Advertisement
ಬಡತನ, ಪೋಷಕರ ನಿರ್ಲಕ್ಷ್ಯ, ಮನೆಯೊಳಗಿನ ವಾತಾವರಣ, ಸಾಮಾಜಿಕ ಪರಿಸರದಲ್ಲಿ ಆಗಿರುವ ಬದಲಾವಣೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಬಾಲ್ಯ ವಿವಾಹಗಳು ಹೆಚ್ಚುತ್ತಲೇ ಇವೆ. ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ 444 ಬಾಲ್ಯ ವಿವಾಹಗಳು ನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.
Related Articles
Advertisement
ಜಿಲ್ಲೆಯಲ್ಲಿ ನಡೆಯುತ್ತಿರುವ ಅಪ್ತಾಪ್ತರ ವಿವಾಹ ಪ್ರಕರಣಗಳು ಬೆಳಕಿಗೆ ಬರುವುದು ಬಹಳ ಕಡಿಮೆ. ಹೊರಗಿನವರ ಗಮನಕ್ಕೆ ಬಾರದೆ ಎಷ್ಟೋ ಬಾಲಕಿಯರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಮೂಕ ರೋಧನ ಅನುಭವಿಸುತ್ತಿದ್ದಾರೆ. 16 -17 ವಯಸ್ಸಿಗೆ ಮದುವೆಯಾಗಿ ಮಕ್ಕಳ ಜವಾಬ್ದಾರಿ ಹೊರುತ್ತಿದ್ದಾರೆ. ಬಾಲ್ಯದಲ್ಲೇ ವಿವಾಹದ ಸಂಕೋಲೆಗಳಿಗೆ ಸಿಲುಕಿ ಶಿಕ್ಷಣದಿಂದ ವಂಚಿತರಾಗುವುದು ಮಾತ್ರ ವಲ್ಲದೆ ಸ್ವತಂತ್ರ ಆಲೋಚನಾ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ.
ದೇವಸ್ಥಾನಗಳಲ್ಲಿ ವಿವಾಹ: ಸಾಮಾನ್ಯವಾಗಿ ಬಾಲ್ಯ ವಿವಾಹಗಳು ದೇವಸ್ಥಾನಗಳಲ್ಲೇ ಹೆಚ್ಚಾಗಿ ನಡೆಯುತ್ತಿವೆ. ಇಂತಹ ವಿವಾಹಗಳು ಬಹಳ ಗುಪ್ತವಾಗಿ ನಡೆಯುತ್ತವೆ.
ಕೆಲವರು ಅಪ್ತಾಪ್ತ ಹೆಣ್ಣು ಮಕ್ಕಳಿಗೆ ನಡೆಯುತ್ತಿರುವ ವಿವಾಹದ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಪೊಲೀಸರ ಗಮನಕ್ಕೆ ತಂದರೆ, ಮತ್ತೆ ಕೆಲವರು ದ್ವೇಷದ ಕಾರಣದಿಂದಲೂ ಬಾಲ್ಯದಲ್ಲೇ ಮದುವೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡುವುದೂ ಉಂಟು. ಕೆಲವೊಮ್ಮೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲೇ ವಿವಾಹ ಮುಗಿದು ಹೋಗಿರುತ್ತವೆ. ಹಲವು ಸಮಯದಲ್ಲಿ ನಿಗದಿತ ಸಮಯಕ್ಕೆ ತೆರಳಿ ವಿವಾಹಗಳನ್ನು ತಡೆದಿರುವುದೂ ಉಂಟು.
ಜಾಗೃತಿ ಅಗತ್ಯ: ಬಾಲ್ಯ ವಿವಾಹ , ಫೋಕ್ಸೋ ಕಾಯಿದೆ ಸೇರಿದಂತೆ ಹೆಣ್ಣು ಮಕ್ಕಳ ದೌರ್ಜನ್ಯದ ವಿಷಯವಾಗಿ ನಗರ ಪ್ರದೇಶ ಗಳಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮೀಣ ಪರಿಸರದಲ್ಲಿರುವ ಹೆಣ್ಣು ಮಕ್ಕಳೊಂದಿಗೆ ಸಂವಾದ ನಡೆಸುವುದು, ಬಾಲ್ಯ ವಿವಾಹದಿಂದ ಎದುರಿಸಬೇಕಾದ ಸಮಸ್ಯೆಗಳ ಕುರಿತು ಅರಿವು-ಜಾಗೃತಿ ಮೂಡಿಸುವುದರೊಂದಿಗೆ ಬಾಲ್ಯದಲ್ಲೇ ಕಮರಿಹೋಗುತ್ತಿರುವ ನೂರಾರು ಹೆಣ್ಣು ಮಕ್ಕಳ ಬದುಕಿಗೆ ಹೊಸ ದಾರಿ ತೋರಿಸುವ ಜವಾಬ್ದಾರಿ ಎಲ್ಲರ ಮೇಲಿದೆ.