Advertisement

ಮಂಗಳೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆ

12:21 PM Feb 15, 2017 | Team Udayavani |

ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಮೇಕ್‌ ಇನ್‌ ಇಂಡಿಯಾ ಸಮ್ಮೇಳನದ ಸಮಾರೋಪ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Advertisement

“ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಯೋಜನೆಗೆ ಚಾಲನೆ ನೀಡುವ ಬಗ್ಗೆ ಮಂಗಳವಾರ ನಾಗರಿಕ ವಿಮಾನಯಾನ ಸಚಿವ ಗಜಪತಿ ರಾಜು ಅವರೊಂದಿಗೆ ಸುಧೀರ್ಘ‌ ಮಾತುಕತೆ ನಡೆಸಲಾಗಿದೆ. ರನ್‌ವೇ ವಿಸ್ತರಣೆಗೆ ಬೇಕಾಗುವ ಸುಮಾರು 190 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ತ್ವರಿತ ಗತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು,” ಎಂದು ತಿಳಿಸಿದರು.

“ಈ ಹಿನ್ನೆಲೆಯಲ್ಲಿ ರನ್‌ವೇ ವಿಸ್ತರಣೆ ಕಾಮಗಾರಿ ಚಾಲನೆಗೆ ಅಗತ್ಯ ಮಂಜೂರಾತಿ ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಲಾಗುವುದು. ನಿಲ್ದಾಣದ ರನ್‌ವೇ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ವಿಮಾನಯಾನ ಸಚಿವರು ಕೂಡ ಭರಸವೆ ನೀಡಿದ್ದಾರೆ,” ಎಂದು ತಿಳಿಸಿದರು.

“ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ವಿಮಾನಗಳ ಹಾರಾಟ ಪ್ರಾರಂಭಿಸುವ ಭರವಸೆ ನೀಡಿದ್ದಾರೆ. ಆದರೆ, ಈ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ಪ್ರಾರಂಭಿಸುವುದಕ್ಕೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕೆಲವೊಂದು ತಾಂತ್ರಿಕ ಅನಮತಿ ನೀಡುವುದು ಬಾಕಿಯಿದೆ. ಈ ಬಗ್ಗೆಯೂ ವಿಮಾನಯಾನ ಸಚಿವರ ಜತೆಗೆ ಮಾತುಕತೆ ನಡೆಸಿದ್ದು, ಅನುಮತಿ ಲಭಿಸಿದ ತಕ್ಷಣ ಹುಬ್ಬಳ್ಳಿ ನಿಲ್ದಾಣದಿಂದಲೂ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ,” ಎಂದು ಭರಸವೆ ನೀಡಿದರು.

“ಹುಬ್ಬಳ್ಳಿ, ಗುಲ್ಬರ್ಗ ಹೊರತಾಗಿ ಕೊಡಗು, ಬಳ್ಳಾರಿ, ಚಿಕ್ಕಮಗಳೂರಿನಂಥಹ ನಗರಗಳಲ್ಲಿಯೂ ವಿಮಾನಯಾನ ಸೇವೆ ಪ್ರಾರಂಭಿಸುವುದಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಗಮನಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ತೋರಣಗಲ್‌ನಲ್ಲಿ ಖಾಸಗಿ ವಿಮಾನ ನಿಲ್ದಾಣ ಬಳಸಿಕೊಂಡು ವಿಮಾನಯಾನ ಸೇವೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ತೋರಣಗಲ್‌ನ ಜೆಎಸ್‌ಡಬ್ಲ್ಯು ಖಾಸಗಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ವಿಮಾನಯಾನ ಸಚಿವರ ಜತೆಗೆ ಚರ್ಚಿಸಲಾಗಿದೆ. ಅಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ರನ್‌ವೇ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ,” ಎಂದು ಹೇಳಿದರು.

Advertisement

ನಗರದಲ್ಲಿ ನಡೆದ ಎರಡು ದಿನಗಳ “ಮೇಕ್‌ ಇನ್‌ ಇಂಡಿಯಾ’ ಉದ್ದಿಮೆದಾರರ ಸಮ್ಮೇಳನಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಏರೋಸ್ಪೇಸ್‌, ಮೆಷಿನ್‌ ಟೂಲ್ಸ್‌, ಜವಳಿ, ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಹಲವು ಕಂಪನಿಗಳು ಮುಂದೆ ಬಂದಿವೆ. ಈ ಸಮ್ಮೇಳನದಲ್ಲಿ ವಿವಿಧ ಆದ್ಯತಾ ವಲಯಗಳ ಬಗ್ಗೆ ಸುಮಾರು 500ಕ್ಕೂ ಹೆಚ್ಚು ಬಿ2ಬಿ ಸಭೆಗಳನ್ನು ನಡೆಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next