Advertisement

ಕೆ.ಆರ್‌.ಪೇಟೆಯಲ್ಲಿ ಉಪ ಚುನಾವಣೆ ಚರ್ಚೆ ಶುರು

03:43 PM Jul 25, 2019 | Naveen |

ಮಂಡ್ಯ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನದ ಬಳಿಕ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನಲ್ಲಿ ಚುನಾವಣೆ ಕುರಿತ ಮಾತುಕತೆಗಳು ಆರಂಭಗೊಂಡಿವೆ. ಶಾಸಕ ಕೆ.ಸಿ.ನಾರಾಯಣಗೌಡ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಮೂರು ಪಕ್ಷಗಳ ನಿಲುವು ಕುತೂಹಲಕ್ಕೆ ಕಾರಣವಾಗಿದೆ.

Advertisement

ಅತೃಪ್ತ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ನಡೆಯುವ ಉಪ ಚುನಾವಣೆಯನ್ನು ಜೆಡಿಎಸ್‌ -ಕಾಂಗ್ರೆಸ್‌ ಎರಡೂ ಪಕ್ಷಗಳು ಒಗ್ಗೂಡಿ ಎದುರಿಸಲಿವೆಯೋ ಅಥವಾ ಸ್ವತಂತ್ರವಾಗಿ ಸ್ಪರ್ಧೆಗಿಳಿವೆಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾರಾಯಣಗೌಡರು ಮತ್ತೆ ಕ್ಷೇತ್ರದಿಂದ ಸ್ಪರ್ಧೆ ಬಯಸುವರೇ ಎಂಬುದು ನಿರ್ಧಾರವಾಗಿಲ್ಲ. ಒಮ್ಮೆ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದಲ್ಲಿ ಪಕ್ಷದ ಟಿಕೆಟ್ ಸಿಗುವುದು ಬಹುತೇಕ ಖಚಿತ. ಚುನಾವಣಾ ಸ್ಪರ್ಧೆಯಿಂದ ದೂರ ಉಳಿದರೆ ಕ್ಷೇತ್ರದ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ.

ಒಲ್ಲದ ಮನಸ್ಸಿನಿಂದಲೇ ಟಿಕೆಟ್: ಕ್ಷೇತ್ರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ, ದೇವೇಗೌಡರ ಮನೆ ಹೆಣ್ಣು ಮಕ್ಕಳು ನೀಡುತ್ತಿದ್ದ ಕಿರುಕುಳ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಲಿಲ್ಲವೆಂಬ ಕಾರಣ ಮುಂದಿಟ್ಟು ನಾರಾಯಣಗೌಡರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲೇ ಎರಡು ಬಿ-ಫಾರಂ ನೀಡಿ ಗೊಂದಲ ಸೃಷ್ಟಿಸಿದ್ದ ದೇವೇಗೌಡರ ಕುಟುಂಬ, ಅಂತಿಮವಾಗಿ ಒಲ್ಲದ ಮನಸ್ಸಿನಿಂದಲೇ ಟಿಕೆಟ್ ಅಂತಿಮಗೊಳಿಸಿ ಅವರ ಸೋಲಿಗೂ ಪ್ರಯತ್ನಿಸಿತ್ತು ಎನ್ನುವುದನ್ನು ನಾರಾಯಣಗೌಡರೇ ಬಹಿರಂಗಪಡಿಸಿದ್ದಾರೆ.

ಯಾರು ಬರಲಿದ್ದಾರೆ: 2014ರ ಚುನಾವಣಾ ಸಮಯದಲ್ಲಿ ಪಕ್ಷ ನಿಷ್ಠರಾಗಿದ್ದ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ಪೇಟೆ ಕೃಷ್ಣ ಅವರಿಗೆ ಟಿಕೆಟ್ ತಪ್ಪಿಸಿದ ಜೆಡಿಎಸ್‌ ನಾಯಕರು, ಕ್ಷೇತ್ರದಲ್ಲಿ ಹೊಸ ತಲೆಮಾರಿನ ನಾಯಕತ್ವ ಬೆಂಬಲಿಸಿ ನಾರಾಯಣಗೌಡರಿಗೆ ಟಿಕೆಟ್ ನೀಡಿದ್ದರು. ಈಗ ನಾರಾಯಣಗೌಡರು ಪಕ್ಷದಿಂದ ದೂರವಾಗಿದ್ದು, ಆ ಸ್ಥಾನಕ್ಕೆ ಹೊಸದಾಗಿ ಯಾರನ್ನು ಕರೆತರಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಕೆಬಿಸಿ ಪೂರ್ವ ತಯಾರಿ ಆರಂಭ: ಕೆ.ಆರ್‌.ಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ಉತ್ಸುಕರಾಗಿದ್ದಾರೆ. ಜೆಡಿಎಸ್‌ ಪಕ್ಷದ್ರೋಹ ರಾಜಕಾರಣಕ್ಕೆ ಗುರಿಯಾಗಿರುವ ಕೆ.ಸಿ.ನಾರಾಯಣಗೌಡರ ವಿರೋಧಿ ಅಲೆಯನ್ನು ತಮ್ಮ ಪರವಾಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವ ಕೆ.ಬಿ.ಚಂದ್ರಶೇಖರ್‌ ಈ ಹಿಂದಿನ ಮೂರು ಸೋಲುಗಳ ಅನುಕಂಪವನ್ನು ಮತಗಳನ್ನಾಗಿಸಿಕೊಳ್ಳುವ ಆಲೋಚನೆ ಹೊಂದಿದ್ದಾರೆ. 1999 ಹಾಗೂ 2004ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಚಂದ್ರಶೇಖರ್‌, ಬಳಿಕ ನಡೆದ ಚುನಾವಣೆಗಳಲ್ಲಿ ಪರಾಭವಗೊಂಡಿದ್ದರು. ಮುಂಬರುವ ಉಪ ಚುನಾವಣೆಯಲ್ಲಿ ಶಾಸಕ ಸ್ಥಾನದ ಗದ್ದುಗೆ ಏರಲು ಈಗಿನಿಂದಲೇ ಚಂದ್ರಶೇಖರ್‌ ಪೂರ್ವ ತಯಾರಿ ಆರಂಭಿಸಿದ್ದಾರೆ.

Advertisement

ಜೆಡಿಎಸ್‌ ವಿರೋಧಿ ಭಾವನೆ: ನಾರಾಯಣಗೌಡ ಇನ್ನು ರಾಜಕೀಯಕ್ಕೆ ಬರುವುದಿಲ್ಲ, ಬಿಜೆಪಿಯಿಂದ ಕೋಟಿಗಟ್ಟಲೆ ಹಣ ಪಡೆದುಕೊಂಡಿರುವ ನಾರಾಯಣಗೌಡರು ಬಾಕಿ ಹಣ ಪಡೆದುಕೊಂಡು ಕ್ಷೇತ್ರ ಖಾಲಿ ಮಾಡುತ್ತಾರೆ ಎಂದು ನಾನು ಹೇಳಿದ್ದ ಭವಿಷ್ಯ ಸತ್ಯವಾಗಿದೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಕ್ಷೇತ್ರದ ಜನರಲ್ಲಿ ಜೆಡಿಎಸ್‌ ವಿರೋಧಿ ಭಾವನೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಗೆ ಖಾತೆ ತೆರೆಯುವ ಉತ್ಸಾಹ: ಜೆಡಿಎಸ್‌ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಮಂಡ್ಯದಲ್ಲಿ ಕೂಡ ಜೆಡಿಎಸ್‌ ಶಾಸಕ ನಾರಾಯಣಗೌಡರಿಂದಲೇ ರಾಜೀನಾಮೆ ಕೊಡಿಸುವ ಸಾಹಸದಲ್ಲೂ ಬಿಜೆಪಿ ಯಶಸ್ಸು ಕಂಡಿದೆ. ಕಳೆದ ಹತ್ತು ವರ್ಷಗಳಿಂದಲೂ ಮಂಡ್ಯದಲ್ಲಿ ಬಿಜೆಪಿ ಅರಳಿಸುವ ಪ್ರಯತ್ನಗಳು ವಿಫ‌ಲವಾಗಿದ್ದರೂ ಮೂಲತಃ ಕೆ.ಆರ್‌.ಪೇಟೆ ಕ್ಷೇತ್ರದವರೇ ಆಗಿರುವ ಯಡಿಯೂರಪ್ಪ ಹಠಕ್ಕೆ ಬಿದ್ದವರಂತೆ ಮತ್ತೂಮ್ಮೆ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯುವ ಸಾಹಸಕ್ಕೆ ಮುಂದಾಗಿದ್ದಾರೆ. ಕೆ.ಆರ್‌.ಪೇಟೆ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಅವಶ್ಯಕತೆ ಬಿದ್ದರೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದರೆ, ಮತ್ತೂಂದೆಡೆ ಚನ್ನಪಟ್ಟಣ ಶಾಸಕ ಯೋಗೇಶ್ವರ್‌ ಅವರನ್ನು ಕರೆತರುತ್ತಾರೆಂಬ ಮಾತುಗಳೂ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next