ಹೊಸದಿಲ್ಲಿ: ಎಲ್ಲ ಕ್ರಿಕೆಟಿಗರೂ ಈಗ ಐಪಿಎಲ್ ಕನವರಿಕೆಯಲ್ಲೇ ಇದ್ದಾರೆ. ಈ ವರ್ಷ ಐಪಿಎಲ್ ನಡೆಯದು ಎಂಬುದನ್ನು ಕಲ್ಪಿಸಿಕೊಳ್ಳಲಾಗದ ಸ್ಥಿತಿ ಎಲ್ಲರದೂ. ಇದಕ್ಕೆ ಆರ್‌ಸಿಬಿಯ ಮಾಜಿ ಆಟಗಾರ, ಈಗ ತವರಿನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಮನ್‌ದೀಪ್ ಸಿಂಗ್ ಕೂಡ ಹೊರತಲ್ಲ. ಅವರು ಆರ್‌ಸಿಬಿ ಮತ್ತು ಕೊಹ್ಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬಹಳ ಬೇಸರದಿಂದ ಹೇಳಿಕೊಂಡಿದ್ದಾರೆ.
“ಆರ್‌ಸಿಬಿ ತಂಡದ ಆಟಗಾರರ ಅನುಭವ ಅತ್ಯದ್ಭುತ. ಕೊಹ್ಲಿ, ಎಬಿಡಿ, ಗೇಲ್ ಮೊದಲಾದ ವಿಶ್ವ ದರ್ಜೆಯ ಆಟಗಾರರನ್ನು ಹೊಂದಿದ ತಂಡ ಇದಾಗಿತ್ತು. ಆದರೆ ತಂಡದೊಂದಿಗಿನ ನನ್ನ ಬಾಂಧವ್ಯ ಕೊನೆಗೊಂಡಿದೆ. ಎಲ್ಲವೂ ನೆನಪಾಗಿ ಕಾಡುತ್ತಿದೆ’ ಎಂದಿದ್ದಾರೆ.
ಮನ್‌ದೀಪ್ 2015ರಲ್ಲಿ ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. 4 ವರ್ಷಗಳ ಕಾಲ ಈ ತಂಡದ ಸದಸ್ಯನಾಗಿದ್ದರು. ಪಂಜಾಬ್ ತಂಡ ಸೇರಿಕೊಂಡ ಬಳಿಕ ತಾನು ಉಪಯೋಗಿಸಿದ ಆರ್‌ಸಿಬಿಯ ಅಷ್ಟೂ ಜೆರ್ಸಿಯನ್ನು ವಿವಿಧ ಸೇವಾಸಂಸ್ಥೆಗಳಿಗೆ ನೀಡಿದ್ದರು.
ರನ್ ಹಸಿವು ಅಗತ್ಯ
“ವಿರಾಟ್ ಕೊಹ್ಲಿಯೇ ನನ್ನ ಬ್ಯಾಟಿಂಗಿಗೆ ಮಾದರಿ. ಅವರು ಜಿಮ್‌ನಲ್ಲಿ ಹೆಚ್ಚು ಕಾಲ ಕಳೆಯುವುದಿಲ್ಲ. ಆದರೆ ಅವರ ಫಿಟ್‌ನೆಸ್ ಅಮೋಘ. ರನ್ ಹಸಿವಂತೂ ಸಾಟಿಯಿಲ್ಲದ್ದು. ಕೇವಲ ಟೆಕ್ನಿಕ್ ಮಾತ್ರ ಸಾಲದು, ಇಂಥ ರನ್ ಹಸಿವು ನಿನ್ನಲ್ಲೂ ಇರಬೇಕು; ಅವರನ್ನು ನೋಡಿ ಕಲಿ ಎಂಬುದಾಗಿ ಎಬಿಡಿ ನನಗೊಮ್ಮೆ ಹೇಳಿದ್ದರು…’ ಎಂಬುದನ್ನು ಮನ್‌ದೀಪ್ ಸಿಂಗ್ ಈ ಲಾಕ್‌ಡೌನ್ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ.
“ಇನ್ನು ನನ್ನ ಅಮ್ಮ. ಆಕೆ ಕ್ರಿಕೆಟ್ ಪ್ರೇಮಿಯೇನೂ ಅಲ್ಲ, ಕ್ರಿಕೆಟನ್ನು ನೋಡುವುದೂ ಕಡಿಮೆ. ಆದರೆ ವಿರಾಟ್ ಕೊಹ್ಲಿ ಅವರ ಕಣ್ಣಲ್ಲಿ ಗೋಚರಿಸುವ ಆ ಕಾಂತಿ ತನ್ನ ಕಣ್ಣಲ್ಲೂ ಕಾಣಬೇಕು ಎಂದು ಅಮ್ಮ ಬಯಸುತ್ತಿದ್ದರು’ ಎಂದು ಮನ್‌ದೀಪ್ ಹೇಳಿದರು.