Advertisement

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

01:08 AM Jul 01, 2024 | Team Udayavani |

ಮಂಗಳೂರು: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದರೂ ದಕ್ಷಿಣ ಕನ್ನಡ- ಉಡುಪಿ ಭಾಗದಿಂದ ವಿದೇಶ ಗಳಿಗೆ ವಿಮಾನ ಮೂಲಕ ಸರಕು ಸಾಗಿಸಲು ಬೆಂಗಳೂರು, ಮುಂಬಯಿ, ಹೊಸದಿಲ್ಲಿ ಅಥವಾ ಕೋಲ್ಕತಾ ವಿಮಾನ ನಿಲ್ದಾಣವನ್ನೇ ಆಶ್ರಯಿಸಬೇಕಿದೆ!

Advertisement

ಇಲ್ಲಿಂದ ನೇರ ಸರಕು ಸಾಗಣೆಗೆ ಅನುಮತಿ ದೊರಕಿಲ್ಲ. ಇಲ್ಲಿ ಇಂಟಿಗ್ರೇಟೆಡ್‌ ಕಾರ್ಗೋ ಟರ್ಮಿನಲ್‌ (ಐಸಿಟಿ) ಕಳೆದ ವರ್ಷ ಮೇ 1ಕ್ಕೆ ಉದ್ಘಾಟನೆಯಾಗಿದೆ. ವಾರ್ಷಿಕ 9 ಸಾವಿರ ಟನ್‌ಗಳಷ್ಟು ಸರಕು ನಿರ್ವಹಿಸಬಹುದು. ಆದರೆ ಸದ್ಯ ಅನುಮತಿ ಇರುವುದು ದೇಶೀಯ ಕಾರ್ಗೋ ಸಾಗಣೆಗೆ ಮಾತ್ರ.

“ಟರ್ಮಿನಲ್‌ ಅಂತಾರಾಷ್ಟ್ರೀಯ ಮಾನದಂಡಕ್ಕೆ ತಕ್ಕನಾಗಿ ಇಲ್ಲವೆಂಬ ಕಾರಣಕ್ಕೆ ವಿದೇಶಗಳಿಗೆ ಸಾಗಿಸಲು ಅನುಮತಿ ಸಿಕ್ಕಿಲ್ಲ’ ಎಂಬುದು ಇತರ ಮೂಲಗಳ ಅಭಿಪ್ರಾಯ. “ಕಸ್ಟಮ್ಸ್‌ನಿಂದ ಅನುಮತಿ ಸಿಕ್ಕಿಲ್ಲ’ ಎಂಬುದು ವಿಮಾನ ನಿಲ್ದಾಣ ಅಧಿಕಾರಿಗಳ ಹೇಳಿಕೆ.

ಲಾಭವೇನು?
ಸದ್ಯ ವಿದೇಶಗಳಿಗೆ ಮೀನು, ಗೋಡಂಬಿ ಸಹಿತ ವಿವಿಧ ವಸ್ತುಗಳು ನವ ಮಂಗಳೂರು ಬಂದರು ಮೂಲಕ ಹಡಗಿನಲ್ಲಿ ಹೋಗುತ್ತಿವೆ. ಆದರೆ ತಾಜಾ ಮೀನು, ಮಲ್ಲಿಗೆ, ತರಕಾರಿ, ಆಹಾರ ಪದಾರ್ಥಗಳನ್ನು ಕಳುಹಿಸಲು ಬೇರೆ ವಿಮಾನ ನಿಲ್ದಾಣಗಳೇ ಅನಿವಾರ್ಯ. ನೇರ ಸರಕು ಸಾಗಣೆ ಸಾಧ್ಯವಾದರೆ ಸಾಗಣೆ ವೆಚ್ಚ ಕಡಿಮೆ ಆಗುವುದಲ್ಲದೇ, ಬೇಡಿಕೆ ತಕ್ಕಂತೆ ಹೆಚ್ಚು ಪೂರೈಸಬಹುದು. ಆಗ ಕರಾವಳಿಯ ಸ್ಥಳೀಯ ವಹಿವಾಟಿಗೆ ಅನುಕೂಲ ಆಗಲಿದೆ.

ದುಬಾೖಗೆ ತರಕಾರಿ ಸ್ಥಗಿತ!
ಇಲ್ಲಿಂದ ಕೊರೊನಾಕ್ಕೆ ಮೊದಲು ನಿತ್ಯವೂ ಸುಮಾರು 10 ಸಾವಿರ ಕೆಜಿ ತರಕಾರಿ ದುಬಾೖಗೆ ಹೋಗುತ್ತಿತ್ತು. ಕೊರೊನಾ ಬಳಿಕ 2 ಸಾವಿರ ಕೆ ಜಿ ಗೆ ಇಳಿಯಿತು. ಈಗ ಸ್ಪೈಸ್‌ ಜೆಟ್‌ ವಿಮಾನ ಹಾರಾಟ ಸ್ಥಗಿತ ಗೊಂಡ ಬೆನ್ನಿಗೆ 6 ತಿಂಗಳಿಂದ ತರಕಾರಿ ಸಾಗಣೆ ಸ್ಥಗಿತವಾಗಿದೆ.

Advertisement

“ಏರ್‌ ಕಾರ್ಗೊ’ ಮರೀಚಿಕೆ!
ಸದ್ಯ ದೇಶೀಯ ಕಾರ್ಗೋವನ್ನು ಪ್ರಯಾಣಿಕ ವಿಮಾನದಲ್ಲಿ ನಿರ್ವಹಿಸ ಲಾಗುತ್ತದೆ. ಅಂತಾರಾಷ್ಟ್ರೀಯ ಕಾರ್ಗೋ ಆರಂಭವಾದರೂ ಪ್ರಯಾಣಿಕ ವಿಮಾನದಲ್ಲೇ ಕೊಂಡೊಯ್ಯಬೇಕು. ಯಾಕೆಂದರೆ, ಸರಕು ಸಾಗಣೆಯ “ಏರ್‌ ಕಾರ್ಗೋ’ ಇಲ್ಲಿಗೆ ಬಂದು ಹೋಗುವಷ್ಟು ಸರಕು ಸಿಗಲಾರದು ಎನ್ನಲಾಗಿದೆ. ಜತೆಗೆ ದೊಡ್ಡ ವಿಮಾನವು ಮಂಗಳೂರಲ್ಲಿ ಇಳಿಯುವುದೂ ಕಷ್ಟ!

ವಿಮಾನಗಳ ದರ ಸಮರ!
“ಸ್ಪೈಸ್‌ಜೆಟ್‌ ಇರುವಾಗ ಪ್ರತಿ ಕೆಜಿ ವಸ್ತುವಿಗೆ ಸಾಗಾಟಗಾರರು 30 ರೂ. ನೀಡಬೇಕಿತ್ತು. ಈಗ 42 ರೂ.ಗೆ ಏರಿಸಲಾಗಿದೆ. ಇದರಿಂದ ಸಾಗಣೆದಾರರಿಗೆ ಪ್ರತಿದಿನ 10 ಸಾವಿರ ರೂ. ನಷ್ಟ ಆಗಲಿದೆ. ಹೀಗಾಗಿ ಸಣ್ಣಪುಟ್ಟ ಸರಕು ಸಾಗಣೆಯೂ ಸ್ಥಗಿತಗೊಂಡಿದೆ. ವಿಮಾನಯಾನ ಸಂಸ್ಥೆಗಳು ದರ ಕಡಿತ ಮಾಡಿದರೆ ಹೆಚ್ಚು ಸರಕು ಸಾಗಣೆ ಸಾಧ್ಯ. ಜತೆಗೆ ಏರ್‌ಪೋರ್ಟ್‌ ನಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ’ ಎನ್ನುತ್ತಾರೆ ವಿದೇಶಗಳಿಗೆ ಸರಕು ಸಾಗಿಸುತ್ತಿರುವ ಫೋರ್‌ವಿಂಗ್ಸ್‌ನ ಪುಷ್ಪರಾಜ ಶೆಟ್ಟಿ.

“ಕರಾವಳಿಗೆ ಅನುಕೂಲ’
ಅಂತಾರಾಷ್ಟ್ರೀಯ ಕಾರ್ಗೊ ಮಂಗ ಳೂರಿನಿಂದಲೇ ಆರಂಭವಾದರೆ ಕರಾ ವಳಿಯ ಉದ್ಯಮ ವಲಯಕ್ಕೆ ಹೊಸ ಅವಕಾಶ ತೆರೆಯಲಿದೆ. ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಅನಂತೇಶ್‌ ವಿ. ಪ್ರಭು, ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next