Advertisement

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

06:55 PM Apr 15, 2021 | Team Udayavani |

ಮಂಗಳೂರು : ಮಂಗಳೂರಿನಿಂದ ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನು ಕಡಿತಗೊಳಿಸಲಾಗಿದ್ದು ಖಾಸಗೀಕರಣದ ಹೆಸರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

Advertisement

ಮಂಗಳೂರು ವಿಮಾನ ನಿಲ್ದಾಣದ ಪ್ರಗತಿ ಕುಂಠಿತವಾಗಿದ್ದು ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ದಿಲ್ಲಿಗೆ ಇದ್ದ ನೇರ ಮತ್ತು ಮೈಸೂರು ಸಂಪರ್ಕದ ವಿಮಾನಯಾನ ರದ್ದುಪಡಿಸಲಾಗಿದ್ದರೆ ಮುಂಬಯಿಗೆ ಯಾನ ಸಂಖ್ಯೆ ಕಡಿತಗೊಳಿಸಲಾಗಿದೆ. ಗೋ-ಏರ್‌ ಮುಂಬಯಿ ಮತ್ತು ಇತರ ಪ್ರದೇಶಗಳಿಗೆ ಸೇವೆ ಆರಂಭಿಸಲು ಮುಂದೆ ಬಂದಿದ್ದರೂ ಕಾರ್ಯಾರಂಭವಾಗಿಲ್ಲ. ಬೆಂಗಳೂರು, ದಿಲ್ಲಿಗೆ ರಾತ್ರಿ 11, 11.30ಕ್ಕೆ ವಿಮಾನಯಾನವಿದ್ದರೆ ಅದರಲ್ಲಿ ಯಾರು ಪ್ರಯಾಣಿಸುತ್ತಾರೆ ಎಂದು ಐವನ್‌ ಪ್ರಶ್ನಿಸಿದರು.

ಮನ್ನಣೆ ಕಳೆದುಕೊಳ್ಳುವ ಭೀತಿ
ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮನ್ನಣೆ ಪಡೆದು 16 ವರ್ಷಗಳಾದರೂ ಗಲ್ಫ್ ಹೊರತು ಬೇರೆ ಯಾವುದೇ ಪ್ರವಾಸೋದ್ಯಮ ರಾಷ್ಟ್ರಗಳಿಗೆ ವಿಮಾನಯಾನ ಆರಂಭಿಸಿಲ್ಲ. ತಿರುಪತಿ, ಶಿರ್ಡಿ ಮೊದಲಾದೆಡೆಗೆ ಅನೇಕ ಮಂದಿ ಹೋಗುವವರಿದ್ದರೂ ನೇರ ಸೇವೆ ಇಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಮನ್ನಣೆ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ ಎಂದರು.

ಇದನ್ನೂ ಓದಿ :ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ : ಅನುಮೋದನೆಯೊಂದೇ ಬಾಕಿ

ಜನಸ್ನೇಹಿಯಾಗದ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ ಜನಸ್ನೇಹಿಯಾಗಿಲ್ಲ. ಪ್ರವಾಸೋದ್ಯಮ / ಪ್ರೇಕ್ಷಣೀಯ ಸ್ಥಳಗಳ ಮಾಹಿತಿಗೆ ಮಾಹಿತಿ ಕೇಂದ್ರವಿಲ್ಲ. ನಿಲ್ದಾಣದಿಂದ ನಗರಕ್ಕೆ ಬರಲು ಬಸ್‌ ವ್ಯವಸ್ಥೆ ಇಲ್ಲ. ನಿಲ್ದಾಣದಲ್ಲಿ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ವ್ಯವಸ್ಥೆಗೆ 2 ವರ್ಷಗಳಿಂದ ಕಾಮಗಾರಿ ನಡೆಸಿದರೂ ಪೂರ್ಣವಾಗಿಲ್ಲ ಎಂದು ಐವನ್‌ ಆರೋಪಿಸಿದರು.

Advertisement

ಏರ್‌ಪೋರ್ಟ್‌ ಉಳಿಸಿ ಚಳವಳಿ
ಈ ಹಿಂದೆ ಇದ್ದ ವಿಮಾನಯಾನದ ಜತೆಗೆ, ಹೊಸ ಪ್ರದೇಶಗಳಿಗೆ ಯಾನ ಆರಂಭ, ನಿಲ್ದಾಣದ ಅಭಿವೃದ್ಧಿ ಮೊದಲಾದ ಬೇಡಿಕೆಗಳ ಬಗ್ಗೆ ವಿಮಾನಯಾನ ಸಚಿವರು ಕೂಡಲೇ ಗಮನಹರಿಸಬೇಕು. ಇಲ್ಲದಿದ್ದಲ್ಲಿ “ಏರ್‌ಪೋರ್ಟ್‌ ಉಳಿಸಿ’ ಚಳವಳಿ ಆರಂಭಿಸಲಾಗುವುದು ಎಂದು ಐವನ್‌ ಹೇಳಿದರು.

ಅದಾನಿ ಹೆಸರು ಅಳಿಸಲು ಗಡುವು
ಅದಾನಿ ಸಂಸ್ಥೆಯು ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿ ವಿಮಾನ ನಿಲ್ದಾಣಕ್ಕೆ “ಅದಾನಿ ಏರ್‌ಪೋರ್ಟ್‌’ ಎಂದು ನಾಮಕರಣ ಮಾಡಿದೆ. ಇದು ಕಾನೂನಿಗೆ ವಿರುದ್ಧವಾದುದು. ಬದಲಾಯಿಸಿರುವ ಹೆಸರನ್ನು 15 ದಿನಗಳೊಳಗೆ ತೆಗೆಯಬೇಕು. ಇಲ್ಲದಿದ್ದರೆ ನಾಮಫ‌ಲಕಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸ್ಪಷ್ಟನೆ ನೀಡಿ
ಮಂಗಳೂರಿನಿಂದ ವಿವಿಧ ಕಡೆಗಳಿಗೆ ವಿಮಾನಯಾನ ಒದಗಿಸಲು ವಿಫ‌ಲವಾಗಿರುವ ಬಗ್ಗೆ ನಿಲ್ದಾಣ ಪ್ರಾಧಿಕಾರ ಸ್ಪಷ್ಟನೆ ನೀಡಬೇಕು. “ಉಡಾನ್‌’ ಯೋಜನೆಯಡಿ ಉಡುಪಿಯಲ್ಲಿ ವಿಮಾನ ನಿಲ್ದಾಣ ಆರಂಭಿಸಲು ಅವಕಾಶವಿದೆ. ಆದರೆ ಸಂಸದರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ ಎಂದು ಐವನ್‌ ಹೇಳಿದರು.

ಮನಪಾ ಸದಸ್ಯ ಎ.ಸಿ. ವಿನಯರಾಜ್‌, ಕಾಂಗ್ರೆಸ್‌ ಪ್ರಮುಖರಾದ ವಿವೇಕ್‌ರಾಜ್‌, ಶುಭೋದಯ ಆಳ್ವ, ಸಾಹುಲ್‌ ಹಮೀದ್‌, ಲುಕ್ಮಾನ್‌ ಬಂಟ್ವಾಳ, ಆಲಿಸ್ಟರ್‌ ಡಿ’ಕುನ್ಹಾ, ಅಪ್ಪಿ, ಭಾಸ್ಕರ್‌ ರಾವ್‌, ಸುಹಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next