ಮಂಡ್ಯ: ಕೃಷ್ಣರಾಜಸಾಗರ ಮತ್ತು ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ನೀರೊದಗಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 6ನೇ ದಿನವಾದ ಬುಧವಾರವೂ ಮುಂದುವರಿಯಿತು.
ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿದಿದೆ. ನಾಲೆಗಳಲ್ಲಿ ನೀರು ಹರಿಸುವವರೆಗೂ ಧರಣಿ ಹಿಂಪಡೆಯಲ್ಲವೆಂದು ರೈತರು ಪಟ್ಟು ಸಡಿಲಿಸುತ್ತಿಲ್ಲ.
ಬೆಳೆಗೆ ನೀರು ಹರಿಸಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶ ರೈತರ ಆತಂಕ ದೂರ ಮಾಡಿದೆಯಾದರೂ, ಬೆಳೆದಿರುವ ಬೆಳೆಗಳಿಗೆ ಇನ್ನೊಂದು ಕಟ್ಟು ನೀರು ಹರಿಸಿದರೆ ಸಂಪೂರ್ಣ ಬೆಳೆಗಳು ರೈತರ ಕೈಗೆ ಸಿಗುತ್ತವೆ ಎಂಬುದು ರೈತರ ಹೋರಾಟವಾಗಿದೆ. ಬೆಳೆಗಳ ರಕ್ಷಣೆಗೆ ನಾಲೆಗಳಿಗೆ ನೀರು ಹರಿಸುವ ಕುರಿತಂತೆ ಯಾವುದೇ ಆದೇಶ ನೀಡದೆ ರೈತರನ್ನು ಕತ್ತಲಲ್ಲಿಟ್ಟಿರುವುದು ರೈತರು ಆಕ್ರೋಶಕ್ಕೆ ಕಾರಣವಾಗಿದೆ.
ರೈತ ನಾಯಕರ ಬೆಂಬಲ: ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿಗೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅರಸು, ಮೈಸೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಮರಂಕಯ್ಯ, ಜಿಲ್ಲಾ ರೈತ ಸಂಘದ ಬನ್ನೂರು ಹುಚ್ಚೇಗೌಡ ಮತ್ತಿತರರರು ಪ್ರತಿಭಟನೆಗೆ ಬೆಂಬಲ ನೀಡಿ ಬುಧವಾರ ಧರಣಿಯಲ್ಲಿ ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಒಣಗುತ್ತಿರುವ ಬೆಳೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರು ಹರಿಸಬೇಕು ಎಂಬುದು ಪ್ರತಿಭಟನಾನಿರತರ ಒಕ್ಕೊರೊಲ ಧ್ವನಿಯಾಗಿದೆ. ಸರ್ಕಾರ ರೈತರ ಬೆಳೆ ಉಳಿಸಿಕೊಳ್ಳಲು ಹಾಗೂ ಜನ ಜಾನುವಾರುಗಳಿಗೆ ಕುಡಿವ ನೀರು ಪೂರೈಸಲು ಹೇಮಾವತಿ ಹಾಗೂ ಕೆಆರ್‌ಎಸ್ ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ನೀರು ಹರಿಸುವವರೆಗೂ ಪ್ರತಿಭಟನೆ ಹಿಂಪಡೆಯಲ್ಲವೆಂದರು.
ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವ ಚಿಂತನೆ ನಡೆಸದಿರುವುದು ರೈತರ ಮನದಲ್ಲಿದ್ದ ದುಗಡ ದೂರ ಮಾಡಿದೆ. ಜಿಲ್ಲೆಯಲ್ಲಿ 60 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಅದು ಒಣಗುವ ಸ್ಥಿತಿ ತಲುಪಿದೆ. ಅದರ ಉಳಿವಿಗೆ ಜಿಲ್ಲೆ ನಾಲೆಗಳಿಗೆ ನೀರು ಹರಿಸುವ ಮೂಲಕ ಜನ-ಜಾನುವಾರು ಉಳಿಸಬೇಕು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ರಾಮಕೃಷ್ಣಯ್ಯ, ಪಣಕನಹಳ್ಳಿ ಸ್ವಾಮಿ, ಯರಹಳ್ಳಿ ಬೊಮ್ಮೇಗೌಡ, ಲತಾ, ಕೋಕಿಲಾ, ಮಾದೇ ಗೌಡ, ಚಂದ್ರು ಮತ್ತಿತರರಿದ್ದರು