ಬೆಂಗಳೂರು: ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್‌ಗೆ ವಿದಾಯ ಹೇಳಿ ಮೂರು ದಿನ ಕಳೆದರೂ ಮಂಡ್ಯದ ಮಾಜಿ ಸಂಸದೆ ರಮ್ಯಾ ನಾಪತ್ತೆಯಾಗಿದ್ದಾರೆ. ಎಸ್. ಎಂ.ಕೃಷ್ಣ ಕಾಂಗ್ರೆಸ್ ತೊರೆದ ಬಗ್ಗೆ ರಮ್ಯಾ ಅವರ ಪ್ರತಿಕ್ರಿಯೆಯೂ ಇಲ್ಲ,
ಅವರನ್ನು ಸಂಪರ್ಕಿಸಲು ಯತ್ನಿಸಿದ ಕಾರ್ಯಕರ್ತರಿಗೂ ಸಂಪರ್ಕ ಸಿಕ್ಕಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೃಷ್ಣ ಅವರು ನನಗೆ ಮಾರ್ಗದರ್ಶಕರು ಹಾಗೂ ತಂದೆ ಸಮಾನರು ಎಂದು ರಮ್ಯಾ ಹೇಳಿಕೊಂಡಿದ್ದರು.
ಇದೀಗ ಕೃಷ್ಣ ಕಾಂಗ್ರೆಸ್ ತೊರೆದಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದಲ್ಲಿ ಉಳಿಸಿಕೊಳ್ಳುವುದಕ್ಕಾಗಲಿ, ಅವರ ಮನವೊಲಿಸುವುದಕ್ಕಾಗಿ ರಮ್ಯಾ ಪ್ರಯತ್ನಿಸದ ಬಗ್ಗೆ ಕೃಷ್ಣ ಬೆಂಬಲಿಗರು ಬೇಸರಗೊಂಡಿದ್ದಾರೆ. ರಮ್ಯಾ ವಿದೇಶ ಪ್ರವಾಸದಲ್ಲಿದ್ದಾರೆಂಬ ಮಾಹಿತಿಯಿದೆ. ಕೃಷ್ಣ ಅವರ ರಾಜೀನಾಮೆ ಬೆಳವಣಿಗೆಯ ಬಗ್ಗೆ ಮಾತನಾಡುವ ಬಗ್ಗೆ ರಮ್ಯಾ ಗೊಂದಲದಲ್ಲಿದ್ದಾರೆ. ಹೀಗಾಗಿ ರಾಜೀನಾಮೆ ಬೆಳವಣಿಗೆಯ ಪ್ರಕರಣದಿಂದ ದೂರ ಉಳಿಯಲು ಬಯಸಿದ್ದಾರೆನ್ನಲಾಗಿದೆ.
ಮತ್ತೂಂದು ಮೂಲದ ಪ್ರಕಾರ ರಾಜೀನಾಮೆಯಿಂದ ಬೇಸರವಾಗಿದೆ ಎಂದರೂ ರಾಹುಲ್ ಗಾಂಧಿ ಅವರ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಆತಂಕ ಅವರನ್ನು ಕಾಡುತ್ತಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೃಷ್ಣ ಮನವೊಲಿಕೆಗೆ ಸಚಿವರ ಆಗ್ರಹ: ರಾಜ್ಯ ಸಚಿವ ಸಂಪುಟದ ಹಲವು ಸಚಿವರು ಕೃಷ್ಣ ಅವರ ರಾಜಿನಾಮೆ ವಾಪಸ್ ಪಡೆಯುವಂತೆ ಸೋನಿಯಾ ಗಾಂಧಿ ಮೂಲಕ ಒತ್ತಡ ತರುವಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖರ್ಗೆ ಜತೆಗೂ ಮಾತನಾಡಿ ಸೋನಿಯಾ ಅವರಿಂದ ಕೃಷ್ಣ ಮನವೊಲಿಸುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.