Advertisement

ಮಂದಿರ ನಿರ್ಮಾಣ ಟ್ರಸ್ಟ್‌ ರಚನೆ ಚರ್ಚೆ: ಮಿಲಿಂದ್‌

11:05 PM Dec 26, 2019 | mahesh |

ಮಂಗಳೂರು: ನಗರದಲ್ಲಿ ನಡೆಯುತ್ತಿರುವ ವಿಹಿಂಪ ಕೇಂದ್ರೀಯ ವಿಶ್ವಸ್ತ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿ ಬೈಠಕ್‌ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರಾಜಕೀಯೇತರ ಸ್ವತಂತ್ರ ಟ್ರಸ್ಟ್‌ ರಚನೆ ಬೇಡಿಕೆ ಸೇರಿದಂತೆ ಪ್ರಮುಖ ಕಾರ್ಯಸೂಚಿಗಳ ಬಗ್ಗೆ ಚರ್ಚೆಸಲಾಗುವುದು ಎಂದು ವಿಹಿಂಪ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ ತಿಳಿಸಿದ್ದಾರೆ. ಸಂಘನಿಕೇತನದಲ್ಲಿ ಡಿ. 26ರಿಂದ 30ರ ವರೆಗೆ ನಡೆಯುವ ಸಮಿತಿ ಬೈಠಕ್‌ನ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

Advertisement

3 ಕೋಟಿ ವಲಸಿಗ ಹಿಂದೂಗಳಿಗೆ ಪ್ರಯೋಜನ
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಐತಿಹಾಸಿಕ ಕ್ರಮವನ್ನು ಕೈಗೊಂಡಿರುವುದಕ್ಕೆ ಭಾರತ ಸರಕಾರವನ್ನು ವಿಶ್ವಹಿಂದೂ ಪರಿಷತ್‌ ಅಭಿನಂದಿಸುತ್ತದೆ. ಇದರಿಂದ ಪಾಕಿಸ್ಥಾನ, ಬಂಗ್ಲಾ ಹಾಗೂ ಅಫ್ಘಾನಿಸ್ಥಾನದಿಂದ ಭಾರತಕ್ಕೆ ವಲಸೆ ಬಂದಿರುವ ಸುಮಾರು 3 ಕೋಟಿ ಹಿಂದೂಗಳಿಗೆ ಪ್ರಯೋಜನವಾಗಲಿದೆ. ಆದರೆ ಕಾಯಿದೆ ಮುಸ್ಲಿಮರ ವಿರುದ್ಧವಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂಥಹ ಅಪಪ್ರಚಾರಗಳಿಗೆ ಉತ್ತರ ನೀಡುವ ಕಾರ್ಯ ಆಗಬೇಕಾಗಿದೆ. ಕೇಂದ್ರ ಸರಕಾರದ ಈ ಕಾಯಿದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ 100ಕ್ಕೂ ಅಧಿಕ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ವಿಶ್ವಹಿಂದೂ ಪರಿಷತ್‌ ವತಿಯಿಂದ ಆಯೋಜಿಸಲಾಗಿದೆ. ಇದನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳುವ ಬಗ್ಗೆ ಹಾಗೂ ವಿಶ್ವ ಮಟ್ಟದಲ್ಲಿ ಇದರ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಸಂಘಟಿಸುವ ಬಗ್ಗೆ ಬೈಠಕ್‌ನಲ್ಲಿ ಚರ್ಚಿಸಲಾಗುವುದು ಎಂದು ವಿವರಿಸಿದರು.

ಸಂಸ್ಕಾರ ವೃದ್ಧಿಗೆ ಪೂರಕ ಕಾರ್ಯಕ್ರಮ
ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಸಮಾಜದಲ್ಲಿ ಸಂಸ್ಕಾರ ಕ್ಷೀಣಿಸುತ್ತಿರುವುದೇ ಮುಖ್ಯ ಕಾರಣ. ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಆದುದರಿಂದ ಹಿಂದೂ ಜೀವನ ಮೌಲ್ಯಗಳನ್ನು ಮತ್ತು ಸಂಸ್ಕಾರ ವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳು, ಗೋವುಗಳ ರಕ್ಷಣೆಗೆ ಕ್ರಮ, ವಿಹಿಂಪ ಸಂಘಟನೆಯನ್ನು ದೇಶ ಮತ್ತು ವಿದೇಶಗಳಲ್ಲಿ ಇನ್ನಷ್ಟು ವಿಸ್ತರಿಸುವುದು, ಮತಾಂತರ ತಡೆ, ಸೇವಾ ಕಾರ್ಯಕ್ರಮಗಳ ವಿಸ್ತರಣೆ ಹಾಗೂ ಇತರ ಧರ್ಮಗಳಿಂದ ಹಿಂದೂ ಧರ್ಮಕ್ಕೆ ಬರಲಿಚ್ಛಿಸುವರ ಸ್ವಾಗತ ಕುರಿತು ಬೈಠಕ್‌ನಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಮಿಲಿಂದ್‌ ಪರಾಂಡೆ ತಿಳಿಸಿದರು.

ಡಿ. 27ರಂದು ಬೈಠಕ್‌ನ ಅಧಿಕೃತ ಉದ್ಘಾಟನೆ ನಡೆಯಲಿದೆ. ಅನಂತರ ನಡೆಯುವ ಬೈಠಕ್‌ಗಳಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆಯ ಬಳಿಕ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದವರು ತಿಳಿಸಿದರು. ಜಂಟಿ ಕಾರ್ಯದರ್ಶಿ ವಿಜಯಶಂಕರ್‌ ಉಪಸ್ಥಿತರಿದ್ದರು.

ಎಲ್ಲರ ದೇಣಿಗೆಯಲ್ಲಿ ಮಂದಿರವಾಗಲಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಟ್ರಸ್ಟ್‌ ರಚಿಸುವಂತೆ ಸುಪ್ರೀಂ ಕೋರ್ಟ್‌ ಈಗಾಗಲೇ ಆದೇಶಿಸಿದೆ. ಸರಕಾರದಿಂದ ಟ್ರಸ್ಟ್‌ ರಚನೆಯಾದರೆ ಅದು ರಾಜಕೀಯಗೊಳ್ಳುತ್ತದೆ ಮತ್ತು ಅದರಲ್ಲಿ ರಾಜಕೀಯ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶವಾಗುತ್ತದೆ. ಸರಕಾರ ಬದಲಾದರೆ ಟ್ರಸ್ಟ್‌ನ ಸದಸ್ಯರು ಬದಲಾಗುತ್ತಾರೆ. ಅದುದರಿಂದ ಟ್ರಸ್ಟ್‌ ವ್ಯವಸ್ಥೆಯು ರಾಜಕೀಯೇತರ ಹಾಗೂ ಸ್ವತಂತ್ರವಾಗಿರಬೇಕು ಮತ್ತು ಸಮಾಜದ ಹಣವನ್ನೇ ಬಳಸಿ ಈ ಮಂದಿರ ನಿರ್ಮಾಣವಾಗಬೇಕು ಎಂಬುದು ವಿಶ್ವಹಿಂದೂ ಪರಿಷತ್‌ನ ನಿಲುವಾಗಿದೆ ಎಂದು ಮಿಲಿಂದ್‌ ಪರಾಂಡೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next