ನಾಗಮಂಗಲ: ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ 19ದಿಂದ ಮತ್ತೂಂದು ಸಾವು ಸಂಭವಿಸಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದೇವಲಾಪುರ ಹೋಬಳಿಯ ರಾಮೇನಹಳ್ಳಿ ಗ್ರಾಮದ 51 ವರ್ಷದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತ ವ್ಯಕ್ತಿಯ ಕೋವಿಡ್ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ರಾಮೇನಹಳ್ಳಿ ಗ್ರಾಮದ ಮೃತ ವ್ಯಕ್ತಿಯ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ನಾಗಮಂಗಲ ಸೆಸ್ಕ್ ಉಪವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 51 ವರ್ಷದ (ರಮೇಶ್) ವ್ಯಕ್ತಿಗೆ ಉಸಿರಾಟದ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ಜು.4ರ ರಾತ್ರಿ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಗಾಗಿ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಈ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮೃತವ್ಯಕ್ತಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಕೋವಿಡ್ ನಿಯಮಾನುಸಾರ ಅಲ್ಲಿನ ಜಿಲ್ಲಾಡಳಿತ ಮೈಸೂರಿನಲ್ಲಿಯೇ ಅಂತ್ಯಸಂಸ್ಕಾರ ನಡೆಸಿತ್ತು.
ಕುಟುಂಬಸ್ಥರು ಕ್ವಾರಂಟೈನ್: ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ತಾಲೂ ಕಿನ ವ್ಯಕ್ತಿಗೆ ಕೋವಿಡ್ 19 ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ನಿರ್ದೇ ಶನದಂತೆ ವ್ಯಕ್ತಿಯ ಸ್ವಗ್ರಾಮ ರಾಮೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕುಂಞ ಅಹಮ್ಮದ್, ತಾಲೂಕು ಆರೋಗ್ಯಾಧಿಕಾರಿ ಡಾ. ಟಿ.ಎನ್.ಧನಂಜಯ ನೇತೃತ್ವದ ತಾಲೂಕು ಅಧಿಕಾರಿಗಳು ಪರಿಶೀಲಿಸಿ, ಮನೆಯನ್ನು ಸೀಲ್‌ಡೌನ್ ಮಾಡಿ, ಕುಟುಂಬ ಸ್ಥರನ್ನು ಕ್ವಾರಂಟೈನ್ ಮಾಡಿದ್ದಾರೆ
ಸೆಸ್ಕ್ನಲ್ಲಿ ಕೆಲಸ ಮಾಡುವ 43 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಲ್ಲರಿಗೂ ನೆಗೆಟಿವ್ ಬಂದಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಪಾಡಿಕೊಂಡು ಇಲಾಖೆಯಲ್ಲಿ ವ್ಯವಹರಿಸಬಹುದು.
-ಮರಿಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ನಾಗಮಂಗಲ