ಮಂಡ್ಯ: ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರದಲ್ಲಿ ನೀರಿನ ಪ್ರಮಾಣ ಕ್ಷೀಣಿಸಿದ್ದು, ಅಣೆಕಟ್ಟು ವ್ಯಾಪ್ತಿಯ ರೈತರು ಬೇಸಿಗೆ ಬೆಳೆ ಬೆಳೆಯಲು ಮುಂದಾಗಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಕೃಷ್ಣರಾಜ ಸಾಗರದಲ್ಲಿ ಆಯೋಜನೆಗೊಂಡಿದ್ದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣನ ಅವಕೃಪೆಯಿಂದ ಈ ಬಾರಿ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಅಣೆಕಟ್ಟೆಗಳು ಭರ್ತಿಯಾಗಿಲ್ಲ, ಆದರೂ ನದಿ ಪಾತ್ರದ ರೈತರ ಹಿತದೃಷ್ಠಿಯಿಂದ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗಾಗಿ ನವೆಂಬರ್ ಅಂತ್ಯದವರೆಗೂ ನೀರು ಹರಿಸಲಾಗಿದೆ.
ನದಿಪಾತ್ರದಲ್ಲಿನ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆ ರಕ್ಷಣೆಗೆ ನಿಯಮಿತವಾಗಿ ಸಂಕಷ್ಟ ಸಮಯದಲ್ಲೂ ನೀರು ಹರಿಸಲಾಗಿದ್ದು, ಮುಂದಿನ ಮುಂಗಾರು ಮಳೆವರೆಗೆ ಜನಜಾನುವಾರುಗಳಿಗೆ ಅಗತ್ಯ ಆಹಾರ ಮತ್ತು ಮೇವು ದಾಸ್ತಾನಿಗೆ ಮುಂದಾಗಿ ಸಹಕರಿಸಬೇಕೆಂದು ಕೋರಿದ್ದಾರೆ.
ಪ್ರಸ್ತುತ ಅಣೆಕಟ್ಟೆಯಲ್ಲಿ ಕುಡಿಯುವ ನೀರು ಮಾತ್ರ ಲಭ್ಯವಿದ್ದು, ಮುಂದಿನ ಜೂನ್ ವರೆಗೆ 14 ಟಿಎಂಸಿ ನೀರು ಕುಡಿಯಲು ಅಗತ್ಯವಾಗಿದ್ದು, ಈ ಹಿನ್ನಲೆಯಲ್ಲಿ ಅಣೆಕಟ್ಟೆ ವ್ಯಾಪ್ತಿಯ ರೈತರು ಯಾವುದೇ ರೀತಿಯ ಅಲ್ಪಾವಧಿ ಅಥವಾ ದೀರ್ಘಾವದಿ ಬೆಳೆಗಳನ್ನು ಬೆಳೆಯಲು ಮುಂದಾಗಬಾರದು, ನೀರಿನ ಒಳ ಹರಿವು ಆಧಾರದ ಮೇಲೆ ಮುಂದಿನ ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗುವುದು, ಇದಕ್ಕೆ ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ನೀರಾವರಿ ಸಲಹೆ ಸಮಿತಿ ಸಭೆಯಲ್ಲಿ ಶಾಸಕರಾದ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್, ಮುಖ್ಯ ಅಭಿಯಂತರ ಆರ್.ಎನ್.ವೆಂಕಟೇಶ್, ಅಧೀಕ್ಷಕ ಅಭಿಯಂತರ ರಘುರಾಂ, ಕಾರ್ಯಪಾಲಕ ಅಭಿಯಂತರ ಜಯಂತ್ ಇತರರಿದ್ದರು.