ಹೊಸದಿಲ್ಲಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ ಇನ್ನು ಅದಾನಿ ಸಮೂಹದಿಂದ ನಡೆಯಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇದರ ಜತೆಗೆ ಅಹ್ಮದಾಬಾದ್, ಲಕ್ನೋ ವಿಮಾನ ನಿಲ್ದಾಣಗಳನ್ನು ಸರಕಾರ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲೂ ಸಮ್ಮತಿ ನೀಡಲಾಗಿದೆ. ಐವತ್ತು ವರ್ಷಗಳ ಕಾಲ ಸಂಸ್ಥೆ ಅದರ ನಿರ್ವಹಣೆ ನಡೆಸಲಿದೆ.
ಸದ್ಯ ಈ ಮೂರು ವಿಮಾನ ನಿಲ್ದಾಣಗಳು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿಯಂತ್ರಣಕ್ಕೆ ಒಳಪಟ್ಟಿವೆ. ಅದಕ್ಕೆ ಸಂಬಂಧಿಸಿದ ಬಿಡ್ ಪ್ರಕ್ರಿಯೆಯೂ ಮುಕ್ತಾಯವಾಗಿದೆ. ಈ ಹಿಂದೆ ನಡೆದಿದ್ದ ಬಿಡ್ ಪ್ರಕ್ರಿಯೆಯಲ್ಲಿ ಜೈಪುರ, ಗುವಾಹಾಟಿ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಡ್‌ಗಳನ್ನು ಗೆದ್ದಿತ್ತು. ಈ ಬಗ್ಗೆ ಮುಂದಿನ ಕೇಂದ್ರ ಸಂಪುಟ ಸಭೆಯಲ್ಲಿ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಅಭಿವೃದ್ಧಿ-ಶುಲ್ಕ
ಪ್ರಯಾಣಿಕರಿಗೆ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯವನ್ನು ಖಾಸಗಿ ಸಂಸ್ಥೆಗಳು ಕಲ್ಪಿಸಿ, ಅದರ ನಿರ್ವಹಣ ವೆಚ್ಚವನ್ನು ಪ್ರಯಾಣಿಕರಿಂದ ಶುಲ್ಕದ ರೂಪದಲ್ಲಿ ಸಂಗ್ರಹಿಸುವರು. ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗಿನ ನಿರ್ವಹಣೆ ಖಾಸಗಿ ಸಂಸ್ಥೆಗಳ ಪಾಲಾಗುತ್ತದೆ.