ಮದ್ದೂರು: ಮಂಡ್ಯ ಜಿಪಂ ಅನುದಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಕ್ರಿಯಾ ಯೋಜನೆಗಳಿಗೆ ರಾಜ್ಯ ಸರ್ಕಾರ ನೀಡಿರುವ ಅನುಮೋದನೆ ಕಾನೂನು ಬಾಹಿರ. ಹೀಗಾಗಿ ಪರಿಷ್ಕೃತ ಆದೇಶಕ್ಕಾಗಿ ಮತ್ತೂಮ್ಮೆ ವರದಿ ಸಲ್ಲಿಸಲು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಿಪಂ ಕಚೇರಿ ಕಾವೇರಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಅಶೋಕ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿ ಸಿದ್ದ ಸಭೆಯಲ್ಲಿ ಸರ್ಕಾರಕ್ಕೆ ಕ್ರಿಯಾಯೋಜನೆ ವರದಿ ಸಲ್ಲಿಸುವ ಬಗ್ಗೆ ತೀರ್ಮಾನ ಮಾಡಲಾಯಿತು. ಜತೆಗೆ 2020-21ನೇ ಆರ್ಥಿಕ ವರ್ಷ ಅಂತ್ಯದಲ್ಲಿರುವು ದರಿಂದ ತುಂಡುಗುತ್ತಿಗೆ ನೀಡುವುದರಿಂದ ಪೂರ್ಣ ಕಾಮಗಾರಿಗಳ ಅನುಷ್ಠಾನ ಸಾಧ್ಯವಿಲ್ಲದ ಕಾರಣ ಒಟ್ಟು ಮೊತ್ತಕ್ಕೆ “ಪ್ಯಾಕೇಜ್ ಮಾಡಿ’ ಟೆಂಡರ್ ಮಾಡಲು ಕ್ರಮವಹಿಸಲು ನಿರ್ಣಯಿಸಲಾಯಿತು.
ತಮಗಿಷ್ಟ ಬಂದಂತೆ ಕ್ರಿಯಾ ಯೋಜನೆ: ಸಿ.ಅಶೋಕ್ ಮಾತನಾಡಿ, ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಅವರು ಯಾವುದೇ ಸಭೆ ಕರೆಯದೇ, ಚರ್ಚೆ ಮಾಡದೇ ಪೂರ್ವಾಗ್ರಹ ಪೀಡಿತರಾಗಿ ತಯಾರಿಸಿದ ಕ್ರಿಯಾ ಯೋಜನೆಗೆ ತಮ್ಮ ಹಂತದಲ್ಲಿ ಅನುಮೋದನೆ ನೀಡಿರುವುದು ಸಂಪೂರ್ಣವಾಗಿ ಕಾನೂನು ಬಾಹಿರ. 2020ರ ನ.7ರಂದು ಸ್ಥಾಯಿ ಸಮಿತಿಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಅಧ್ಯಕ್ಷರು ಏಕೆ ಹೇಳಿದ್ದರು. ಅದರಂತೆ ಸ್ಥಾಯಿ ಸಮಿತಿಗಳ ಸರ್ವ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿ, ಎಲ್ಲಾ ಕ್ಷೇತ್ರಗಳಿಗೂ ಸಮಾನವಾಗಿ ಯಾವುದೇ ಲೋಪವಿಲ್ಲದೆ ಆದ್ಯತೆ ಮೇರೆಗೆ ಕಾಮಗಾರಿ ಹಂಚಲಾಗಿತ್ತು. ಆದರೆ, ಸ್ಥಾಯಿ ಸಮಿತಿಯಲ್ಲಿ ಅನುಮೋದನೆಯಾದ ಕ್ರಿಯಾ ಯೋಜನೆಗೆ ತಡೆಹಿಡಿದು, ಕಾನೂನು ವಿರುದ್ಧವಾಗಿ 3-4 ಜನ ಸೇರಿಕೊಂಡು ತಮಗಿಷ್ಟ ಬಂದಂತೆ ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರ ಬರೆಯಲು ಸೂಚನೆ: ಅಧ್ಯಕ್ಷೆ ತಯಾರಿಸಿರುವ ಕ್ರಿಯಾ ಯೋಜನೆಯಲ್ಲಿ ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ಶೇ.25ರಷ್ಟು ಅನುದಾನ ನಿಗದಿಪಡಿಸಿಲ್ಲ. ಅಂಗವಿಕಲ ಕಲ್ಯಾಣಕ್ಕಾಗಿ ಶೇ.5ರಷ್ಟು ಅನುದಾನ ನೀಡಿಲ್ಲ. ಆದರೂ, ಈ ಕ್ರಿಯಾ ಯೋಜನೆಗೆ ಸರ್ಕಾರದ ಹಂತದಲ್ಲಿ ಅನುಮೋದನೆ ನೀಡಿರುವುದು ಸರಿಯಾಗಿಲ್ಲ. ಆದ್ದರಿಂದ ಅದನ್ನು ಸರ್ಕಾರ ಸರಿಪಡಿಸಿ ತಮ್ಮ ಆದೇಶ ಹಿಂಪಡೆದು ಈ ಹಿಂದೆ ಸ್ಥಾಯಿ ಸಮಿತಿಗಳು ತಯಾರಿಸಿದ ಕ್ರಿಯಾ ಯೋಜನೆಗೆ ಯಥಾವತ್ತಾಗಿ ಅನುಮೋದನೆ ನೀಡಬೇಕು. ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುಲ್ಫಿಖರ್‌ವುಲ್ಲಾ ಅವರಿಗೆ ಸೂಚಿಸಲಾಗುವುದು ಎಂದರು.
ಇದನ್ನೂ ಓದಿ :ಬಳ್ಳಾ ರಿ ಇಬ್ಭಾಗದ ಕೂಗಿಗೆ ಬಲ!
2021ರ ಜ.27ರಂದು ಸರ್ಕಾರ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನ ಮಾಡದಂತೆ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಲು ಸಿಇಒ ಅವರಿಗೆ ಪತ್ರ ಬರೆಯಬೇಕು. ಒಂದು ವೇಳೆ ಇದನ್ನು ಮೀರಿ ಅನುಷ್ಠಾನ ಮಾಡಿದ್ದಲ್ಲಿ ಮುಂದೆ ಒದಗುವ ನೂನಾತ್ಮಕ ಬಿಕ್ಕಟ್ಟಿಗೆ ಅನುಷ್ಠಾನಾಧಿಕಾರಿಗಳನ್ನೇ ಹೊಣೆಗಾರ ರ ನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ಎಚ್.ಟಿ.ಮಂಜು, ಬಿ.ರವಿ,ಹನುಮಂತು, ಅನುಪಮಾಕುಮಾರಿ, ಜಿಪಂ ಉಪಕಾರ್ಯದರ್ಶಿ ಎನ್.ಡಿ.ಪ್ರಕಾಶ್ ಇತರರಿದ್ದರು.