Advertisement

ಮಂಗಳೂರು ಬಾಲಕರ ಅಪಹರಣ ಯತ್ನ ಪ್ರಕರಣ : ಕ್ರಿಮಿನಲ್‌ ಹಿನ್ನೆಲೆಯ ಬಂಧಿತರು ಪೊಲೀಸ್‌ ಕಸ್ಟಡಿಗೆ

02:21 AM Jan 17, 2021 | Team Udayavani |

ಮಂಗಳೂರು: ಕೊಂಚಾಡಿ ಮಹಾಲಸಾ ದೇವಸ್ಥಾನದ ಎದುರು ಜ.13ರಂದು ನಡೆದ ಬಾಲಕರ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಾವೂರಿನ ರಕ್ಷಕ್‌ ಶೆಟ್ಟಿ (22), ಬೋಂದೆಲ್‌ನ ಅಲಿಸ್ಟರ್‌ ತಾವ್ರೊ (21) ಮತ್ತು ಕಾವೂರು ಕೆಐಒಸಿಎಲ್‌ ಕ್ವಾಟ್ರರ್ಸ್‌ನ

Advertisement

ರಾಹುಲ್‌ ಸಿನ್ಹ (21) ರನ್ನು ಬಂಧಿಸಿದ್ದು ಬಂಧಿತರೆಲ್ಲರೂ ಕ್ರಿಮಿ ನಲ್‌ ಹಿನ್ನೆಲೆಯವರಾಗಿದ್ದಾರೆ.  ರಕ್ಷಕ್‌ ಶೆಟ್ಟಿ ವಿರುದ್ಧ ಕಾವೂರು ಠಾಣೆಯಲ್ಲಿ 2018ರಲ್ಲಿ ಹಲ್ಲೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಅಲಿಸ್ಟರ್‌ ತಾವ್ರೊ ಹಾಗೂ ರಾಹುಲ್‌ ಸಿನ್ಹ ವಿರುದ್ಧ ಡ್ರಗ್ಸ್‌ ಸೇವನೆ ಮತ್ತು ಮಾರಾಟಕ್ಕೆ ಸಂಬಂಧಿಸಿ ಎನ್‌ಡಿಪಿಎಸ್‌ ಕಾಯಿದೆಯಡಿ ಕಾವೂರು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ. ಅಲಿಸ್ಟರ್‌ ವಿರುದ್ಧ ಮಂಗಳೂರು ಅಬಕಾರಿ ಠಾಣೆಯವರು ಕೂಡ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಅಪಹರಣ ಯತ್ನ : ದಾಖಲು  :

“ಪ್ರಾಂಕ್‌’ (ತಮಾಷೆಗಾಗಿ) ಮಾಡಿ ಅದನ್ನು ಯೂ ಟ್ಯೂಬ್‌ಗ ಅಪ್‌ಲೋಡ್‌ ಮಾಡುವ ಉದ್ದೇಶ ಹೊಂದಿದ್ದೆವು’ ಎಂದು ಬಂಧಿತರು ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಇದನ್ನು ನಂಬಲಾಗದು. ಒಂದು ಸ್ಕೂಟರ್‌ನಲ್ಲಿ ಮೂವರು ಬಂದು ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಅಪ್ರಾಪ್ತ ಮಕ್ಕಳನ್ನು ಗೋಣಿ ಚೀಲದಲ್ಲಿ ತುಂಬಿಸಿ ಎತ್ತಿಕೊಂಡು ಹೋಗಲು ಯತ್ನಿಸಿರುವುದು ತಪ್ಪು. ಹಾಗಾಗಿ ಇವರೆಲ್ಲರ ವಿರುದ್ಧ ಅಪಹರಣ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಕೃತ್ಯ ಸಿಸಿ ಕೆಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ನ್ಯಾಯಾಲಯವು ಆರೋಪಿಗಳನ್ನು 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ. ಇನ್ನಷ್ಟು ವಿಚಾರಣೆಗೊಳಪಡಿಸಲಾಗುವುದು. ಇವರ ಮೇಲೆ ಡ್ರಗ್ಸ್‌ ಸಂಬಂಧ ಪ್ರಕರಣಗಳೂ ಇರುವುದರಿಂದ ಈ ಕೃತ್ಯವನ್ನು ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದು ವಿಚಾರಣೆಯ ಅನಂತರವಷ್ಟೇ ಸ್ಪಷ್ಟವಾಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಸಾರ್ವಜನಿಕರು ಎಚ್ಚರದಿಂದಿರಿ :

Advertisement

ಸಾರ್ವಜನಿಕರು ಯಾವುದೇ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಯಾರಾದರೂ ಓಡಾಡಿಕೊಂಡಿದ್ದರೆ ತುರ್ತುಸಹಾಯವಾಣಿ 112ಗೆ  ಅಥವಾ ಸ್ಥಳೀಯ ಪೊಲೀಸರಿಗೆ ಕರೆ ಮಾಡಬೇಕು ಎಂದು ಆಯುಕ್ತರು ಮನವಿ ಮಾಡಿದರು.

ಆಯುಕ್ತ ಎನ್‌.ಶಶಿಕುಮಾರ್‌ ಅವರ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಉಪಪೊಲೀಸ್‌ ಆಯುಕ್ತ ಹರಿರಾಂ ಶಂಕರ್‌, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್‌ ಎ.ಗಾಂವ್ಕರ್‌ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್‌ ಆಯುಕ್ತ ರಂಜಿತ್‌ ಕುಮಾರ್‌ ಬಂಡಾರು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಂಕನಾಡಿ ನಗರ ಠಾಣಾ ಪೊಲೀಸ್‌ ನಿರೀಕ್ಷಕ ಅಶೋಕ್‌ ಪಿ., ಉಪನಿರೀಕ್ಷಕರಾದ ಕೃಷ್ಣ ಬಿ., ರಘು ನಾಯಕ್‌ ಅವರ ತಂಡ ಪಾಲ್ಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next