Advertisement

ವಿವಾದಿತ ರಸ್ತೆಯಲ್ಲಿ ಗ್ರಾಮದೇವತೆ ಮೆರವಣಿಗೆಗೆ ಅಡ್ಡಿ

05:27 PM Dec 19, 2019 | Team Udayavani |

ಮಂಡ್ಯ/ಮದ್ದೂರು: ವಿವಾದಿತ ರಸ್ತೆಯಲ್ಲಿ ಗ್ರಾಮ ದೇವತೆ ಮೆರವಣಿಗೆ ನಡೆಸುವ ವಿಚಾರವಾಗಿ ಗ್ರಾಮಗಳ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದ ಬಿಗುವಿನ ಪರಿಸ್ಥಿತಿ ಉಂಟಾದ ಘಟನೆ ತಾಲೂಕಿನ ನಗರಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

Advertisement

ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೆಯೂ ಎರಡು ಗುಂಪುಗಳ ನಡುವೆ ವಿವಾದ ಏರ್ಪಟ್ಟಿದ್ದು, ಅಂತಿಮವಾಗಿ ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್‌ ಗಾಮ ಪಂಚಾಯಿತಿಗೆ ಆದೇಶ ನೀಡಿತ್ತು.

ಕರಗ ಮೆರವಣಿಗೆ: ವಿವಾದದ ನಡುವೆಯೂ ಬುಧವಾರ ನಗರಕೆರೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಕಾಳಮ್ಮ ದೇವಿಯ ದೇಗುಲ ಪ್ರತಿಷ್ಠಾಪನೆ ಅಂಗವಾಗಿ 48 ದಿನಗಳ ಮಂಡಲಪೂಜೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ದೊಡ್ಡರಸಿನಕೆರೆ ಸಣ್ಣಕ್ಕಿರಾಯ ಬಸವ,
ರಾಮನಗರದ ಜೈಪುರದ ಶ್ರೀ ಚಾಮುಂಡೇಶ್ವರಿ, ದೇಶಹಳ್ಳಿಯ ಬಸವ, ನೀಲಕಂಠನಹಳ್ಳಿ ಶ್ರೀ ಮಾಯಮ್ಮ ಹಾಗೂ ನಗರಕೆರೆ ಶ್ರೀ ಚಿಕ್ಕಮ್ಮ ಕರಗ ಮೆರವಣಿಗೆ ಏರ್ಪಡಿಸಲಾಗಿತ್ತು.

ಗ್ರಾಮ ದೇವತೆಗಳು ಹಾಗೂ ಬಸವನ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ನಂತರ ಗ್ರಾಮಠಾಣಾ ವ್ಯಾಪ್ತಿಯ ವಿವಾದಿತ ರಾಜಬೀದಿ ರಸ್ತೆಗಳಲ್ಲಿ ತೆರಳಲು ಬಂದಾಗ ಪೊಲೀಸರು ಮೆರವಣಿಗೆಗೆ ಅಡ್ಡಿಪಡಿಸಿದರು. ಹೈಕೋರ್ಟ್‌ ಆದೇಶ ವಿರುವುದರಿಂದ ರಾಜಬೀದಿ ರಸ್ತೆಗಳಲ್ಲಿ ಮೆರವಣಿಗೆ ನಡೆಸದಂತೆ ತಾಕೀತು ಮಾಡಿದರು.

ಒಂದು ಗುಂಪಿನ ಮನವೊಲಿಕೆ: ವಿವಾದಿತ ರಸ್ತೆಯಲ್ಲಿ ಮೆರವಣಿಗೆ ನಡೆಸುವುದರ ಕುರಿತು ಬೇರೆ ಮಾರ್ಗದಲ್ಲಿ ತೆರಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸತೀಶ್‌ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮೆರವಣಿಗೆಯಲ್ಲಿ ಬಂದಿದ್ದ ಬಸವಗಳನ್ನು ಉದ್ರಿಕ್ತ ಗುಂಪು ವಿವಾದಿತ ರಸ್ತೆಗೆ ತೆರಳಿಸುವುದಕ್ಕೆ ಯತ್ನಿಸಿದರು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಆದರೂ ತಾಳ್ಮೆ ಕಳೆದುಕೊಳ್ಳದ ಪೊಲೀಸರು ಗ್ರಾಪಂ ಸದಸ್ಯ ಸತೀಶ್‌ ಬೆಂಬಲಿಗರ ಗುಂಪಿನ ಮನವೊಲಿಸುವಲ್ಲಿ ಯಶಸ್ವಿಯಾದರು. ವಿವಾದಿತ ರಸ್ತೆ ಬಿಟ್ಟು
ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸುವಂತೆ ಸೂಚಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ದೇಗುಲದ ಬಳಿ ಅಂತ್ಯ ಗೊಂಡಿತು. ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಪೃಥ್ವಿಕುಮಾರ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋ ಬಸ್ತ್ ಮಾಡಲಾಗಿದ್ದು, ಪರಿಸ್ಥಿತಿ ಶಾಂತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next