ಮಂಡ್ಯ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡುವೆ ಅರ್ಜಿಗಳ ಸುರಿಮಳೆಯೇ ಹರಿದಿದೆ. ಈ ನಡುವೆ ನಾಯಕರಿಗೆ ಟಿಕೆಟ್ ತಲೆನೋವು ಶುರುವಾಗಿದ್ದು ಬಂಡಾಯದ ಭೀತಿಯೂ ಎದುರಾದಂತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 2ಲಕ್ಷ ರೂ. ಶುಲ್ಕ ಕಟ್ಟಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದೇ ತಡ ತಾ.. ಮುಂದು ನಾ..ಮುಂದು ಎಂಬಂತೆ ಪೈಪೋಟಿ ಮೇಲೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಇನ್ನೂ ಅರ್ಜಿ ಸಲ್ಲಿಕೆಗೆ ನ.21ರವರೆಗೆ ಕಾಲಾವಕಾಶ ಇರುವುದರಿಂದ ಇನ್ನೂ ಕೆಲ ಆಕಾಂಕ್ಷಿತರು ಟಿಕೆಟ್ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ವರಿಷ್ಠರಿಗೆ ತಲೆನೋವು: ಅರ್ಜಿ ಸಂಖ್ಯೆ ಏರಿಕೆಯಾಗಿರು ವುದರಿಂದ ಯಾರಿಗೆ ಟಿಕೆಟ್ ನೀಡುವುದು ಎಂಬ ಗೊಂದಲ ವರಿಷ್ಠರಲ್ಲಿ ಶುರುವಾಗಲಿದೆ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆ ಯಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮತದಾರರಿಗೆ ಹತ್ತಿರವಾಗಲು ಮುಂದಾಗಿದ್ದಾರೆ.
ಕೇಂದ್ರ ಸ್ಥಾನಕ್ಕೆ ಹೆಚ್ಚು ಆಕಾಂಕ್ಷಿತರು: ಕೇಂದ್ರ ಸ್ಥಾನ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿಯೇ ಹೆಚ್ಚು ಮಂದಿ ಆಕಾಂಕ್ಷಿತರಿದ್ದಾರೆ. ಹಿರಿಯ ರಾಜಕಾರಣಿ ಎಂ.ಎಸ್. ಆತ್ಮಾ ನಂದ, ಕಳೆದ ಬಾರಿ ಪರಾಭವಗೊಂಡಿದ್ದ ರವಿಕುಮಾರ್ ಗಣಿಗ, ಯುವ ಮುಖಂಡ ಎಂ.ಎಸ್. ಚಿದಂ ಬರ್, ಜೆಡಿಎಸ್‌ನಿಂದ ದೂರ ಉಳಿದು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ ಕೀಲಾರ ರಾಧಾಕೃಷ್ಣ, ಡಾ. ಕೃಷ್ಣ, ಸತೀಶ್ ಸಿದ್ದರೂಢ, ಮನ್‌ಮುಲ್ ನಿರ್ದೇಶಕ ಉಮ್ಮ ಡ ಹಳ್ಳಿ ಶಿವಕುಮಾರ್, ಮಹಿಳಾಧ್ಯಕ್ಷೆ ಅಂಜನಾಶ್ರೀಕಾಂತ್ ಸೇರಿ ಒಟ್ಟು 13 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯೂ ಮೂಲ-ವಲಸಿಗ ಎಂಬ ಭಿನ್ನಮತ, ಬಂಡಾಯ ಸೃಷ್ಟಿಯಾಗುವ ಸಾಧ್ಯತೆ ಇದೆ.
Related Articles
ಮಳವಳ್ಳಿಯಲ್ಲೂ ಬಂಡಾಯ: ಜಿಲ್ಲೆಯ ಏಕೈಕ ಮೀಸಲಾತಿ ಕ್ಷೇತ್ರ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಬಂಡಾ ಯದ ಬಿರುಸು ಆರಂಭಗೊಂಡಿದೆ. ಮಾಜಿ ಸಚಿವ ಪಿ. ಎಂ.ನರೇಂದ್ರಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆ ಟ್ ತಪ್ಪಿಸಬೇಕು ಎಂದು ಕೆಲವು ಮುಖಂಡರು ಮುಂದಾಗಿದ್ದಾರೆ. ಈ ನಡುವೆ ಡಾ.ಮೂರ್ತಿ, ಮಲ್ಲಾ ಜಮ್ಮ ಒಂದೆಡೆಯಾದರೆ, ನರೇಂದ್ರಸ್ವಾಮಿ ಮತ್ತೂಂದೆಡೆ ಜಿಲ್ಲೆಯ ಪ್ರಬಲ ನಾಯಕರಾಗಿ ಬೆಳೆದಿದ್ದಾರೆ. ಆದರೂ ಚುನಾವಣೆ ವೇಳೆ ಬಂಡಾಯ ಹೆಚ್ಚಾಗುವ ಲಕ್ಷಣ ಗೋಚರಿಸುತ್ತಿವೆ.
ಕೆ.ಆರ್.ಪೇಟೆ ಟಿಕೆಟ್ ಯಾರಿಗೆ?: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಒಟ್ಟು 6 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲವೂ ಕೆರಳಿದೆ. ಮೂರು ಬಾರಿ ಸೋತಿರುವ ಕೆ.ಬಿ.ಚಂದ್ರಶೇಖರ್, ಮಾಜಿ ಶಾಸಕ ಬಿ.ಪ್ರಕಾಶ್ ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ಸಮಾಜ ಸೇವಕ ವಿಜಯ್ ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಐಕನಹಳ್ಳಿ ನಾಗೇಂದ್ರಕುಮಾರ್, ಮತ್ತೀಕಟ್ಟೆ ಕೃಷ್ಣ ಮೂರ್ತಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಈಗಾ ಗಲೇ 3 ಬಾರಿ ಸೋತಿರುವ ಕೆ.ಬಿ.ಚಂದ್ರಶೇಖರ್‌ರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಉಳಿದ ಆಕಾಂಕ್ಷಿಗಳಲ್ಲಿ ಸದ್ಯದ ಮಟ್ಟಿಗೆ ವಿಜಯ್‌ರಾಮೇಗೌಡ ಮುಂಚೂಣಿಯಲ್ಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದರಿಂದ ಇವರಿಗೆ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ.
ನೆಲೆ ಇಲ್ಲದ ಮೇಲುಕೋಟೆಗೆ ನಾಲ್ವರು: ಜೆಡಿಎಸ್ ಹಾಗೂ ರೈತಸಂಘ ಪ್ರಬಲವಾಗಿರುವ ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ನಾಲ್ವರು ಆಕಾಂ ಕ್ಷಿತರು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರಾದ ಎಚ್.ತ್ಯಾಗರಾಜು, ವಿಧಾನ ಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಡಾ. ರವೀಂದ್ರ, ಆನಂದ್‌ಕುಮಾರ್ ಹಾಗೂ ನಾಗಭೂಷಣ್ ಅವರು ಟಿಕೆಟ್ ಆಕಾಂಕ್ಷಿತರಾಗಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ರೈತಸಂಘಕ್ಕೆ ಬೆಂಬಲ ನೀಡಿದರೂ ಅಚ್ಚರಿಯಿಲ್ಲ.
ಕೊನೇ ಕ್ಷಣದಲ್ಲಿ ಕ್ಷೇತ್ರ ಬದಲಾದರೂ ಅಚ್ಚರಿಯಿಲ್ಲ! : ನಾಗಮಂಗಲ ಕ್ಷೇತ್ರದಿಂದ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಸ್ಫರ್ಧೆ ಖಚಿತ ಎಂದು ಅವರೇ ಹೇಳಿದ್ದಾರೆ. ಆದರೆ, ಕೊನೇ ಕ್ಷಣದಲ್ಲಿ ಕ್ಷೇತ್ರ ಬದಲಾದರೂ ಅಚ್ಚರಿಯಿಲ್ಲ. ಈಗಾಗಲೇ ಮಂಡ್ಯ ವಿಧಾನಸಭಾ ಕ್ಷೇತ್ರದಿಂದಲೂ ಸ್ಫರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಅದರಂತೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲೂ ರಮೇಶ್‌ಬಂಡಿಸಿದ್ದೇಗೌಡರಿಗೆ ಟಿಕೆಟ್ ಖಚಿತವಾಗಿದೆ. ಆದರೆ ಚುನಾವಣೆ ವೇಳೆ ಅಭ್ಯರ್ಥಿ ಬದಲಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎಂಬ ರಾಜಕೀಯ ಚರ್ಚೆ ನಡೆಯುತ್ತಿದೆ. ಇನ್ನುಳಿದಂತೆ ಮದ್ದೂರಿನಿಂದ ಎಸ್.ಎಂ.ಕೃಷ್ಣ ಕುಟುಂಬದ ಗುರುಚರಣ್ ಹಾಗೂ ಬಿ.ವಿ.ಶಂಕರೇಗೌಡ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಬಹುತೇಕ ಗುರುಚರಣ್‌ಗೆ ಟಿಕೆಟ್ ಖಚಿತವಾಗಿದೆ ಎನ್ನಲಾಗುತ್ತಿದೆ.
ಈವರೆಗೆ 32 ಮಂದಿ ಅರ್ಜಿ ಸಲ್ಲಿಕೆ: ಕೆಪಿಸಿಸಿಗೆ ಟಿಕೆಟ್ ಬಯಸಿ ಜಿಲ್ಲೆಯಿಂದ ಒಟ್ಟು 32 ಅರ್ಜಿ ಸಲ್ಲಿಕೆಯಾಗಿವೆ. ಜಿಲ್ಲೆಯಲ್ಲಿರುವುದು 7 ಕ್ಷೇತ್ರ ಮಾತ್ರ. ಆದರೆ, ಅರ್ಜಿ ದುಪ್ಪಟ್ಟಾಗಿವೆ. ಮಂಡ್ಯದಿಂದ 13, ಮದ್ದೂರಿನಿಂದ ಇಬ್ಬರು, ಮಳವಳ್ಳಿಯಿಂದ ಮೂವರು, ನಾಗಮಂಗಲದಿಂದ ಒಬ್ಬರು, ಕೆ.ಆರ್.ಪೇಟೆಯಿಂದ ಆರು ಮಂದಿ, ಪಾಂಡವ ಪುರದಿಂದ ನಾಲ್ವರು ಹಾಗೂ ಶ್ರೀರಂಗಪಟ್ಟಣದಿಂದ ಮೂರು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಬಂಡಾಯವೇ ಹೆಚ್ಚು: ಕಾಂಗ್ರೆಸ್‌ನಲ್ಲಿ ಈಗಾಗಲೇ ಬಣ ರಾಜಕೀಯ ಹೊಸದೇನಲ್ಲ. ಅದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಭುಗಿಲೇಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬೂದಿ ಮುಚ್ಚಿದಂತಿರುವ ಭಿನ್ನಮತ ಟಿಕೆಟ್ ಹಂಚಿಕೆ ವೇಳೆ ಸ್ಫೋಟಗೊಳ್ಳಲಿದೆ ಎಂಬ ಮಾತು ಕೇಳಿ ಬರುತ್ತಿವೆ. ಈಗಾಗಲೇ ಒಗ್ಗಟ್ಟಿ ನಿಂದ ಎರಡು ವಿಧಾನ ಪರಿಷತ್ ಚುನಾವಣೆ ಗೆದ್ದಿ ರುವ ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಉತ್ತಮ ವಾತಾವರ ಣವಿದೆ ಎಂಬ ಲೆಕ್ಕಾಚಾರ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳ ದಂಡು ಹೆಚ್ಚಾಗಿ ದ್ದಾರೆ. ಇದು ಆಕಾಂಕ್ಷಿತರಲ್ಲಿ ಭಿನ್ನಮತಕ್ಕೆ ದಾರಿಯಾಗಲಿದೆ ಎಂಬ ಚರ್ಚೆ ನಡೆಯುತ್ತಿವೆ. ಎಚ್.ಶಿವರಾಜು