ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳವಾರ ಎರಡನೇ ಹಂತದಲ್ಲಿ 23,950 ಡೋಸ್ ಲಸಿಕೆ ಬಂದಿದೆ. ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಒಟ್ಟು 42,320 ಡೋಸ್ ಕೊವಿಶೀಲ್ಡ್ ಲಸಿಕೆ ರವಾನೆಯಾಗಿದ್ದು, ಜಿಲ್ಲೆಗೆ 23,950, ಉಡುಪಿಗೆ 11,900 ಹಾಗೂ ಚಿಕ್ಕಮಗಳೂರು ಜಿಲ್ಲೆಗೆ 6,470 ಲಸಿಕೆ ಸೇರಿದೆ.
ದ.ಕ.: 3 ದಿನಗಳಲ್ಲಿ 1,969 ಮಂದಿಗೆ ಲಸಿಕೆ :
ದ.ಕ. ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಳೆದ ಮೂರು ದಿನದಿಂದ ಲಸಿಕೆ ನೀಡಲಾಗುತ್ತಿದ್ದು, ವಿವಿಧ ಕಾರಣಗಳಿಂದಾಗಿ ಆರೋಗ್ಯ ಇಲಾಖೆಯ ಗುರಿ ತಲುಪಲಾಗುತ್ತಿಲ್ಲ. ಶನಿವಾರದಿಂದ 3 ದಿನಗಳಲ್ಲಿ ಒಟ್ಟು 1,969 ಮಂದಿ ಲಸಿಕೆ ಪಡೆದಿದ್ದಾರೆ. ಮೊದಲ ದಿನ 508 ಮಂದಿಗೆ ಲಸಿಕೆ ನೀಡುವ ಗುರಿಯಲ್ಲಿ 229 ಮಂದಿಗೆ ಲಸಿಕೆ ನೀಡಲು ಸಾಧ್ಯವಾಗಿತ್ತು. ಸೋಮವಾರ 24 ಕೇಂದ್ರಗಳಲ್ಲಿ 2,240 ಮಂದಿಯ ಗುರಿ ಇದ್ದರೂ 1,006 ಮಂದಿಗಷ್ಟೇ ನೀಡಲು ಸಾಧ್ಯವಾಯಿತು. ಮಂಗಳವಾರ 15 ಕೇಂದ್ರಗಳಲ್ಲಿ 1,256 ಮಂದಿಗೆ ಲಸಿಕೆ ನೀಡುವ ಗುರಿ ಇದ್ದು, 734 ಮಂದಿಗೆ ಲಸಿಕೆ ನೀಡಲಾಗಿದೆ.
ಉಡುಪಿ: 3 ದಿನಗಳಲ್ಲಿ 610 ಮಂದಿಗೆ ಲಸಿಕೆ
ಉಡುಪಿ: ಜಿಲ್ಲೆಯಲ್ಲಿ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜ. 14ರಂದು 22,103 ಮಂದಿಗೆ 12,000 ಡೋಸ್ ಲಸಿಕೆ ಬಂದಿತ್ತು. ಜ. 16ರಂದು ಲಸಿಕೆ ವಿತರಣೆಗೆ ಚಾಲನೆ ನೀಡಲಾಗಿತ್ತು. ಮೊದಲ ದಿನ 538 ಮಂದಿಗೆ ಲಸಿಕೆ ನೀಡಲು ಉದ್ದೇಶಿಸಿದ್ದು, 287 ಮಂದಿ ಹಾಕಿಸಿಕೊಂಡಿದ್ದರು. ಜ. 17ರಂದು 100 ಮಂದಿಗೆ ನೀಡಲು ಉದ್ದೇಶಿಸಿದ್ದು 40 ಮಂದಿ ಹಾಕಿಸಿಕೊಂಡಿದ್ದರು. ಜ. 18ರಂದು 100 ಮಂದಿಗೆ ಲಸಿಕೆ ನೀಡಲು ಉದ್ದೇಶಿಸಿದ್ದು 48 ಮಂದಿ ಹಾಕಿಸಿಕೊಂಡಿದ್ದರು. ಜ. 19ರಂದು 400 ಮಂದಿಗೆ ಲಸಿಕೆ ಹಾಕಲು ಉದ್ದೇಶಿಸಿದ್ದು, 235 ಮಂದಿ ಹಾಕಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಮಾಸಾಂತ್ಯಕ್ಕೆ ಎಲ್ಲ 22,103 ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ.
ಮಾರ್ಗಸೂಚಿಯಂತೆ ಗರ್ಭಿಣಿಯರಿಗೆ, 18 ವರ್ಷಕ್ಕಿಂತ ಕಡಿಮೆ ವರ್ಷದವರಿಗೆ, ಬಾಣಂತಿಯರು, ಹಾಲುಣಿಸುವ ತಾಯಂದಿರಿಗೆ ಲಸಿಕೆ ಹಾಕುವಂತಿಲ್ಲ. ಇದೇ ಕಾರಣಕ್ಕೆ ಶನಿವಾರ ವೆನ್ಲಾಕ್‌ಗೆ ಲಸಿಕೆ ಪಡೆಯಲು ಬಂದ ಕೆಲವರನ್ನು ವಾಪಸ್ ಕಳುಹಿಸಲಾಯಿತು.