ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಅಂಚನಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಬಿರುಗಾಳಿ ಮಳೆಯಿಂದ ತೆಂಗಿನ ಮರಗಳು ಧರೆಗುರುಳಿ ಬಿದ್ದಿದ್ದವು. ಅದರಲ್ಲೂ ಗ್ರಾಮದ ಈರಾಜಮ್ಮ ಅವರು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ತೋಟದ ಸುಮಾರು 60 ಮರಗಳು ಧರೆಗುರುಳಿ ಬಿದ್ದಿದ್ದವು.
ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿತ್ತು. ಮರ ಕಳೆದುಕೊಂಡಿದ್ದ ಈರಾಜಮ್ಮ ಬಿದ್ದಿದ್ದ ತೆಂಗಿನ ಮರಗಳ ಪಕ್ಕ ಕುಳಿತು ರೋಧಿಸುತ್ತಿದ್ದರು. ವಿಷಯ ತಿಳಿದ ತಹಶೀಲ್ದಾರ್ ಎಂ.ರೂಪಾ ಸ್ಥಳಕ್ಕೆ ಭೇಟಿ ನೀಡಿ ಈರಾಜಮ್ಮಳಿಗೆ ಧೈರ್ಯ ಹೇಳಿ ನಾನು ನಿಮ್ಮ ಮಗಳಿದ್ದಂತೆ ಊಟ ಮಾಡಿ ಎಂದು ಸಂತೈಸಿದರು.
ಊಟ ಮಾಡಿಸಿ ಆತ್ಮವಿಶ್ವಾಸ ತುಂಬಿದ ತಹಶೀಲ್ದಾರ್ ರೂಪ. ನಾನು ನಿಮ್ಮ ಮಗಳಿದ್ದಂತೆ, ಪ್ರಕೃತಿ ವಿಕೋಪಕ್ಕೆ ಯಾರೂ ಹೊಣೆಯಾಗಲು ಸಾಧ್ಯವಿಲ್ಲ. ಸರ್ಕಾರ ನಿಮ್ಮೊಂದಿಗಿದೆ. ನಾನು ನಿಮಗೆ ಪರಿಹಾರ ದೊರಕಿಸಿಕೊಡುತ್ತೇನೆ ಎಂದು ಆತ್ಮವಿಶ್ವಾಸ ತುಂಬಿ ಸಾಂತ್ವನ ಹೇಳಿ ಸಮಾಧಾನಪಡಿಸಿದರು.
ಅಂಚನಹಳ್ಳಿ, ಎಂ.ಹೊಸೂರು, ತೆಂಡೇಕೆರೆ, ಬಣ್ಣೇನಹಳ್ಳಿ, ಮೋದೂರು, ತಗಡೂರು, ಅಗಸರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ರೂಪ ಮಳೆ ಹಾನಿಯನ್ನು ವೀಕ್ಷಿಸಿ ರೈತಬಂಧುಗಳಿಗೆ ಸಾಂತ್ವನ ಹೇಳಿದರು.