Advertisement

ಮನ್‌ಮುಲ್‌ನಲ್ಲಿ ಹಾಲು-ನೀರು ಹಗರಣ

02:51 AM Jul 05, 2021 | Team Udayavani |

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್‌) ದಲ್ಲಿ ಹಾಲು-ನೀರು ಮಿಶ್ರಿತ ಹಗರಣ ಬೆಳಕಿಗೆ ಬಂದಿದ್ದು, ಸರಕಾರ ಸಿಐಡಿ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.

Advertisement

ಗುತ್ತಿಗೆದಾರರಾದ ರಂಜನ್‌ಕುಮಾರ್‌ ಹಾಗೂ ರಾಜು ಎಂಬವರಿಗೆ ಸೇರಿದ ಎರಡು ಹಾಲಿನ ಟ್ಯಾಂಕರ್‌ನಲ್ಲಿ ಹಾಲಿನ ಜತೆಗೆ ಪ್ರತ್ಯೇಕ ನೀರು ಮಿಶ್ರಣ ಮಾಡಲು ನೀರಿನ ಟ್ಯಾಂಕ್‌ ಅನ್ನು ಅಳವಡಿಸಿರುವುದನ್ನು ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಪತ್ತೆ ಹಚ್ಚಿದ್ದರು. ಇದರಿಂದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾ­ಯಿತು. ಈ ಇಬ್ಬರು ಗುತ್ತಿಗೆದಾರರು ಬೆಂಗಳೂರಿನ ಕೆಎಂಎಫ್‌ ಡೇರಿಯಲ್ಲೂ ಇದೇ ರೀತಿ ಹಗರಣ ನಡೆಸಿದ ಪರಿಣಾಮ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಆದರೆ ಅವರಿಗೆ 2014ರಲ್ಲಿ ಮತ್ತೆ ಮನ್‌ಮುಲ್‌ನಲ್ಲಿ ಟೆಂಡರ್‌ ನೀಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಆಂಧ್ರದಲ್ಲಿ ಲಾರಿಗಳ ಟ್ಯಾಂಕರ್‌ಗಳಲ್ಲಿ ಯಾರಿಗೂ ಗೊತ್ತಾಗ­ದಂತೆ ನೀರಿನ ಟ್ಯಾಂಕರ್‌ ಅಳವಡಿಸಿ ಮನ್‌ಮುಲ್‌ಗೆ ಗುತ್ತಿಗೆ ಆಧಾರದ ಮೇಲೆ ಬಿಡಲಾಗಿತ್ತು. ಜಿಲ್ಲೆಯ ಬಿಎಂಸಿಗಳಿಂದ ಹಾಲು ಸಂಗ್ರಹಿಸಿಕೊಂಡು ಬರುವ ಲಾರಿ ಟ್ಯಾಂಕರ್‌ಗಳು ಪರಿಶೀಲನೆ­ಯಲ್ಲಿ ಹಾಲಿನ ತೂಕ ಸರಿಯಾಗಿ ತೋರಿಸಿ ಅನಂತರ ಹಾಲನ್ನು ಸಂಗ್ರಹಾಗಾರದಲ್ಲಿ ತುಂಬಿಸುವಾಗ ಟ್ಯಾಂಕರ್‌ನ ಚಾಲಕ ನೀರಿನ ಕೊಳಾಯಿಯನ್ನು ಓಪನ್‌ ಮಾಡಿ ಬಿಡುತ್ತಿದ್ದರು. ಇದರಿಂದ ಹಾಲಿನ ಜತೆಗೆ ನೀರು ಮಿಶ್ರಣವಾಗಿ ತೂಕದಂತೆ ಹಾಲು-ನೀರು ಹೋಗುತ್ತಿತ್ತು. ಉಳಿದ ಹಾಲನ್ನು ಬೇರೆ ತಿರುಮಲ ಡೇರಿ ಸೇರಿದಂತೆ ಇತರ ಖಾಸಗಿ ಡೇರಿಗೆ ಸರಬರಾಜು ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿತ್ತು.

ಹಾಲು-ನೀರು ಪ್ರಕರಣ ವಿಚಾರ ಆಡಳಿತ ಮಂಡಳಿಗೆ ಗೊತ್ತಾಗಿದೆ ಎಂಬ ವಿಷಯವನ್ನು ಗುತ್ತಿಗೆದಾರರಿಗೆ ಮನ್‌ಮುಲ್‌ನಲ್ಲಿದ್ದವರೇ ತಿಳಿಸಿದ್ದರು. ಆಗ ಅದನ್ನು ಮುಚ್ಚಿ ಹಾಕಲು ಟ್ಯಾಂಕರ್‌ ಬದಲಿಸಲು ಗುತ್ತಿಗೆದಾರರು ಮುಂದಾಗಿದ್ದರು ಎಂಬ ಅಂಶವೂ ಪೊಲೀಸರ ತನಿಖೆಯಿಂದ ಹೊರ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗುತ್ತಿಗೆದಾರರು ಪರಾರಿಯಾಗಿ­ದ್ದರು. ಇದುವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ಡಿವೈಎಸ್ಪಿ ನವೀನ್‌ಕುಮಾರ್‌ ನೇತೃತ್ವದಲ್ಲಿ ಪ್ರಕರಣ ಪತ್ತೆ ಹಚ್ಚಲು ಕ್ರಮ ಕೈಗೊಳ್ಳ­ಲಾಗಿತ್ತು. ಆದರೆ ಕಳೆದ 15 ದಿನಗಳ ಹಿಂದೆ ಸರಕಾರ ಪ್ರಕರಣ­ವನ್ನು ಗಂಭೀರವಾಗಿ ಪರಿಗಣಿಸಿ ಸಿಐಡಿಗೆ ವಹಿಸಲು ಘೋಷಣೆ ಮಾಡಿತ್ತು. ಆದರೆ ಅಧಿಕೃತ ಆದೇಶ ನೀಡಿರಲಿಲ್ಲ. ಕಳೆದ ಜೂ.30ರಂದು ಅಧಿಕೃತ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇದುವರೆಗೂ ಸುಮಾರು 8 ಮಂದಿಯನ್ನು ಬಂಧಿಸಲಾಗಿದೆ. 7 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ ಹಗರಣ ನಡೆಯಲು ಮನ್‌ಮುಲ್‌ ಅಧಿಕಾರಿಗಳು ಶಾಮೀಲಾಗಿದ್ದರು ಎಂಬ ಅಂಶಗಳು ಬೆಳಕಿಗೆ ಬಂದಿವೆ. ಸಾಕಷ್ಟು ಪುರಾವೆಗಳು ಇವೆ. ಬಿಎಂಸಿ ಮಾರ್ಗಗಳ ಉಪ ವ್ಯವಸ್ಥಾಪಕರು ಪ್ರಧಾನ ವ್ಯವಸ್ಥಾಪಕ­ರಿಗೆ ಬರೆದಿರುವ ಪತ್ರಗಳೇ ಪ್ರಮುಖ ಸಾಕ್ಷಿಗಳಾಗಿವೆ.

ಲಾರಿ ಟ್ಯಾಂಕರ್‌ಗಳು ಹಾಲು ಸಂಗ್ರಹಿಸಿಕೊಂಡು ನಿಗದಿತ ಸಮಯಕ್ಕೆ ಬರದೆ ಒಂದು ಗಂಟೆಗಳ ಕಾಲ ತಡವಾಗಿ ಬರುತ್ತಿ­ರುವ ಬಗ್ಗೆ, ಸಿಸಿ ಕೆಮರಾ ಅಳವಡಿಸುವ ಬಗ್ಗೆ, ಲಾರಿಗಳಲ್ಲಿ ತೂಕ ಹೆಚ್ಚಿಸಲು ದೊಡ್ಡ ನೀರಿನ ಕ್ಯಾನ್‌ಗಳು, ಕಬ್ಬಿಣದ ರಾಡ್‌ಗಳನ್ನು ಇಟ್ಟುಕೊಂಡು ಬರುತ್ತಿರುವ ಬಗ್ಗೆ, ಲಾರಿಗಳ ಚಾಸಿಸ್‌ ನಂಬರ್‌ಗಳು ಆಗಾಗ್ಗೆ ಬದಲಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಉಪ ವ್ಯವಸ್ಥಾಪಕರು ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದು ಇಷ್ಟು ದೊಡ್ಡ ಮಟ್ಟದ ಹಗರಣಕ್ಕೆ ಕಾರಣವಾಗಿದೆ.

Advertisement

ಪ್ರಕರಣದ ತನಿಖೆಯು ಹಳ್ಳ ಹಿಡಿಯುವ ಹಂತಕ್ಕೆ ತಲುಪಿದೆ. ಸರಕಾರ ಸಿಐಡಿಗೆ ವಹಿಸಿದ ಅನಂತರ ಪೊಲೀಸರು ತನಿಖೆಯನ್ನು ಮೊಟಕುಗೊಳಿಸಿದರು. ಆದರೆ ಸರಕಾರ ಅಧಿ ಕೃತವಾಗಿ ಆದೇಶ ನೀಡದ ಹಿನ್ನೆಲೆ ಪ್ರಕರಣದ ತನಿಖೆ ವಿಳಂಬವಾಯಿತು. ಈ ಸಂದರ್ಭವನ್ನು ಬಳಸಿಕೊಂಡ ಪ್ರಮುಖ ಆರೋಪಿಗಳು, ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಪಡೆದಿದ್ದಾರೆ. ಇದಕ್ಕೆ ಪೊಲೀಸರು ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಆದರೆ ಆಡಳಿತ ಮಂಡಳಿಯು ಉಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ದುಪಡಿಸುವಂತೆ ರಿಟ್‌ ಅರ್ಜಿ ಸಲ್ಲಿಸಿದೆ.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next