Advertisement

ಮಂಗಳೂರು –ಆತ್ರಾಡಿ ರಾಜ್ಯ ಹೆದ್ದಾರಿಗೆ ಮುನ್ನುಡಿ

01:57 AM Nov 06, 2019 | mahesh |

ಬೆಳ್ಮಣ್‌: ಬಹಳ ವರ್ಷಗಳಿಂದ ಚರ್ಚೆಯಲ್ಲಿರುವ ಮಂಗಳೂರು- ಆತ್ರಾಡಿ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಮಂಗಳವಾರ ಮುಂಡ್ಕೂರಿನ ರಸ್ತೆ ಬದಿ ಜಮೀನು ಮತ್ತು ಕಟ್ಟಡಗಳ ಮಾಲಕರಿಗೆ ಜಮೀನು ತೆರವುಗೊಳಿಸುವಂತೆ ಕಾರ್ಕಳ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್‌ ಜಾರಿಯಾಗಿದೆ.

Advertisement

ಕಾರ್ಕಳ ತಾಲೂಕಿನ ಮಂಗಳೂರು-ಆತ್ರಾಡಿ ರಾಜ್ಯ ಹೆದ್ದಾರಿ 67ರ ಕಿ.ಮೀ. 36.48ರಿಂದ ಕಿ.ಮೀ. 46.28 ಮತ್ತು ಕಿ.ಮೀ. 49.99ರ ವರೆಗೆ (ಸಂಕಲಕರಿಯ -ಮುಂಡ್ಕೂರು-ಬೆಳ್ಮಣ್‌ ರಸ್ತೆ ಮತ್ತು ಬೆಳ್ಮಣ್‌-ಗುಂಡುಕಲ್ಲು ರಸ್ತೆ)ಯ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕುರಿತು ರಸ್ತೆಯ ಇಕ್ಕೆಲಗಳಲ್ಲಿರುವ ಜಾಗದ ಸರ್ವೆ ಕಾರ್ಯ ನಡೆಸಲು ಉದ್ದೇಶಿಸಲಾಗಿದ್ದು, ಸಹಕರಿಸಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖೀಸಲಾಗಿದೆ.

ಕಾರ್ಕಳದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪವಿಭಾಗದ ಸಹಾಯಕ ಕಾ.ನಿ. ಎಂಜಿನಿಯರ್‌ ಈ ನೋಟಿಸನ್ನು ಕಳುಹಿಸಿದ್ದು, 250 ಮಂದಿಗೆ ರವಾನೆಯಾಗಿದೆ. ಸೂಕ್ತ ಪರಿಹಾರ ಕೊಟ್ಟಲ್ಲಿ ಜಾಗ ಬಿಟ್ಟು ಕೊಡಲು ಜನತೆ ತಯಾರಾಗಿದ್ದಾರೆ.

ವಿಸ್ತರಣೆ ಮಾತ್ರ
ಇಲಾಖೆಯ ಎಂಜಿನಿಯರ್‌ ಮಿಥುನ್‌ “ಉದಯವಾಣಿ’ಯೊಂದಿಗೆ ಮಾತನಾಡಿ, ಸಂಕಲಕರಿಯ ಸೇತುವೆಯಿಂದ ಬೆಳ್ಮಣ್‌ ಚರ್ಚ್‌ವರೆಗೆ ರಸ್ತೆ ವಿಸ್ತರಣೆ ನಡೆಯಬೇಕಾಗಿದ್ದು ಸರ್ವೇಗಾಗಿ ನೋಟಿಸ್‌ ಜಾರಿ ಮಾಡಲಾಗಿದೆ. ವರದಿಯನ್ನು ಲೋಕೋಪಯೋಗಿ ಇಲಾಖೆಗೆ ಕಳುಹಿಸಲಾಗುವುದು. ವಿಸ್ತರಣೆ ಸಂದರ್ಭ ಜಮೀನು, ಕಟ್ಟಡ ಕಳೆದುಕೊಳ್ಳುವವರು ಜಿಲ್ಲಾಡಳಿತದ ಮೂಲಕ ಪರಿಹಾರ ಪಡೆಯುವರು. ಇದು ರಾಜ್ಯ ಹೆದ್ದಾರಿ ನಿರ್ಮಾಣದ ಆರಂಭವಲ್ಲ ಎಂದಿದ್ದಾರೆ.

ಮಂಗಳೂರು – ಆತ್ರಾಡಿ ರಾಜ್ಯ ಹೆದ್ದಾರಿ ನಿರ್ಮಾಣದ ದೃಷ್ಟಿಯಿಂದ ಬೆಳ್ಮಣ್‌ – ಸಂಕಲಕರಿಯ ರಸ್ತೆ ವಿಸ್ತರಣೆಯ ಜತೆ ಅಭಿವೃದ್ಧಿಗೆ 55 ಕೋಟಿ ರೂ. ಮೊತ್ತದ ಅನುದಾನಕ್ಕಾಗಿ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸಾರಿಗೆ-ಸಂಪರ್ಕದ ಒಳಿತಿನ ದೃಷ್ಟಿಯಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ವಿ. ಸುನಿಲ್‌ ಕುಮಾರ್‌, ಕಾರ್ಕಳ ಶಾಸಕ

Advertisement

ಮುಂಡ್ಕೂರು ಭಾಗದಲ್ಲಿ ರಸ್ತೆ ಇಕ್ಕಟ್ಟಾಗಿರುವುದು ನಿಜ; ಸೂಕ್ತ ಪರಿಹಾರ ನೀಡಿದಲ್ಲಿ ಜಾಗ ಬಿಟ್ಟು ಕೊಡಲು ಸಿದ್ಧ.
– ದೇವಪ್ಪ ಸಪಳಿಗ, ಮುಂಡ್ಕೂರು ನಿವಾಸಿ

ಈಗ ಕೇವಲ ಸರ್ವೇಗಾಗಿ ನೋಟಿಸ್‌ ನೀಡಲಾಗಿದೆ. ಸರ್ವೇ ವರದಿಯನ್ನು ಕಾರ್ಕಳ ಶಾಸಕರ ಶಿಫಾರಸಿನ ಮೂಲಕ ಇಲಾಖೆಗೆ ಕಳುಹಿಸಲಾಗುವುದು.
– ಮಿಥುನ್‌, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next