Advertisement

ವರಿಷ್ಠರ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ

04:35 PM Aug 29, 2019 | Team Udayavani |

ಮಂಡ್ಯ: ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ. ಇಲ್ಲಿ ವರಿಷ್ಠರು ಕೈಗೊಳ್ಳುವ ತೀರ್ಮಾನವೇ ಅಂತಿಮ. ಅದಕ್ಕೆ ವಿರುದ್ಧ ವಾಗಿ ನಡೆಯುವ ಧೈರ್ಯವನ್ನು ಯಾವ ನಾಯಕರೂ ಪ್ರದರ್ಶಿಸಬಾರದು. ತಮ್ಮ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯೊಳಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಕ್ಕೆ ಮುಕ್ತ ಅವಕಾಶವಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ತಿಳಿಸಿದರು.

Advertisement

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ಮದ್ದೂರು ಪಟ್ಟಣದ ಶಿವಪುರದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೆಳವಣಿಗೆ ಹಿಂದೆ ಹಲವಾರು ನಾಯಕರ ಪರಿಶ್ರಮವಿದೆ. ಈಗ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರ ಶ್ರಮ ಸಾರ್ಥಕಗೊಳಿಸುವುದು ನನ್ನ ಜವಾಬ್ದಾರಿ. ಭಿನ್ನಮತ ಎಲ್ಲಾ ಪಕ್ಷಗಳಲ್ಲೂ ಇದೆ. ಅದರಲ್ಲಿ ಬಿಜೆಪಿ ಹೊರತಾಗಿಲ್ಲ. ಸಮಸ್ಯೆಗಳಿದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಕ್ಷ ಸಂಘಟನೆಯಲ್ಲಿ ತೊಡಗಿ: ಬಿಜೆಪಿ ಶಿಸ್ತಿಗೆ ಹೆಸರಾಗಿದೆ. ಶಿಸ್ತಿನಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತು ಕಾಣದ ರೀತಿಯಲ್ಲಿ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಪಕ್ಷದ ವರಿಷ್ಠರು ಗುರುತಿಸಿ ರಾಜ್ಯಾಧ್ಯಕ್ಷ ಸ್ಥಾನದಂತಹ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ವರಿಷ್ಠರ ಸಲಹೆ ಸೂಚನೆ ಪಡೆದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಸದಸ್ಯತ್ವ ನೋಂದಣಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ನನ್ನ ಪರಮ ಗುರಿಯಾಗಿದೆ. ಇದಕ್ಕೆ ತಳಮಟ್ಟದಿಂದ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಬೇಕು. ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸಕ್ರಿಯರಾಗುವ ಮೂಲಕ ಪಕ್ಷವನ್ನು ಬಲಗೊಳಿಸಬೇಕು ಎಂದು ನಳಿನ್‌ಕುಮಾರ್‌ ಸಲಹೆ ನೀಡಿದರು.

ಪಟ್ಟಣದ ಶಿವಪುರದ ಬಳಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಅವರನ್ನು ಬಿಜೆಪಿ ಮಾಜಿ ಅಧ್ಯಕ್ಷ ಎಚ್. ಹೊನ್ನಪ್ಪ, ಮುಖಂಡ ಡಾ. ಸಿದ್ದರಾಮಯ್ಯ, ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಮಾಲಾರ್ಪಣೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದ ಬಳಿಕ ನಳಿನ್‌ಕುಮಾರ್‌ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಅಭಿನಂದಿಸಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಅಶ್ವತ್ಥನಾರಾಯಣ, ಮಾಜಿ ಸಚಿವ ಎಂ. ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಜಿಲ್ಲಾ ಕಾರ್ಯದರ್ಶಿ ರೂಪಾ, ಸತೀಶ್‌, ಮಹೇಂದ್ರ, ರಮೇಶ್‌, ಎಂ.ಸಿ. ಸಿದ್ದು, ಜಗನ್ನಾಥ್‌, ಪುಟ್ಟಮ್ಮ, ಮೈಸೂರು ವಿಭಾಗದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next