ಮಂಡ್ಯ: ಕರ್ತವ್ಯ ಲೋಪ ಹಾಗೂ ಆಡಳಿತ ವೈಫಲ್ಯ ಹಿನ್ನೆಲೆಯಲ್ಲಿ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿ ಅವರನ್ನು ಅಮಾನತು ಮಾಡಲಾಗಿದೆ. ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿ ವಿರುದ್ಧ
ಮಂಡ್ಯ ಜಿಲ್ಲಾಧಿ ಕಾರಿ ಎಸ್.ಅಶ್ವತಿ ಅವರು ಅಕ್ಕಿ ನಾಪತ್ತೆ ಪ್ರಕರಣ ಸೇರಿ ಆಡಳಿತ ವೈಫಲ್ಯಕ್ಕೆ ಮಾ.8 ರಂದು ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳ ಆಧಾರದ ಮೇಲೆ ಕಂದಾಯ ಇಲಾಖೆ
ಸರ್ಕಾರದ ಅ ಧೀನ ಕಾರ್ಯದರ್ಶಿ(ಸೇವೆಗಳು-3) ಎಂ.ಎಸ್.ರಶ್ಮಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಒಬ್ಬ ಸರ್ಕಾರಿ ನೌಕರಿಗೆ ದಕ್ಕುದಲ್ಲದ ರೀತಿ ವರ್ತಿಸಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜಿಲ್ಲಾಧಿಕಾರಿ ಅವರು ನೀಡಿರುವ ಕರ್ತವ್ಯ ಲೋಪದ 13 ಅಂಶಗಳ ಆಧಾರದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳು 1966ರ ನಿಯಮ-3 (1)(2)(3) ಅನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರನ್ನು ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು-1957ರ ನಿಯಮ 10(1)(ಡಿ) ಅನ್ವಯ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೆಚ್ಚುವರಿ ಹೊಣೆ: ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನಕ್ಕೆ ವೇತನ ಪಡೆಯಲು ಅರ್ಹರಿರುತ್ತಾರೆ. ಆದರೆ, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಿದ್ದಾರೆ. ಸದ್ಯ ಚಂದ್ರಶೇಖರ್ ಅವರ ಅಮಾನತಿನಿಂದ ತೆರವಾಗಿರುವ ಸ್ಥಾನಕ್ಕೆ ಕೆ.ಆರ್. ಪೇಟೆ ತಹಶೀಲ್ದಾರ್ ಶ್ವೇತಾ ಅವರನ್ನು ಹೆಚ್ಚುವರಿ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಅಧಿಕಾರ ದುರುಪಯೋಗ ಆರೋಪ: ಮ್ಯುಟೇಷನ್ ಪ್ರಕರಣಗಳನ್ನು ನಿಗದಿತ ಅವಧಿಯೊಳಗೆ ವಿಲೇ ಮಾಡದಿರುವುದು, ಮೇಲಧಿಕಾರಿಗೆ ಮಾಹಿತಿ ನೀಡಿದೆ ರಜೆ ಹಾಕುವುದು, ಅಕ್ಕಿಮೂಟೆ ನಾಪತ್ತೆ ಪ್ರಕರಣದಲ್ಲಿ ಸಕಾಲದಲ್ಲಿ ದೂರು ದಾಖಲಿ ಸದಿರುವುದು, ಸಕಾಲದಲ್ಲಿ ಭೂ ಕಂದಾಯದ ಅರ್ಜಿ ವಿಲೇ ಮಾಡದಿರುವುದು, ಹಳೇಬೂದ ನೂರು ಗ್ರಾಮದಲ್ಲಿ ನಿವೇಶನ ಹಂಚಿಕೆ ಸಂಬಂಧ ಹಣಕ್ಕೆ ಬೇಡಿಕೆ ಇಟ್ಟಿರುವುದು, ತಾಲೂಕು
ಕಚೇರಿಯ ಕಾರ್ಯನಿರ್ವಹಣೆಯಲ್ಲಿ ದೋಷಗಳು ಕಂಡು ಬಂದಿರುವುದು, ಜಮೀನು ವಿವಾದಕ್ಕೆ ಸಂಬಂಧಿ ಸಿದಂತೆ ವಕೀಲರನ್ನು ಸಂಪರ್ಕಿಸದೆ ಮಾಹಿತಿ ನೀಡಿರುವುದರಿಂದ ಜಿಲ್ಲಾಧಿಕಾರಿಗೆ ವಾರೆಂಟ್ ಬರುವುದಕ್ಕೆ ಕಾರಣರಾಗಿದ್ದಾರೆ ಎಂದು ಕಾರಣ ನೀಡಲಾಗಿದೆ.
ಹೈಕೋರ್ಟ್ ಆದೇಶ ಪಾಲನೆ ಮಾಡದೆ ನ್ಯಾಯಾಂಗ ನಿಂದನೆಗೆ ಒಳಗಾಗಿರುವುದು, ವಸತಿ ಗೃಹದ ವಿದ್ಯುತ್ ಬಾಕಿ ಪಾವತಿ ಮಾಡದೆ ಸೆಸ್ಕ್ ಅಧಿಕಾರಿಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು, ಅವರ ವಿರುದ್ಧವೇ ದೂರು ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು, ಶ್ರೀರಂಗ ಪಟ್ಟಣದ ಕೆಆರ್‌ಎಸ್‌ನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಮಗನ ಹುಟ್ಟುಹಬ್ಬ ಆಚರಿಸಿ ವಿವಾದ ಮಾಡಿಕೊಂಡಿದ್ದು, ರಜೆ ಕೇಳುವ ಸಂದರ್ಭದಲ್ಲಿ ಮೇಲಧಿ ಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ರಜೆ ಪಡೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ಲೋಪ, ಉದಾಸೀನತೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದರೂ ಯಾವುದೇ ಸಮಜಾಯಿಸಿ ನೀಡದೆ ನಿರ್ಲಕ್ಷ್ಯ ವಹಿಸಿರುವುದು. ಎಸ್ಸಿ, ಎಸ್ಟಿ ಸಮುದಾಯಕ್ಕೆ ಮಂಜೂರಾಗಿರುವ ಜಮೀನುಗಳ ನೋಂದಣಿ ಮತ್ತು ಪರಭಾರೆಯನ್ನು ನಿಯಂತ್ರಿಸುವಲ್ಲಿ
ವಿಫಲವಾಗಿರುವುದು ಸೇರಿ 13 ಅಂಶಗಳ ದೂರಿನ ಆಧಾರದ ಮೇಲೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.