Advertisement

ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ರೋಬೋಟ್‌ ಶಸ್ತ್ರಚಿಕಿತ್ಸೆ

02:06 AM Dec 29, 2019 | mahesh |

ಮಂಗಳೂರು: ವೈದ್ಯಕೀಯ ಕ್ಷೇತ್ರದ ಅತ್ಯುತ್ಕೃಷ್ಟ ಸಂಶೋಧನೆಯಾದ “ರೋಬೋಟ್‌ ಸಹಾಯಕ ಶಸ್ತ್ರಚಿಕಿತ್ಸಾ’ ಸೌಲಭ್ಯವು ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. “ಡ ವಿನ್ಸಿ 4ನೇ ತಲೆಮಾರಿನ ರೋಬೋಟ್‌ ಸಹಾಯಕ ಶಸ್ತ್ರಚಿಕಿತ್ಸಾ ವ್ಯವಸ್ಥೆ’ ಎಂಬ ಅತ್ಯಂತ ಸುಧಾರಿತ ಶಸ್ತ್ರ ಚಿಕಿತ್ಸಾ ವಿಧಾನ ಇದಾಗಿದ್ದು, ಎ.ಜೆ. ಆಸ್ಪತ್ರೆಯು ದೇಶದಲ್ಲಿಯೇ ಈ ಸೌಲಭ್ಯವನ್ನು ಹೊಂದಿರುವ 4ನೇ ಆಸ್ಪತ್ರೆಯಾಗಿದೆ.

Advertisement

ಪರಿಣಾಮಕಾರಿ ಫಲಿತಾಂಶ
ಈ ಬಗ್ಗೆ ಕನ್ಸಲ್ಟೆಂಟ್‌ ಯುರಾಲಜಿಸ್ಟ್‌ ಡಾ| ಪ್ರೀತಮ್‌ ಶರ್ಮ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ಶಸ್ತ್ರಚಿಕಿತ್ಸಕರ ಉಪಸ್ಥಿತಿಯಲ್ಲಿಯೇ ರೋಬೋಟ್‌ ಸಹಾಯದಿಂದ ಶಸ್ತ್ರಚಿಕಿತ್ಸೆ ನಡೆಸುವ ವಿಧಾನ ಇದಾಗಿದೆ. ನಿಶ್ಚಿತ ಪ್ರದೇಶವನ್ನು ದೊಡ್ಡದಾಗಿ ಕಾಣುವಂತೆ ಮಾಡಿ ಅತ್ಯಂತ ನಿಖರ ಹಾಗೂ ಕರಾರುವಕ್ಕಾದ ಶಸ್ತ್ರಚಿಕಿತ್ಸೆಯ ಮೂಲಕ ಅಷ್ಟೇ ನಿಖರ ಹಾಗೂ ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವಲ್ಲಿ ಇದು ಸಹಕಾರಿ ಎಂದರು.

ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಈ ವಿಧಾನವನ್ನು ಪ್ರಯೋಗಿಸಲಾಗುತ್ತಿದ್ದು, ಎಲ್ಲ ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲಿ, ಮೂತ್ರರೋಗ ಸಂಬಂಧಿ ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಶಸ್ತ್ರಚಿಕಿತ್ಸೆ, ಜಠರ ಮತ್ತು
ಕರುಳಿನ ಶಸ್ತ್ರಚಿಕಿತ್ಸೆ, ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ, ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟ್‌ ಉಪಯೋಗಿಸ ಲಾಗುವುದು. ಸುಮಾರು 15 ಕೋಟಿ ರೂ. ಬೆಲೆಬಾಳುವ ಯಂತ್ರ ಇದಾಗಿದ್ದು, ಯುಎಸ್‌ಎಯಿಂದ ತರಿಸಲಾಗಿದೆ ಎಂದು ಹೇಳಿದರು. ಕನ್ಸಲ್ಟೆಂಟ್‌ ಪ್ಲಾಸ್ಟಿಕ್‌ ಸರ್ಜನ್‌ ಡಾ| ಸನತ್‌ ಭಂಡಾರಿ ಉಪಸ್ಥಿತರಿದ್ದರು.

ವೈಶಿಷ್ಟ್ಯಗಳು
ಅತ್ಯಂತ ಕಡಿಮೆ ಅವಧಿಯ ಆಸ್ಪತ್ರೆ ವಾಸ, ಅತ್ಯಂತ ಕಡಿಮೆ ಪ್ರಮಾಣದ ನೋವು, ಹೆಚ್ಚು ಆರಾಮದಾಯಕ ಅನುಭವ, ಶೀಘ್ರ ಚೇತರಿಕೆ, ದೈನಂದಿನ ಚಟುವಟಿಕೆಗಳಿಗೆ ಶೀಘ್ರ ಮರಳುವಿಕೆ ಈ ಮಾದರಿಯ ಶಸ್ತ್ರಚಿಕಿತ್ಸೆಯಿಂದ ಸಾಧ್ಯ. ಶಸ್ತ್ರಚಿಕಿತ್ಸೆಯ ಪ್ರಾರಂಭದಲ್ಲಿ ಚರ್ಮದ ಮೇಲೆ ಮಾಡಲ್ಪಡುವ ಕೃತಕ ಗಾಯವು (ಇನ್ಸಿಶನ್‌) ಅತಿ ಚಿಕ್ಕದಾಗಿರುತ್ತದೆ. ಹಾಗಾಗಿ ಸೋಂಕು ಆಗುವ ಸಾಧ್ಯತೆ ತುಂಬಾ ಕಡಿಮೆ. ಕನಿಷ್ಠ ಪ್ರಮಾಣದ ಕಲೆ ಉಳಿಯುವ ಸಾಧ್ಯತೆ ಇರುತ್ತದೆ ಎಂದವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next