Advertisement

ಕಾಂಗ್ರೆಸ್‌ನ ತೆಕ್ಕೆಯಿಂದ ಬಿಜೆಪಿಗೆ ಜಾರಿದ ಕರಾವಳಿ

12:00 AM Jan 17, 2023 | Team Udayavani |

1983ರ ವರೆಗೆ ಕರಾವಳಿಯಲ್ಲಿ ಗಟ್ಟಿಯಾಗಿ ಇದ್ದದ್ದು ಕಾಂಗ್ರೆಸ್‌. ಬಳಿಕ ಜನತಾ ಪಕ್ಷ, ಪಕ್ಷೇತರರೂ ಮೇಲುಗೈ ಸಾಧಿಸಿದರು. ಈ ಮೂಲಕ ಕರಾವಳಿ ಒಂದು ಪ್ರಯೋಗ ಶಾಲೆಯಂತಾಗಿತ್ತು. ಆದರೆ ಇತ್ತೀಚೆಗೆ ಕರಾವಳಿ ಬಿಜೆಪಿಯತ್ತ ಹೊರಳುತ್ತಿದೆ. ಇದಕ್ಕೆ ಸಾಕ್ಷಿ ಕಳೆದ ಚುನಾವಣೆಯಲ್ಲಿ ಬಿಜೆಪಿ 8ರಲ್ಲಿ ಏಳು ಸ್ಥಾನ ಗೆದ್ದಿದೆ.

Advertisement

ಕ್ಷೇತ್ರ ದರ್ಶನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಹಳ ಆಸಕ್ತಿಯಿಂದ ಕೂಡಿದ ಜಿಲ್ಲೆ. ಬ್ರಿಟಿಷರ ಕಾಲದಲ್ಲಿ ಮದ್ರಾಸ್‌ ಪ್ರಾಂತಕ್ಕೆ ಒಳ ಗೊಂಡು ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಗಿತ್ತು. ರಾಜಕೀಯವಾಗಿ ಮೊದಲ ಚುನಾವಣೆಗೆ ಇದ್ದುದು ನಾಲ್ಕೇ ಕ್ಷೇತ್ರಗಳು. ಆದರೆ ಈಗ ಎಂಟು.

ಈ ಜಿಲ್ಲೆಯಲ್ಲಿನ ರಾಜಕೀಯ ಅಲೆ ಸಾಗಿ ಹೋಗುತ್ತಿ ರುವ ಕ್ರಮ ಗುರುತಿಸುವುದಾದರೆ ಇಲ್ಲಿನ ಕ್ಷೇತ್ರಗಳಲ್ಲಿ 1983ರವರೆಗೆ ಕಾಂಗ್ರೆಸ್‌, ಜನತಾ ಪಕ್ಷ ಹಾಗೂ ಪಕ್ಷೇತರ ಮೂರೂ ಮಾದರಿಯ ಪ್ರಯೋಗ ನಡೆದಿತ್ತು. ಆದರೆ 1983ರ ಬಳಿಕ ನಿಧಾನವಾಗಿ ಜಿಲ್ಲೆಯ ಕ್ಷೇತ್ರಗಳು ಬಿಜೆಪಿ ಯತ್ತ ವಾಲತೊಡಗಿದವು. 2018ರ ಇತ್ತೀಚಿನ ಚುನಾವ ಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ ಏಳು ಬಿಜೆಪಿ ಪಾಲಾಗಿವೆ.

ನಾಲ್ಕು ಕ್ಷೇತ್ರಗಳು ಎಂಟಾದವು!: 1952ರಲ್ಲಿ ಇದ್ದ ವಿಧಾನ ಸಭಾ ಕ್ಷೇತ್ರಗಳೆಂದರೆ ಪುತ್ತೂರು, ಪಾಣೆಮಂಗಳೂರು – ಬಂಟ್ವಾಳ, ಮಂಗಳೂರು-1 (ಎಂದರೆ ಈಗಿನ ಮಂಗ ಳೂರು ನಗರ ದಕ್ಷಿಣ), ಮೂಲ್ಕಿ (ಈಗಿನ ಮಂಗಳೂರು ನಗರ ಉತ್ತರ). ಬೆಳ್ತಂಗಡಿ ಹಾಗೂ ಮಂಗಳೂರು 2 (ಈಗಿನ ಮಂಗಳೂರು) ಎಂಬುದು ಸೇರ್ಪಡೆಯಾದದ್ದು 1957ರಲ್ಲಿ. ಸುಳ್ಯ ಹಾಗೂ ಮೂಡುಬಿದಿರೆ 1962ರಲ್ಲಿ, ವಿಟ್ಲ 1978ರಲ್ಲಿ ಅಸ್ತಿತ್ವಕ್ಕೆ ಬಂದವು. ಹೀಗೆ 2008ರ ವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂಬತ್ತು ಕ್ಷೇತ್ರಗಳಿದ್ದವು. 2008ರಲ್ಲಿ ಕ್ಷೇತ್ರ ಮತ್ತೆ ಪುನರ್‌ ವಿಂಗಡಣೆಯಾದಾಗ ವಿಟ್ಲ ಪ್ರತ್ಯೇಕ ಕ್ಷೇತ್ರವಾಗಿ ಉಳಿಯಲಿಲ್ಲ. ಬೆಳ್ತಂಗಡಿ, ಪುತ್ತೂರು, ಸುಳ್ಯ ಹಾಗೆಯೇ ಉಳಿದವು. ಹೆಸರು ಬದಲಾಗಲಿಲ್ಲ.

 ಸುಳ್ಯ
ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರ. 1957ರಲ್ಲಿ ಪುತ್ತೂರು ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 1962ರಲ್ಲಿ ಅಸ್ತಿತ್ವಕ್ಕೆ ಬಂದ ಸುಳ್ಯ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಸುಬ್ಬಯ್ಯ ನಾೖಕ್‌ ಮೊದಲ ಶಾಸಕರು. ಅವರು ಹಿಂದಿ ಶಿಕ್ಷಕರಾಗಿದ್ದವರು. ಬಳಿಕ ಸ್ವತಂತ್ರ ಪಕ್ಷದ ಎಂ.ರಾಮಚಂದ್ರ(1967, 1978), ದುಗ್ಗಣ್ಣ ಬಂಗೇರ(1972) ಪ್ರತಿನಿಧಿಸಿದರು. 1983ರಲ್ಲಿ ಕೃಷಿ ಕಾರ್ಮಿಕ ಬಾಕಿಲ ಹುಕ್ರಪ್ಪ ಬಿಜೆಪಿಯಿಂದ ಗೆದ್ದರೆ 1985ರಲ್ಲಿ ಸರಕಾರಿ ಉದ್ಯೋಗಿಯಾಗಿದ್ದ ಕೆ.ಕುಶಲ ಕಾಂಗ್ರೆಸ್‌ನಿಂದ ಗೆದ್ದರು. 1989ರಲ್ಲಿ  ಪುನರಾಯ್ಕೆಗೊಂಡರು. ಆ ವರ್ಷ ಬಿಜೆಪಿಯಿಂದ ಸ್ಪರ್ಧೆ ನೀಡಿದ್ದ ಕೃಷಿ ಕಾರ್ಮಿಕ ಎಸ್‌.ಅಂಗಾರ 1994ರಲ್ಲಿ ಶಾಸಕರಾದರು. ತರುವಾಯ ಇದುವರೆಗೆ ಅವರೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸತತ ಆರನೇ ಬಾರಿ ಶಾಸಕರಾಗಿರುವುದು ಇವರ ಹೆಗ್ಗಳಿಕೆ.

Advertisement

 ಪುತ್ತೂರು
ದ್ವಿದಸ್ಯ ಕ್ಷೇತ್ರವಾಗಿದ್ದ ಪುತ್ತೂರಿನಲ್ಲಿ 1952ರಲ್ಲಿ ಕಾಂಗ್ರೆಸ್‌ನಿಂದ ಪ್ರಗತಿಪರ ಕೃಷಿಕ ಕೂಜು ಗೋಡು ವೆಂಕಟ್ರಮಣ ಗೌಡ ಹಾಗೂ ಕೆ.ಈಶ್ವರ ಗೆದ್ದರು. 1957ರಲ್ಲಿ ಕೂಜುಗೋಡು ಪುನರಾಯ್ಕೆಯಾದರೆ ಸುಳ್ಯದ ಸುಬ್ಬಯ್ಯ ನಾೖಕ್‌ ಮತ್ತೋರ್ವ ಸದಸ್ಯರಾಗಿ ಆಯ್ಕೆಯಾದರು. 1962ರಲ್ಲಿ ಪುತ್ತೂರು ಏಕ ಸದಸ್ಯ ಕ್ಷೇತ್ರವಾಗಿ ಕೂಜುಗೋಡು ಪುನರಾಯ್ಕೆಯಾದರೆ, 1967ರಲ್ಲಿ ಕಾಂಗ್ರೆಸ್‌ನ ಬಿ.ವಿಠಲದಾಸ ಪೈ, 1972ರಲ್ಲಿ ಮಾಜಿ ಸಂಸದರಾಗಿದ್ದ ಎ.ಶಂಕರ ಆಳ್ವ ಗೆದ್ದರು. 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧೆಗಿಳಿದ ಉರಿಮಜಲು ರಾಮಭಟ್‌ ವಿಜಯಿಯಾದರೆ 1983ರಲ್ಲಿ ಅವರೇ ಬಿಜೆಪಿಯಿಂದ ಗೆದ್ದರು. 1985ರಲ್ಲಿ ಕಾಂಗ್ರೆಸ್‌ನಿಂದ ವಿನಯಕುಮಾರ್‌ ಸೊರಕೆ ಗೆಲುವು ಸಾಧಿಸಿದರೆ, ಆ ಬಾರಿ ಸ್ಪರ್ಧೆ ನೀಡಿ ಸೋತಿದ್ದ ಬಿಜೆಪಿಯ ಡಿ.ವಿ. ಸದಾನಂದ ಗೌಡರು 1994ರಲ್ಲಿ , 1999ರಲ್ಲಿ ಗೆದ್ದರು. 2004ರಲ್ಲಿ ಬಿಜೆಪಿಯ ಶಕುಂತಲಾ ಶೆಟ್ಟಿ ಕ್ಷೇತ್ರದ ಮೊದಲ ಶಾಸಕಿಯಾಗಿ ಆಯ್ಕೆಯಾದರು. 2008ರಲ್ಲಿ ಬಿಜೆಪಿ ಶಕುಂತಲಾರ ಬದಲಿಗೆ ಮಲ್ಲಿಕಾ ಪ್ರಸಾದ್‌ ಅವರಿಗೆ ಅವಕಾಶ ನೀಡಿತ್ತು. ಶಕುಂತಲಾ ಪಕ್ಷೇತರವಾಗಿ ಸ್ಪರ್ಧಿಸಿದರೂ ಮಲ್ಲಿಕಾ ಗೆಲುವು ಸಾಧಿಸಿದರು. 2013ರಲ್ಲಿ ಶಕುಂತಲಾ ಕಾಂಗ್ರೆಸ್‌ ಸೇರಿ ಗೆಲುವನ್ನು ತಮ್ಮದಾಗಿಸಿಕೊಂಡರು. 2018ರ ಚುನಾವಣೆಯಲ್ಲಿ ಬಿಜೆಪಿಯ ಸಂಜೀವ ಮಠಂದೂರು ಈ ಕ್ಷೇತ್ರದಲ್ಲಿ ಜಯ ಸಾಧಿಸಿದರು.

 ಬಂಟ್ವಾಳ
1952, 1957 ಹಾಗೂ 1962ರಲ್ಲಿ ಈ ಕ್ಷೇತ್ರ ಪಾಣೆಮಂಗಳೂರು ಎಂದಿತ್ತು. ಮೊದಲ ಬಾರಿ ಕಾಂಗ್ರೆಸ್‌ನಿಂದ ಬಿ.ವೈಕುಂಠ ಬಾಳಿಗಾ ಗೆದ್ದರೆ 1957, 62ರಲ್ಲಿ ಕಾಂಗ್ರೆಸ್‌ನಿಂದ ಡಾ|ನಾಗಪ್ಪ ಆಳ್ವ ಗೆದ್ದರು. 1967ರಲ್ಲಿ ಬಂಟ್ವಾಳ ಕ್ಷೇತ್ರದ ರಚನೆಯಾಯಿತು. ಕಾಂಗ್ರೆಸ್‌ನಿಂದ ಆ ಬಾರಿ ಲೀಲಾವತಿ ರೈ ಗೆದ್ದು ಕರಾವಳಿಯಿಂದ ವಿಧಾನಸಭೆ ಪ್ರವೇಶಿಸಿದ ಮೊದಲ ಮಹಿಳೆಯೆಂಬ ಹಿರಿಮೆಗೆ ಪಾತ್ರರಾದರು. 1972ರಲ್ಲಿ ಸಿಪಿಐನ ಬಿ.ವಿ.ಕಕ್ಕಿಲ್ಲಾಯ ಗೆದ್ದರೆ, 1985ರಲ್ಲಿ ಆಗ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಬಿ.ರಮಾನಾಥ ರೈ ಕಾಂಗ್ರೆಸ್‌ನಿಂದ ಆಯ್ಕೆಯಾದರು. ಆ ಬಳಿಕ ನಿರಂತರವಾಗಿ 1989, 1994, 1999ರಲ್ಲಿ ಆಯ್ಕೆಯಾದರು. 2004ರಲ್ಲಿ ಬಿಜೆಪಿಯ ಬಿ.ನಾಗರಾಜ ಶೆಟ್ಟಿ ಅವರು ರೈ ಅವರನ್ನು ಸೋಲಿಸಿದರೆ, 2008ರಲ್ಲಿ ರಮಾನಾಥ ರೈ ಮತ್ತೆ ಗೆದ್ದರು. 2013ರಲ್ಲೂ ಅವರೇ ಶಾಸಕರು. 2018 ರಲ್ಲಿ ಪ್ರಗತಿಪರ ಕೃಷಿಕ ರಾಜೇಶ್‌ ನಾೖಕ್‌ ಉಳೇಪಾಡಿ ಬಿಜೆಪಿಯಿಂದ ಗೆದ್ದು ಪ್ರತಿನಿಧಿಸುತ್ತಿದ್ದಾರೆ.

ಬೆಳ್ತಂಗಡಿ
ಈ ಕ್ಷೇತ್ರದ ಮೊದಲ ಶಾಸಕರಾಗಿ ಧರ್ಮಸ್ಥಳದ ಆಗಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರು ಕಾಂಗ್ರೆಸ್‌ನಿಂದ 1957ರಲ್ಲಿ ಆಯ್ಕೆಯಾದರು. 1962 ಹಾಗೂ 1967ರಲ್ಲಿ ವೈಕುಂಠ ಬಾಳಿಗಾ ಅವರು ಶಾಸಕರಾದರು. ಆದರೆ 1968ರಲ್ಲಿ ಅವರು ನಿಧನರಾದ ಕಾರಣ ನಡೆದ ಉಪಚುನಾವಣೆಯಲ್ಲಿ ಕೆ.ಚಿದಾನಂದ ಕಾಂಗ್ರೆಸ್‌ನಿಂದ ಗೆದ್ದರು. 1972ರಲ್ಲಿ ಕೂಜುಗೋಡು ಸುಬ್ರಹ್ಮಣ್ಯ ಗೌಡರು ಕಾಂಗ್ರೆಸ್‌ನಿಂದ  ಗೆದ್ದರೆ, 1978ರಲ್ಲಿ ಕಾಂಗ್ರೆಸ್‌ನ ಗಂಗಾಧರ ಗೌಡರು ಗೆದ್ದು ಸಚಿವರೂ ಆದರು. 1983ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ವಸಂತ ಬಂಗೇರ ಗೆದ್ದು 1985ರಲ್ಲಿ ಪುನರಾಯ್ಕೆಗೊಂಡರು. ಬಳಿಕ ಜನತಾ ಪಕ್ಷಕ್ಕೆ ಸೇರಿದರು. 1989ರಲ್ಲಿ ಗಂಗಾಧರ ಗೌಡರು ಗೆದ್ದರೆ, 1994ರಲ್ಲಿ ಮತ್ತೆ ವಸಂತ ಬಂಗೇರ ಜನತಾ ದಳದಿಂದ ಗೆದ್ದರು. 1999ರಲ್ಲಿ ವಸಂತ ಬಂಗೇರರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ ಅವರ ಕಿರಿಯ ಸಹೋದರ ಪ್ರಭಾಕರ ಬಂಗೇರ ಜಯಗಳಿಸಿದರಲ್ಲದೇ, 2004ರಲ್ಲೂ ಪುನರಾಯ್ಕೆಗೊಂಡರು. 2008ರಲ್ಲಿ ಕಾಂಗ್ರೆಸ್‌ ಸೇರಿದ ವಸಂತ ಬಂಗೇರ ಸೋದರನಿಗೆ ಸೋಲುಣಿಸಿ ಮತ್ತೆ ಶಾಸಕರಾದರು. 2013ರಲ್ಲೂ ಅವರೇ ವಿಜಯಿ. 2018ರಲ್ಲಿ ಬಿಜೆಪಿಯ ನವಮುಖ ಯುವಕ ಹರೀಶ್‌ ಪೂಂಜ ಗೆದ್ದು ಶಾಸಕರಾದರು.

ವಿಟ್ಲ
1978ರಿಂದ 2004ರ ವರೆಗೆ ಮಾತ್ರ ಇದ್ದ ಕ್ಷೇತ್ರವಿದು. 1978ರಲ್ಲಿ ಸಿಪಿಐನ ಬಿ.ವಿ.ಕಕ್ಕಿಲ್ಲಾಯ, 1983ರಲ್ಲಿ ರುಕ್ಮಯ ಪೂಜಾರಿ ಬಿಜೆಪಿಯಿಂದ ಶಾಸಕರಾದರು. 1985ರಲ್ಲಿ ರುಕ್ಮಯ ಪೂಜಾರಿಗೆ ಸೋಲುಣಿಸಿದ ಕಾಂಗ್ರೆಸ್‌ನ ಬಿ.ಎ.ಉಮರಬ್ಬ ಶಾಸಕರಾದರು. 1989ರಲ್ಲಿ ಮತ್ತೆ ಗೆಲುವು ರುಕ್ಮಯರಿಗೆ, 1994ರಲ್ಲೂ ಅವರೇ ಶಾಸಕ. 1999ರಲ್ಲಿ ಕಾಂಗ್ರೆಸ್‌ನ ಕೆ.ಎಂ.ಇಬ್ರಾಹಿಂ ಗೆದ್ದರು. 2004ರಲ್ಲಿ ಪದ್ಮನಾಭ ಕೊಟ್ಟಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಇವರೇ ಕ್ಷೇತ್ರದ ಕೊನೆಯ ಶಾಸಕ.

ಮೂಡುಬಿದಿರೆ
1962ರಲ್ಲಿ ರಚನೆಯಾದ ಈ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಮೊದಲ ಶಾಸಕ ಸ್ವತಂತ್ರ ಪಕ್ಷದ ಗೋಪಾಲ್‌ ಸಾಲಿಯಾನ್‌. 67ರಲ್ಲಿ  ಮೀಸಲು ಬದಲಾಗಿ ಸಾಮಾನ್ಯ ಆಯಿತು. ಸ್ವತಂತ್ರ ಪಕ್ಷದ ರತನ್‌ ಕುಮಾರ್‌ ಕಟ್ಟೆಮಾರ್‌ ಗೆದ್ದರು. 1972ರಲ್ಲಿ ಡಾ|ದಾಮೋದರ ಮೂಲ್ಕಿ ಕಾಂಗ್ರೆಸ್‌ನಿಂದ ಗೆದ್ದರು, 1978ರಲ್ಲಿ ಪುನರಾಯ್ಕೆಗೊಂಡರು. 1983ರಲ್ಲಿ ಜನತಾಪಾರ್ಟಿಯಿಂದ ಸ್ಪರ್ಧಿಸಿದ ಅಮರನಾಥ ಶೆಟ್ಟಿ ಗೆದ್ದು, 85ರಲ್ಲಿ ಪುನರಾಯ್ಕೆಗೊಂಡರು. 89ರಲ್ಲಿ ಸೋಮಪ್ಪ ಸುವರ್ಣ ಕಾಂಗ್ರೆಸ್‌ನಿಂದ ಗೆದ್ದು ಬಂದರೆ, 94ರಲ್ಲಿ ಮತ್ತೆ ಅಮರನಾಥ ಶೆಟ್ಟರು ಗೆಲುವು ಪಡೆದರು. 1999ರಲ್ಲಿ ಕಾಂಗ್ರೆಸ್‌ನ ಅಭಯಚಂದ್ರ ಜೈನ್‌ ಗೆದ್ದರಷ್ಟೇ ಅಲ್ಲ, 2004, 2008, 2013ರಲ್ಲಿ ನಿರಂತರವಾಗಿ ಶಾಸಕರಾದರು. 2018ರಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್‌ ಗೆದ್ದು ಶಾಸಕರಾದರು.

 ಮಂಗಳೂರು ನಗರ ದಕ್ಷಿಣ
1952ರಿಂದ 1972ರ ತನಕ ಮಂಗಳೂರು-1 ಎಂದಿದ್ದ ಕ್ಷೇತ್ರ. ಕಾಂಗ್ರೆಸ್‌ನಿಂದ ಹಿರಿಯ ನಾಯಕ ಎಲ್‌.ಸಿ.ಪಾಯಸ್‌, 1952ರಲ್ಲಿ ವೈಕುಂಠ ಬಾಳಿಗ ಗೆದ್ದರು. 57ರಲ್ಲಿ ಅವರೇ ಪುನರಾಯ್ಕೆ. 1972 ರಲ್ಲಿ ಗೆದ್ದ ಕಾಂಗ್ರೆಸ್‌ನ ಎಡ್ಡಿ ಸಲ್ದಾನಾ ಕ್ಷೇತ್ರದ ಶಾಸಕರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1978ರಲ್ಲಿ ಕಾಂಗ್ರೆಸ್‌ನ ಪಿ.ಎಫ್‌.ರಾಡ್ರಿಗಸ್‌ ಗೆದ್ದು ಸಚಿವರೂ ಆದರು. 1983ರಲ್ಲಿ ವಕೀಲರಾಗಿದ್ದ ವಿ.ಧನಂಜಯ ಕುಮಾರ್‌ ಗೆದ್ದರೆ 1985ರಲ್ಲಿ ವಕೀಲರಾಗಿದ್ದ ಬ್ಲೇಸಿಯಸ್‌ ಡಿ’ಸೋಜಾ ಕಾಂಗ್ರೆಸ್‌ನಿಂದ ಗೆದ್ದರು. 1989ರಲ್ಲೂ ಪುನರಾಯ್ಕೆಗೊಂಡರು. 1994ರಲ್ಲಿ ಬಿಜೆಪಿಯ ಎನ್‌.ಯೋಗೀಶ್‌ ಭಟ್‌ ಶಾಸಕರಾದರು. 1999, 2004, 2008ರಲ್ಲಿ ಸತತವಾಗಿ ಗೆದ್ದರು. 2013ರಲ್ಲಿ ಯೋಗೀಶ್‌ ಭಟ್‌ ಅವರನ್ನು ನಿವೃತ್ತ ಸರಕಾರಿ ಅಧಿಕಾರಿ ಜೆ.ಆರ್‌.ಲೋಬೋ ಸೋಲಿಸಿದರು, 2018ರಲ್ಲಿ ಬಿಜೆಪಿಯ ಯುವ ನೇತಾರ ವೇದವ್ಯಾಸ ಕಾಮತ್‌ ಗೆಲುವು ಸಾಧಿಸಿದರು.

ಮಂಗಳೂರು
1957ರಿಂದ 1972ರ ತನಕ ಮಂಗಳೂರು-2 ಎಂಬ ಹೆಸರಲ್ಲಿದ್ದ ಕ್ಷೇತ್ರ ಆ ಬಳಿಕ ಉಳ್ಳಾಲ ಆಯಿತು. 2008ರಿಂದ ಈ ಕ್ಷೇತ್ರ ಮಂಗಳೂರು ಆಗಿದೆ. 57ರಲ್ಲಿ ಕಾಂಗ್ರೆಸ್‌ನ ಗಜಾನನ ಪಂಡಿತ್‌, 62ರಲ್ಲಿ ಸಿಪಿಐನ ಎ.ಕೃಷ್ಣ ಶೆಟ್ಟಿ, 67ರಲ್ಲಿ ಕಾಂಗ್ರೆಸ್‌ನ ಬಿ.ಎಂ.ಇದಿನಬ್ಬ ಗೆದ್ದರು. 1972ರಲ್ಲಿ ಯು.ಟಿ.ಫರೀದ್‌ ಗೆದ್ದರು. 1978ರಲ್ಲೂ ಅವರದ್ದೇ ಗೆಲುವು. 83ರಲ್ಲಿ ಸಿಪಿಎಂನ ಪಿ.ರಾಮಚಂದ್ರ ರಾವ್‌ ಗೆದ್ದರೆ, 85, 89ರಲ್ಲಿ ಮತ್ತೆ ಇದಿನಬ್ಬ ಗೆದ್ದರು. 1994ರಲ್ಲಿ  ಬಿಜೆಪಿಯ ಕೆ.ಜಯರಾಮ ಶೆಟ್ಟಿ ಗೆದ್ದರು. 1999ರಲ್ಲಿ ಮತ್ತೆ ಯು.ಟಿ. ಫರೀದ್‌ ಶಾಸಕರಾದರು. 2004ರಲ್ಲೂ ಗೆದ್ದªರು. ಅವರ ನಿಧನದ ಬಳಿಕ 2007ರ ಉಪಚುನಾವಣೆಯಲ್ಲಿ ಅವರ ಪುತ್ರ ಯು.ಟಿ.ಖಾದರ್‌ ಗೆದ್ದರಲ್ಲದೇ, 2008, 2013, 2018ರಲ್ಲೂ ಶಾಸಕರಾಗಿದ್ದಾರೆ.

 ಮಂಗಳೂರು ನಗರ ಉತ್ತರ
ಮೊದಲು ಮೂಲ್ಕಿ, ಆ ಬಳಿಕ 1957ರಲ್ಲಿ ಸುರತ್ಕಲ್‌, 2008ರಲ್ಲಿ ಮಂಗಳೂರು ನಗರ ಉತ್ತರ ಎಂದು ಗುರುತಿಸಲ್ಪಟ್ಟ ಕ್ಷೇತ್ರವಿದು. 52ರಲ್ಲಿ ಕಾಂಗ್ರೆಸ್‌ನಿಂದ ಎನ್‌.ಎನ್‌.ಸುವರ್ಣ, 57ರಲ್ಲಿ ಬಿ.ಆರ್‌.ಕರ್ಕೇರ, 62ರಲ್ಲಿ ಸೋಶಲಿಸ್ಟ್‌ ಪಕ್ಷದ ಸಂಜೀವನಾಥ ಐಕಳ ಗೆದ್ದು ಬಂದರೆ, 67ರಲ್ಲಿ ಅದೇ ಪಕ್ಷದ ಪಿ.ವಿ.ಐತಾಳ್‌ ಅವರು ಗೆದ್ದರು. 1972ರಲ್ಲಿ ಕಾಂಗ್ರೆಸ್‌ನಿಂದ ಬಿ.ಸುಬ್ಬಯ್ಯ ಶೆಟ್ಟಿ ಆಯ್ಕೆಯಾಗಿ, 1978ರಲ್ಲೂ ಪುನರಾಯ್ಕೆಗೊಂಡರು. 1983ರಲ್ಲಿ ಜನತಾಪಾರ್ಟಿಯಿಂದ ಸ್ಪರ್ಧಿಸಿದ ಕಾರ್ಮಿಕ ನಾಯಕ ಲೋಕಯ್ಯ ಶೆಟ್ಟಿ ಗೆದ್ದರು. 85ರಲ್ಲಿ ಕಾಂಗ್ರೆಸ್‌ನಿಂದ ಎನ್‌.ಎಂ.ಅಡ್ಯಂತಾಯ ಗೆದ್ದರೆ 1989ರಲ್ಲಿ ವಿಜಯ್‌ ಕುಮಾರ್‌ ಶೆಟ್ಟಿ ಗೆದ್ದುಬಂದರು. 1994ರಲ್ಲಿ ಯಕ್ಷಗಾನ ಕಲಾವಿದ ಕುಂಬಳೆ ಸುಂದರರಾವ್‌ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. 1999ರಲ್ಲಿ ಮತ್ತೆ ಗೆಲುವು ವಿಜಯ ಕುಮಾರ್‌ ಶೆಟ್ಟಿಯವರದ್ದು . 2004ರಲ್ಲಿ ಉದ್ಯಮಿ ಕೃಷ್ಣ ಜೆ.ಪಾಲೆಮಾರ್‌ ಬಿಜೆಪಿಯಿಂದ ಗೆದ್ದು, 2008ರಲ್ಲೂ ಪುನರಾಯ್ಕೆಯಾದರು. 2013ರಲ್ಲಿ ಕಾಂಗ್ರೆಸ್‌ನ ಮೊಯ್ದಿನ್‌ ಬಾವಾ ಗೆದ್ದರೆ 2018ರಲ್ಲಿ ವೈದ್ಯ ಡಾ|ಭರತ್‌ ಶೆಟ್ಟಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು.

-ವೇಣು ವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next