಕಳುಹಿಸಿದ್ದರು. ಇದಕ್ಕೆ ರೈಲ್ವೇ ಮಂಡಳಿಯು ಒಪ್ಪಿಗೆ ನೀಡಿದ ಹಿನ್ನೆಲೆ ಯಲ್ಲಿ ಮಂಗಳೂರು – ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಆರಂಭಿಸಲು ಹಸಿರು ನಿಶಾನೆ ದೊರಕಿದಂತಾಗಿದೆ.
364 ಕಿ.ಮೀ. ಪ್ರಯಾಣಕ್ಕೆ ಪ್ರಸ್ತಾವಿತ ಸಮಯದ ಪ್ರಕಾರ, ಬೆಂಗಳೂರಿನಿಂದ ಮಂಗಳೂರಿಗೆ 11.30ಕ್ಕೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ 9.30 ಗಂಟೆಯಾಗಲಿದೆ. ಘಾಟಿ ಪ್ರದೇಶದಲ್ಲಿ ಸುರಕ್ಷೆ ಹಿನ್ನೆಲೆ ಹಾಗೂ ಇತರ ರೈಲುಗಳ ಕ್ರಾಸಿಂಗ್ ಇರುವ ಕಾರಣದಿಂದ ಬೆಂಗಳೂರಿನಿಂದ ಹೊರಟ ರೈಲು ತಡವಾಗಿ ಮಂಗಳೂರಿಗೆ ತಲುಪುವಂತಾಗುತ್ತದೆ.
ಪ್ರಸಕ್ತ ಮಂಗಳೂರು ಸೆಂಟ್ರಲ್‌ನಿಂದ ಪ್ರತೀ ದಿನ ಯಶವಂತಪುರ ಎಕ್ಸ್ ಪ್ರಸ್ ರೈಲು ರಾತ್ರಿ 8.55ಕ್ಕೆ ಹೊರಟು ಮರುದಿನ ಬೆಳಗ್ಗೆ ಸುಮಾರು 7.30ಕ್ಕೆ ಬೆಂಗಳೂರು ತಲುಪುತ್ತದೆ. ಇದು ಮೂರು ದಿನ ಮೈಸೂರು ಹಾಗೂ 4 ದಿನ ಶ್ರವಣಬೆಳಗೋಳ ಮಾರ್ಗವಾಗಿ ಸಂಚರಿಸುತ್ತಿದೆ. ಇನ್ನೊಂದೆಡೆ, ಮಂಗಳೂರು ಜಂಕ್ಷನ್‌ನಿಂದ ಪ್ರತೀದಿನ (ರವಿವಾರ ಹೊರತುಪಡಿಸಿ) ಬೆಳಗ್ಗೆ 11.30ಕ್ಕೆ ಹೊರಡುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ರಾತ್ರಿ 8.30ರ ಸುಮಾರಿಗೆ ಬೆಂಗಳೂರು ತಲುಪುತ್ತದೆ. ಇದು ಶ್ರವಣಬೆಳಗೊಳ ಮಾರ್ಗವಾಗಿ ಸಂಚರಿಸುತ್ತಿದೆ.
ಸಂಚಾರ ವೇಳಾಪಟ್ಟಿ
ರವಿವಾರ, ಮಂಗಳವಾರ ಹಾಗೂ ಗುರುವಾರ ಬೆಂಗಳೂರಿನಿಂದ ಮತ್ತು ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಂಗಳೂರಿನಿಂದ ಈ ರೈಲು ಹೊರಡಲಿದೆ. ಬೆಂಗಳೂರಿನಿಂದ ಸಂಜೆ 4.30ಕ್ಕೆ ಹೊರಡುವ ಈ ರೈಲು ಮರುದಿನ ಮುಂಜಾನೆ 4ರ ಸುಮಾರಿಗೆ ಮಂಗಳೂರಿಗೆ ತಲುಪಲಿದೆ ಹಾಗೂ ರಾತ್ರಿ 7 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು ಮರುದಿನ ಮುಂಜಾನೆ 4.30ಕ್ಕೆ ಬೆಂಗಳೂರು ತಲುಪಲಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.