Advertisement

ಜಿಲ್ಲೆಯ ಕೈ-ದಳ ನಾಯಕರು ಕಮಲ ತೆಕ್ಕೆಗೆ

02:53 PM Nov 29, 2022 | Team Udayavani |

ಮಂಡ್ಯ: ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಮುಂದಾಗಿರುವ ಬಿಜೆಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಕಾಂಗ್ರೆಸ್‌, ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ನಡೆಸಲು ಸಜ್ಜಾಗುತ್ತಿದ್ದು, ಕೈ ಹಾಗೂ ದಳ ಪಕ್ಷಗಳ ನಾಯಕರನ್ನು ಸೆಳೆಯುತ್ತಿದೆ.

Advertisement

ಶ್ರೀರಂಗಪಟ್ಟಣ ಕ್ಷೇತ್ರದ ಯುವ ಮುಖಂಡ ಇಂಡು ವಾಳು ಎಸ್‌.ಸಚ್ಚಿದಾನಂದ ಹಾಗೂ ನಾಗಮಂಗಲ ಕ್ಷೇತ್ರದ ಸಮಾಜ ಸೇವಕ ಮಲ್ಲಿಕಾರ್ಜುನ್‌ (ಫೈಟರ್‌ ರವಿ) ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಬಿಜೆಪಿಯೂ ತನ್ನ ನೆಲೆ ಭದ್ರಪಡಿಸಿಕೊಳ್ಳಲು ಮುಂದಾಗಿದೆ.

ಕೇಸರಿ ಹಾರಿಸಿದ ನಾರಾಯಣಗೌಡ: ಜೆಡಿಎಸ್‌ನಿಂದ ಗೆದ್ದು 2 ಬಾರಿ ಶಾಸಕರಾಗಿದ್ದ ಸಚಿವ ಕೆ.ಸಿ.ನಾರಾಯ ಣಗೌಡ 2019ರಲ್ಲಿ ಬಿಜೆಪಿ ಸೇರ್ಪಡೆ ಆಗುವ ಮೂಲಕ ಕೈ-ದಳ ಮೈತ್ರಿ ಸರ್ಕಾರ ಬೀಳಿಸಲು ಪ್ರಮುಖ ಪಾತ್ರ ವಹಿಸಿದ್ದರು. ನಂತರ ನಡೆದ ಕೆ.ಆರ್‌ .ಪೇಟೆ ಉಪಚುನಾವಣೆಯಲ್ಲಿ ಮತ್ತೆ 3ನೇ ಬಾರಿ ಗೆಲ್ಲುವ ಮೂಲಕ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಮಲ ಅರಳಿಸಿ ಇತಿಹಾಸ ಬರೆದಿದ್ದಾರೆ.

ಮಂಡ್ಯ ಕ್ಷೇತ್ರಕ್ಕೆ ಬಲ ತುಂಬಿದ ಅಶೋಕ್‌: ಮಾಜಿ ಸಚಿವ ದಿವಂಗತ ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂ ಅವರೂ ಕಮಲ ಸೇರ್ಪಡೆಯಾಗುವ ಮೂಲಕ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬಲ ತುಂಬಿದ್ದಾರೆ. ಕಳೆದ ಚುನಾವಣೆಯಲ್ಲಿಯೇ ಅಭ್ಯರ್ಥಿ ಆಗಿದ್ದ ಚಂದಗಾಲು ಶಿವಣ್ಣ 30 ಸಾವಿರ ಮತ ಪಡೆದು ತಮ್ಮ ಸಾಮರ್ಥ್ಯ ತೋರಿದ್ದರು. ಅಶೋಕ್‌ಜಯರಾಂ ಅವರೂ ಬಿಜೆಪಿ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ.

ಬಿಜೆಪಿ ರೈತ ಮೋರ್ಚಾ ಸೇರಿದ ನಂಜುಂಡೇಗೌಡ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರೈತ ನಾಯಕರಾಗಿ ಗುರುತಿಸಿಕೊಂಡಿದ್ದ ಕೆ.ಎಸ್‌.ನಂಜುಂಡೇಗೌಡ 2018ರಲ್ಲಿ ಬಿಜೆಪಿ ಸೇರ್ಪಡೆಯಾದರು.

Advertisement

ನಂತರ ನಡೆದ ಚುನಾವಣೆಯಲ್ಲಿ ಅರೆಕೆರೆ ಕುಟುಂಬಗಳ ವಿರುದ್ಧ ಸ್ಫರ್ಧಿಸಿ ಪರಾಭವಗೊಂಡಿದ್ದರೂ ಬಿಜೆಪಿಯ ಮತ ಬ್ಯಾಂಕ್‌ ಹೆಚ್ಚಿಸಿದ್ದರು. ಕಮಲ ಮುಡಿದ ಲಕ್ಷ್ಮೀ ಅಶ್ವಿ‌ನ್‌ಗೌಡ: ಐಆರ್‌ಎಸ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದ ಲಕ್ಷ್ಮೀ ಅಶ್ವಿ‌ನ್‌ಗೌಡ ದಳಪತಿಗಳ ಭರವಸೆ ಮೇರೆಗೆ ಜೆಡಿಎಸ್‌ ಸೇರ್ಪಡೆಯಾಗಿದ್ದರು. ಆದರೆ, ದಳಪತಿಗಳ ಭರವಸೆ ಕೊನೆಗೂ ಈಡೇರಲಿಲ್ಲ. ಇದರಿಂದ ಸ್ವಲ್ಪ ದಿನ ಪಕ್ಷದಿಂದ ದೂರ ಉಳಿದಿದ್ದ ಅವರು, ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಗೊಂಡರು.

ಕಮಲ ತೆಕ್ಕೆಗೆ ಜಾರಿದ ಎಸ್‌.ಪಿ.ಸ್ವಾಮಿ: ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಮುಖಂಡರಾಗಿದ್ದ ಮನ್‌ಮುಲ್‌ ನಿರ್ದೇಶಕ ಎಸ್‌.ಪಿ.ಸ್ವಾಮಿ ಪತ್ನಿ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ನಾಗರತ್ನಸ್ವಾಮಿ ಅವರನ್ನು ಜಿಪಂ ಅಧ್ಯಕ್ಷ ಸ್ಥಾನ ಉಳಿಸಲು ಬಿಜೆಪಿಗೆ ಸೇರ್ಪಡೆ ಆಗುವ ಮೂಲಕ ದಳಪತಿಗಳಿಗೆ ತಿರುಗೇಟು ನೀಡಿದರು. ಈಗ ಮದ್ದೂರು ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್‌ನಿಂದ ಉಚ್ಚಾಟನೆ ಆಗಿದ್ದ ಸಚ್ಚಿದಾನಂದ: ಕಳೆದ ಲೋಕಸಭೆ ಚುನಾವಣೆಯಲ್ಲಿ ಸಂಸದೆ ಸುಮಲತಾಅಂಬರೀಷ್‌ ಪರ ನಿಂತಿದ್ದಕ್ಕೆ ಇಂಡು ವಾಳು ಸಚ್ಚಿದಾನಂದ ಅವರನ್ನು ಕಾಂಗ್ರೆಸ್‌ ಉಚ್ಚಾಟನೆ ಮಾಡಿತ್ತು. ಬೇಸತ್ತ ಸಚ್ಚಿದಾನಂದ ಮೌನ ವಾಗಿಯೇ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಾ ಪ್ರಭಾವ ಬೆಳೆಸಿಕೊಂಡರು. ನಂತರ ಆಗಿನಿಂದಲೂ ಬಿಜೆಪಿ ಸೇರುತ್ತಾರೆ ಎಂಬ ಚರ್ಚೆ ನಡೆಯುತ್ತಿದ್ದವು. ಈಗ ಕಮಲ ಹಿಡಿಯುವ ಮೂಲಕ ಚರ್ಚೆಗೆ ತೆರೆ ಎಳೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

ನಾಗಮಂಗಲ ಕ್ಷೇತ್ರದಲ್ಲಿ ಪ್ರತ್ಯಕ್ಷವಾದ ಫೈಟರ್‌ ರವಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿಢೀರ್‌ ಎಂದು ನಾಗಮಂಗಲ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ್‌(ಫೈಟರ್‌ ರವಿ) ಪ್ರತ್ಯಕ್ಷವಾದರು. ಕಳೆದ 5-6ತಿಂಗಳಲ್ಲಿಯೇ ನಾಗಮಂಗಲ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದರು. ಸಮಾಜ ಸೇವೆ ಮಾಡುತ್ತಾ ಗುರುತಿಸಿಕೊಂಡಿದ್ದಾರೆ. ಮೊದ ಮೊದಲು ರಾಜಕೀಯ ಬೇಡ ಎನ್ನುತ್ತಿದ್ದ ಫೈಟರ್‌ ರವಿ, ರಾಜಕೀಯಕ್ಕೆ ಬರಬೇಕೆಂದುಕೊಂಡಿದ್ದೇನೆ ಎಂದು ಇತ್ತೀಚೆಗೆ ಪಕ್ಷೇತರ ವಾಗಿ ಸ್ಫರ್ಧಿಸುವ ಬಗ್ಗೆ ಘೋಷಣೆ ಮಾಡಿದ್ದರು. ಸೋಮವಾರ ದಿಢೀರ್‌ ಎಂದು ಬಿಜೆಪಿ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಸಂಸದೆ ಸುಮಲತಾ ನಡೆ ಇನ್ನೂ ನಿಗೂಢ : ತನ್ನ ಆಪ್ತ ಇಂಡುವಾಳು ಸಚ್ಚಿದಾನಂದ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇನ್ನೂ ಸಂಸದೆ ಸುಮಲತಾಅಂಬರೀಷ್‌ ಯಾವಾಗ ಕಮಲ ಮುಡಿಯುತ್ತಾರೆ ಎಂಬ ಪ್ರಶ್ನೆ ಎದ್ದಿವೆ. ಈಗಾಗಲೇ ಹಲವು ಬಾರಿ ಸುಮಲತಾ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಅದಕ್ಕಾಗಿ ಕೆಲವು ಷರತ್ತು ಹಾಕಿದ್ದಾರೆ ಎಂಬ ಚರ್ಚೆ ನಡೆದಿದ್ದವು. ಅಲ್ಲದೆ, ಸಚಿವ ಆರ್‌.ಅಶೋಕ್‌ ಅವರೂ ಸುಮಲತಾರಿಗೆ ಪಕ್ಷ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿದ್ದೇವೆ ಎಂದು ಬಹಿರಂಗವಾಗಿ ಹೇಳಿದ್ದರು. ಈ ನಡುವೆ ಸುಮಲತಾಅಂಬರೀಷ್‌ ನಾನೂ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದಿದ್ದರು. ಆದರೆ, ಈಗ ತಮ್ಮ ಆಪ್ತ ಸಚ್ಚಿದಾನಂದ ಬಿಜೆಪಿಗೆ ಸೇರ್ಪಡೆಯಾಗಿದ್ದು, ಭಾಷಣದಲ್ಲಿ ಸಚ್ಚಿದಾನಂದ ಕೂಡ ಸುಮಲತಾ ಅವರನ್ನು ಬಿಜೆಪಿಗೆ ಕರೆ ತರುತ್ತೇವೆ ಎಂದು ಹೇಳಿರುವುದು ಬಿಜೆಪಿ ಸೇರ್ಪಡೆಯ ವಿಚಾರಕ್ಕೆ ಪುಷ್ಠಿ ನೀಡಿದೆ.

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next