ಮಂಗಳೂರು: ದ.ಕ. ಜಿಲ್ಲೆಯ ಒಟ್ಟು ಮತದಾರರಲ್ಲಿ ಈ ಬಾರಿ 75 ಮಂದಿ ತೃತೀಯ ಲಿಂಗಿಗಳು (ಮಂಗಳ ಮುಖೀಯರು) ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಮಂಗಳೂರು ನಗರ ದಕ್ಷಿಣದಲ್ಲೇ ಹೆಚ್ಚಿನ ಸಂಖ್ಯೆಯ ಮಂಗಳಮುಖೀ ಮತದಾರರಿದ್ದು, ಬೆಳ್ತಂಗಡಿಯಲ್ಲಿ ಈ ಸಂಖ್ಯೆ ಶೂನ್ಯವಾಗಿದೆ.
2023ರ ಮಾರ್ಚ್ 29ರ ಮತದಾರರ ಪಟ್ಟಿ ಯಲ್ಲಿ ಮಂಗಳೂರು ನಗರ ದಕ್ಷಿಣದಲ್ಲಿ 46 ಮಂಗಳಮುಖೀ ಯ ರಿದ್ದಾರೆ. ಬೆಳ್ತಂಗಡಿಯಲ್ಲಿ ಮಂಗಳಮುಖೀ ಮತದಾರರು ಶೂನ್ಯವಾಗಿದ್ದು, ಮೂಡುಬಿದಿರೆಯಲ್ಲಿ 5 ಮಂದಿ, ಮಂಗಳೂರು ನಗರ ಉತ್ತರದಲ್ಲಿ 11, ಮಂಗಳೂರು (ಉಳ್ಳಾಲ) 7, ಬಂಟ್ವಾಳದಲ್ಲಿ 1, ಪುತ್ತೂರು 3, ಸುಳ್ಯದಲ್ಲಿ 2 ಮಂದಿ ಮಂಗಳಮುಖೀಯರು ಮತದಾನದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.
ದ.ಕ. ಜಿಲ್ಲೆಯಲ್ಲಿ 2018ರಲ್ಲಿ ಪ್ರಥಮ ಬಾರಿಗೆ ಮಂಗಳಮುಖೀಯರಿಗೆ ಮತದಾರರ ಚೀಟಿಯ ಮೂಲಕ ಮತ ದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 2014ರಲ್ಲಿ ಸರ್ವೋತ್ಛ ನ್ಯಾಯಾಲಯವು ಮಂಗಳಮುಖೀಯರನ್ನು ಅಧಿಕೃತ ವಾಗಿ “ತೃತೀಯ ಲಿಂಗಿ’ಗಳು ಎಂದು ಘೋಷಿಸಿದ ಬಳಿಕ ಅವರಿಗೂ ಮತದಾರರ ಚೀಟಿಯನ್ನು ನೀಡುವ ಪ್ರಕ್ರಿಯೆ ಆರಂಭಗೊಂಡಿತ್ತು. ಜಿಲ್ಲೆಯ ಬಹುತೇಕ ಮಂಗಳ ಮುಖೀಯರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಹಲವು ವರ್ಷಗಳಿಂದ ಇಲ್ಲಿ ನೆಲೆಸಿರುವವರೇ ಆಗಿರುವ ಕಾರಣ ಸೂಕ್ತ ದಾಖಲೆಗಳ ಕೊರತೆಯಿಂದ ಮತ ದಾರರ ಚೀಟಿಯನ್ನು ಒದಗಿಸುವುದು ಕೂಡ ಜಿಲ್ಲಾಡ ಳಿತಕ್ಕೆ ತ್ರಾಸದಾಯಕ ಕೆಲಸವಾಗಿತ್ತು. ಹಾಗಿದ್ದರೂ ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ಜಿಲ್ಲಾಡಳಿತ ಮಂಗಳ ಮುಖೀಯರನ್ನು ಗುರುತಿಸಿ ಅವರಿಗೆ ಮತ ದಾನದ ಹಕ್ಕನ್ನು ನೀಡಿದ್ದು, 2018ರಲ್ಲಿ ಸುಮಾರು 100 ಮಂದಿ ಮತದಾರರಿದ್ದರೆ ಈ ಬಾರಿ ಆ ಸಂಖ್ಯೆ 75ಕ್ಕೆ ಇಳಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 20 ಮಂದಿ ಮತದಾರರು
ಉಡುಪಿ: ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಬಹುತೇಕ ಪೂರ್ಣಗೊಂಡಿದ್ದರೂ ಎ. 11ರವರೆಗೂ ಆನ್‌ಲೈನ್ ಹಾಗೂ ಆಫ್ಲೈನ್‌ನಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಜಿಲ್ಲೆಯ 10,29,678 ಮತದಾರರಲ್ಲಿ 20 ತೃತೀಯ ಲಿಂಗಿಯರು (ಮಂಗಳಾಮುಖೀಯರು) ಇದ್ದಾರೆ.
ಜಿಲ್ಲಾ ಸ್ವೀಪ್ ಸಮಿತಿಯು ಉಡುಪಿ 80ನೇ ಬಡಗಬೆಟ್ಟು ನಿವಾಸಿಯಾಗಿರುವ ಮಂಗಳಮುಖೀ ಶೀಲಾ ಡೈಮಂಡ್ ಅವರಿಂದ ಈಗಾಗಲೇ ಮತದಾನ ಜಾಗೃತಿ ಹಾಗೂ ಮತ ದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ವೀಡಿಯೋ ಸಂದೇಶ ವನ್ನು ಸಿದ್ಧಪಡಿಸಿ, ಯುಟ್ಯೂಬ್ ಚಾಲನಲ್‌ನಲ್ಲೂ ಅದನ್ನು ಪ್ರಸಾರ ಮಾಡಿದೆ. ಈ ಮೂಲಕ ಜಿಲ್ಲಾ ಸ್ವೀಪ್ ಸಮಿತಿಯು ಮಾದರಿ ನಡೆಯನ್ನು ಈಗಾಗಲೇ ಅನುಸರಿಸಿದೆ.
ಜಿಲ್ಲೆಯಲ್ಲಿ 20 ಮಂಗಳಮುಖೀ ಮತದಾರರಿದ್ದಾರೆ. ಅವ ರಲ್ಲಿ 10 ಮಂದಿ ಸರ್ವಿಸ್ ಮತದಾರರು ಹಾಗೂ 10 ಮಂದಿ ಸಾಮಾನ್ಯ ಮತದಾರರಾಗಿದ್ದಾರೆ. ಉಡುಪಿಯಲ್ಲಿ 2, ಬೈಂದೂರಿನಲ್ಲಿ 6, ಕುಂದಾಪುರದಲ್ಲಿ 4, ಕಾಪುವಿನಲ್ಲಿ 8 ಮಂದಿ ಯನ್ನು ಗುರುತಿಸಲಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ಯಾರು ಇಲ್ಲ. 2018ರಲ್ಲಿ 24 ತೃತೀಯ ಲಿಂಗಿಗಳು ಮತ ದಾರರ ಪಟ್ಟಿಯಲ್ಲಿದ್ದರು. ಈಗ ಆ ಸಂಖ್ಯೆ 20ಕ್ಕೆ ಇಳಿದಿದೆ.