Advertisement

ವಿವಿಧೆಡೆ ಮಂಗಳ ಮೂರ್ತಿ ಪ್ರತಿಷ್ಠಾಪನೆ

04:16 PM Sep 15, 2018 | |

ಬಳ್ಳಾರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ಹೊಸಬಟ್ಟೆಗಳನ್ನು ಧರಿಸಿ, ಮನೆಯಲ್ಲಿ ಗಣೇಶನಿಗೆ ವಿಶೇಷ ಪೂಜೆ, ಅರ್ಚನೆ, ನೈವೇದ್ಯ ಸಮರ್ಪಿಸಿ ಸಕಲ ವಿಘ್ನಗಳ ನಿವಾರಕನಿಗೆ ನಾಗರಿಕರು ಭಕ್ತಿ ಸಮರ್ಪಿಸಿದರು.

Advertisement

ಮಿತ್ರ ಮಂಡಳಿ, ಗಣೇಶ ಸೇವಾ ಸಮಿತಿ ಸೇರಿದಂತೆ ವಿವಿಧ ಸಮಿತಿ ಸದಸ್ಯರು ಪ್ರತಿಷ್ಠಾಪಿಸಿದ ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಸಮಿತಿ ಸದಸ್ಯರು ತೀರ್ಥ, ಪ್ರಸಾದಗಳನ್ನು ವಿತರಿಸಿದರು.

ಗಮನ ಸೆಳೆದ ಗಣೇಶ: ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಎಂಎಂಟಿಸಿ ಉದ್ಯಾನವನದಲ್ಲಿ ಯುವ
ಮಿತ್ರ ಮಂಡಳಿ ಅವರು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಗಮನಸೆಳೆಯಿತು. ಗುರುವಾರ ಬೆಳಿಗ್ಗೆ ಸಮಿತಿ ಸದಸ್ಯರು
ಶಾಸ್ತ್ರೋತ್ತವಾಗಿ ವಿಧಿವಿಧಾನಗಳಿಂದ ವಿಶೇಷ ಪೂಜೆ ಸಲ್ಲಿಸಿ ಗಣೇಶನನ್ನು ಪ್ರತಿಷ್ಠಾಪಿಸಿದರು. ಸಂಜೆ ಖ್ಯಾತ ಹಾಸ್ಯ
ಕಲಾವಿದ ಗಂಗಾವತಿ ಪ್ರಾಣೇಶ ಅವರ ತಂಡದ ಸದಸ್ಯರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಗಮನಸೆಳೆಯಿತು.

ಈ ವೇಳೆ ಹಸಿರೇ ಉಸಿರು, ಉಸಿರೇ ಹಸಿರು, ಸ್ವತ್ಛ ಮನ, ಸ್ವತ್ಛ ಮನೆ, ನಮ್ಮನ್ನು ರಕ್ಷಿಸುತ್ತಿರುವ ಸೈನಿಕರಿಗೆ,
ನಮಗೆಲ್ಲರಿಗೂ ಆಹಾರ ಧಾನ್ಯಗಳನ್ನು ಒದಗಿಸುತ್ತಿರುವ ರೈತರಿಗೆ ಕೃತಜ್ಞತೆ, ಪ್ಲಾಸ್ಟಿಕ್‌ ಮುಕ್ತ ಭಾರತ್‌, ಆರೋಗ್ಯ
ಹಾಗೂ ವ್ಯಾಯಾಮದ ಕುರಿತು ಹಾಸ್ಯ ಕಲಾವಿದರಿಂದ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

53 ಅಡಿ ಎತ್ತರದ ತೆಂಗಿನಕಾಯಿ ಗಣೇಶ: ನಗರದ ನೆಹರೂ ಕಾಲೋನಿಯಲ್ಲಿ ಸುಮುಖ ಮಿತ್ರಮಂಡಳಿ ವತಿಯಿಂದ
ತೆಂಗಿನಕಾಯಿಯಿಂದ ನಿರ್ಮಿಸಲಾದ 53 ಅಡಿ ಎತ್ತರದ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗಿದೆ.  ಇದಕ್ಕೆ 8500 ತೆಂಗಿನಕಾಯಿಗಳನ್ನು ಬಳಸಲಾಗಿದ್ದು, 53 ಅಡಿ ಎತ್ತರದ ಗಣೇಶ ರಾಜ್ಯದಲ್ಲೇ ಪ್ರಥಮ ಎಂದು ಹೇಳಲಾಗುತ್ತಿದೆ. ಮಂಡಳಿಯ ಸದಸ್ಯರು ಇದಕ್ಕಾಗಿ ಸಾವಿರಾರು ರೂ. ವೆಚ್ಚ ಮಾಡಿದ್ದಾರೆ. ಸುಮುಖ ಮಿತ್ರ ಮಂಡಳಿಯು ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲೇ ಅತಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆಯುತ್ತಿದೆ. 

Advertisement

 ಈ ಹಿಂದೆಯೂ 53 ಅಡಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸುವುದರ ಜತೆಗೆ ಅದನ್ನು ಸ್ಥಳದಲ್ಲೇ ವಿಸರ್ಜನೆ
ಮಾಡುವ ಮೂಲಕ ಹಾಗೂ ಹಾಲು, ನೀರು ಎರೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ತೆಂಗಿನಕಾಯಿ ಗಣೇಶನನ್ನು ನೋಡಲು ಸಾವಿರಾರು ಜನರು ಆಗಮಿಸುತ್ತಿದ್ದಾರೆ. 11 ದಿನಗಳ ಪ್ರತಿಷ್ಠಾಪಿಸುವ ಈ ಗಣೇಶ ಮೂರ್ತಿಯನ್ನು 11ನೇ ದಿನವಾದ ಸೆ. 23ರಂದು ವಿಸರ್ಜಿಸಲಾಗುತ್ತಿದ್ದು, ಅಂದು ಗಣೇಶನ ನಿರ್ಮಾಣಕ್ಕೆ ಬಳಸಲಾಗಿದ್ದ ತೆಂಗಿನ ಕಾಯಿಗಳನ್ನು 50 ರೂ.ಗಳಿಗೆ ಒಂದರಂತೆ ಭಕ್ತರಿಗೆ ವಿತರಿಸಲಾಗುತ್ತದೆ ಎಂದು ಮಂಡಳಿಯ ಸದಸ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next