Advertisement
ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವುದರಿಂದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ. ಕಿರಗಂದೂರು ಕೆರೆ ನಾಲಾ ವ್ಯಾಪ್ತಿಯ ಸಂಪರ್ಕದಲ್ಲಿರುವುದರಿಂದ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಕೆರೆಯ ತೂಬನ್ನು ಮೇಲೆತ್ತಿದ್ದರೂ ಕಾಲುವೆಗಳು ಹಾಗೂ ಪಿಕಪ್ ನಾಲೆಗಳಲ್ಲಿ ಗಿಡ-ಗಂಟೆಗಳು ಬೆಳೆದು ನಿಂತಿದ್ದರಿಂದ ನೀರು ಅಡ್ಡಾದಿಡ್ಡಿಯಾಗಿ ಹರಿದು ಜಮೀನುಗಳಿಗೆ ನೀರು ನುಗ್ಗಿದೆ ಎಂದು ರೈತರು ಆರೋಪಿಸಿದ್ದಾರೆ.
Related Articles
Advertisement
ಕೂಡಲೇ ನೀರಾವರಿ ಇಲಾಖಾ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದಾಗ ಎಂಜಿನಿಯರ್‌ಗಳು ಸ್ಥಳಕ್ಕೆ ಆಗಮಿಸಿ ಕೆರೆಯ ತೂಬನ್ನು ಪೂರ್ಣ ಪ್ರಮಾಣದಲ್ಲಿ ಮೇಲೆತ್ತಿ ನೀರು ಹರಿದುಹೋಗುವಂತೆ ಮಾಡಿ ಕೆರೆಗೆ ಹಾನಿಯಾಗದಂತೆ ತಡೆದರು.
ಮೀನು ಸಾಕಾಣೆ ಗುತ್ತಿಗೆ ಪಡೆದವರು ಅಳವಡಿಸಿದ್ದ ಕಬ್ಬಿಣದ ಜಾಲರಿಯನ್ನು ಗ್ರಾಮಸ್ಥರು ಕಿತ್ತೆಸೆದರು. ಆದರೆ, ಕಾಲುವೆ ಹಾಗೂ ಪಿಕಪ್ ನಾಲೆಗಳು ಅವ್ಯವಸ್ಥೆಯಿಂದ ಕೂಡಿದ್ದರಿಂದ ನೀರು ಮೇಲ್ಭಾಗಕ್ಕೆ ಹರಿದು ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
ಬಿತ್ತನೆಗೆ ಸಜ್ಜು: ಕೆರೆ ಭರ್ತಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಿ ಜಮೀನನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿದ್ದರು. ಹಲವರು ಭತ್ತದ ಸಸಿ ಮಡಿಗಳನ್ನು ಮಾಡಿಕೊಂಡು ನಾಟಿಗೆ ಸಿದ್ಧತೆ ನಡೆಸಿದ್ದರಲ್ಲದೆ, ಇನ್ನೂ ಕೆಲವರು ಕಬ್ಬು ಬೆಳೆಯನ್ನೂ ಬೆಳೆದಿದ್ದರು.
ಈಗ ಜಮೀನುಗಳಿಗೆ ನೀರು ರಭಸದಿಂದ ಹರಿದ ಪರಿಣಾಮ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಭೂಮಿಯ ಫಲವತ್ತತೆಯೂ ಹಾಳಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಪಿಕಪ್, ಕಾಲುವೆ ಸುಸ್ಥಿತಿ: ಕಿರಗಂದೂರು ಕೆರೆ ಅಚ್ಚುಕಟ್ಟು ಪ್ರದೇಶ 106 ಎಕರೆ ಇದ್ದು, ಕೆರೆಯಿಂದ ಕೋಡಿ ಹರಿದ ನೀರು ಕೋಣಹಳ್ಳಿ ಹಾಗೂ ಕಲ್ಲಹಳ್ಳಿ ಕೆರೆಯನ್ನು ಸೇರುತ್ತದೆ. ಕೆರೆ ಕೋಡಿ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ನೀರು ಹರಿದುಹೋಗಲು ವ್ಯವಸ್ಥೆ ಮಾಡಿ ಹೆಚ್ಚು ಹಾನಿ ಸಂಭವಿಸುವುದನ್ನು ತಡೆದಿದ್ದಾರೆ.
ಈಗಲಾದರೂ ಪಿಕಪ್ ಹಾಗೂ ಕಾಲುವೆಗಳನ್ನು ಸುಸ್ಥಿತಿಯಲ್ಲಿಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.