ಸಾಧಿಸಿದರೆ ಎಲ್ಲವೂ ಸಾಧ್ಯ. ಸಾಧನೆಗೆ ಯಾವುದೇ ಹಂಗು ಇಲ್ಲ ಎಂಬುದನ್ನು ಸಾಧಕರು ಪದೇ ಪದೇ ನಿರೂಪಿಸುತ್ತಿದ್ದಾರೆ, ಆ ಪಟ್ಟಿಯಲ್ಲಿ ಈಗ ಮನ್‌ದೀಪ್ ಕೌರ್ ಕೂಡ ಸೇರುತ್ತಾರೆ. ಪಂಜಾಬ್‌ನಿಂದ ನ್ಯೂಜಿಲ್ಯಾಂಡ್‌ನ ವರೆಗಿನ ಪ್ರಯಾಣ ಸುಲಭವಾಗಿರಲಿಲ್ಲ. ಬದುಕಲು ಯಾವುದೇ ಮಾರ್ಗ ಇಲ್ಲದಿರುವಾಗ ಆಯ್ದುಕೊಂಡ ಟ್ಯಾಕ್ಸಿ ಚಾಲಕಿ ವೃತ್ತಿಯಿಂದ ವಿದೇಶದಲ್ಲಿ ಪೊಲೀಸ್ ಆಗುವವರೆಗೆ ಮನ್‌ದೀಪ್ ಕೌರ್ ಬಳಿ ಹೇಳಲು ಸಾವಿರ ಕಥೆಗಳಿವೆ. ಸ್ವಂತ ಮಕ್ಕಳನ್ನಯ ತನ್ನಿಂದ ದೂರವುಳಿಸಿ ಕನಸಿನ ಬೆಂಬತ್ತಿ ಓಡುವುದು ಅಷ್ಟು ಸುಲಭದ ಮಾತೇನಲ್ಲ ಎಂಬುದು ಮನ್‌ದೀಪ್‌ಕೌರ್ ಅವರ ಮನದಾಳದ ಮಾತು.
ಇದನ್ನೂ ಓದಿ: ಸಿ.ಟಿ. ರವಿ ಸರ್ಕಾರದ ಭಾಗವಲ್ಲ; ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ: ಸಚಿವ ಬಿ.ಸಿ. ನಾಗೇಶ್
ಹುಡುಗಿ ಪೊಲೀಸ್ ಯಾಕಾಗಬಾರದು? ಹುಡುಗಿ ಪೊಲೀಸ್ ಯಾಕಾಗಬಾರದು? ಹೀಗೊಂದು ಪ್ರಶ್ನೆಯನ್ನು ತನ್ನ ಬಾಲ್ಯದಲ್ಲಿ ತಾಯಿಯ ಮುಂದೆ ಕೇಳಿದ್ದ ಕೌರ್‌ಗೆ ಲಭಿಸಿದ್ದು ನಿರಾಸೆ ಮಾತ್ರ. ಪಂಜಾಬ್‌ನ ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಮನ್‌ದೀಪ್‌ಕೌರ್ ಬಳಿ ಆಕೆಯ ತಾಯಿ ನೀನು ಹುಡುಗನಾಗಿದ್ದರೆ ಪೊಲೀಸ್ ಆಗಬಹುದಿತ್ತು ಎನ್ನುತ್ತಿದ್ದರು.
ಆಗ ಬಾಲಕಿಯದ್ದು ಗೊಂದಲದ ಮನಸ್ಥಿತಿ. ಯಾಕೆ ಹುಡುಗರು ಮಾತ್ರ ಪೊಲೀಸ್ ಆಗಬೇಕೆಂದು? ಆ ಪ್ರಶ್ನೆಗೆ ಉತ್ತರ ಹುಡುಕಿದ್ದು ಮಾತ್ರ ವರ್ಷಗಳ ಬಳಿಕ. 18 ವರ್ಷಕ್ಕೆ ಮದುವೆಯಾಗಿ 19 ವರ್ಷಕ್ಕೆ ತಾಯಿಯಾಗಿ ಒಂದು ಕುಟುಂಬ ನಡೆಸುತ್ತಿದ್ದ ಕೌರ್ ಅವರ ಜೀವನ ಎರಡು ಮಕ್ಕಳಾದಾಗ ತಾಯಿ ಮನೆಗೆ ಹಿಂದಿರುಗುವಲ್ಲಿಗೆ ಮುಟ್ಟಿತ್ತು. ಯಶಸ್ಸಿನ ಮೊದಲ ಹೆಜ್ಜೆ ಅಲ್ಲಿಂದ ಆರಂಭವಾಗಿತ್ತೆಂದು ಹೇಳಿದರೂ ತಪ್ಪಾಗಲಾರದು. ತನ್ನ ಮಕ್ಕಳನ್ನು ಹೆತ್ತವರ ಬಳಿ ಬಿಟ್ಟು ಆಕೆ ಆಸ್ಟ್ರೇಲಿಯಾಗೆ ತೆರಳಿದರು. ಅಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ದೊರಕಿತ್ತು. ಇಂಗ್ಲೀಷ್‌ನಲ್ಲಿ ಮಾತನಾಡುವ ಆತ್ಮವಿಶ್ವಾಸ ಅಲ್ಲಿಂದ ಆರಂಭವಾಯಿತು. ಟ್ಯಾಕ್ಸಿ ಓಡಿಸುವ ಪರವಾನಿಗೆಯನ್ನೂ ಪಡೆದುಕೊಂಡರು.
1999ರಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳಿದರು. ಒಂದು ದಿನ ಟ್ಯಾಕ್ಸಿ ಮನೋತಜ್ಞರು ಪ್ರಯಾಣ ಮಾಡುತ್ತಿದ್ದರು. ಅವರು ಕೌರ್ ಬಳಿ ಸಂತೋಷದ ಬಗ್ಗೆ ಮಾತನಾಡುತ್ತ ಬಾಲ್ಯದ ಕನಸುಗಳನ್ನು ನನಸು ಮಾಡಿಕೊಳ್ಳುವುದೇ ನಿಜವಾದ ಆತ್ಮತೃಪ್ತಿ ಎನ್ನುತ್ತಾರೆ. ಅಲ್ಲಿಗೆ ಪೊಲೀಸ್ ಆಗುವ ಕನಸು ಮತ್ತೆ ಜೀವಂತವಾಗುತ್ತದೆ. ಅಲ್ಲಿನ ಓರ್ವ ಪೊಲೀಸ್ ಅಧಿಕಾರಿಯ ಸಹಾಯದಿಂದ ಆಕೆ ಪೊಲೀಸ್ ಆಗುವತ್ತ ಗಮನ ಹರಿಸುತ್ತಾರೆ. ಕರ್ತವ್ಯಕ್ಕೆ ಮುಖ್ಯ ದೇಹದ ದೃಢತೆ ಎಂದರಿತ ಅವರು ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡರು. ಸಾಧನೆಗೆ ಯಾವುದೂ ಅಡ್ಡಿಯಾಗಲ್ಲ. ಕೊನೆಗೂ ಪಟ್ಟ ಪ್ರಯತ್ನಕ್ಕೆ ಫಲ ಸಿಕ್ಕಿತು. 2004 ರಲ್ಲಿ ಆಕೆ ನ್ಯೂಜಿಲ್ಯಾಂಡ್‌ನ ಪೊಲೀಸ್ ಅಧಿಕಾರಿಯಾದರು. 2021ರಲ್ಲಿ ಭಡ್ತಿ ಪಡೆದ ಆಕೆ ನ್ಯೂಜಿಲ್ಯಾಂಡ್‌ನಲ್ಲಿ ಪೊಲೀಸ್ ಆದ ಮೊದಲ ಭಾರತೀಯೆ. ಈಗ ತನ್ನ ಮಕ್ಕಳ ಜತೆ ಶಾಶ್ವತವಾಗಿ ಅಲ್ಲಿ ನೆಲೆಸಿದ್ದಾರೆ.