ಬೆಂಗಳೂರು: ಕಡ್ಡಾಯ ಮತದಾನ ಮಾಡುವ ಮೂಲಕ ಸಂವಿಧಾನಕ್ಕೆ ಗೌರವ ಸಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಒಪ್ಪಿಕೊಂಡಿರುವ ನಾವುಗಳು ಕಡ್ಡಾಯ ಮತದಾನ ಮಾಡುವ ಮೂಲಕ ಅವುಗಳನ್ನು ಗೌರವಿಸಬೇಕು. ಪ್ರಸ್ತುತ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾಯೋನ್ಮುಖರಾಗಬೇಕು ಎಂದು ಹೇಳಿದರು.
ಮತದಾನದಂತಹ ಜವಾಬ್ದಾರಿಯನ್ನು ನಿಭಾಯಿಸದೇ ಸರ್ಕಾರ ಅಥವಾ ರಾಜಕಾರಣಿಗಳ ದುರಾಡಳಿತದ ಕುರಿತು ಪ್ರಶ್ನೆ ಮಾಡುವ ಹಕ್ಕು ನಮಗಿರುವುದಿಲ್ಲ. ಉತ್ತಮ, ಜನಪರ, ಜವಾಬ್ದಾರಿಯುತ ರಾಜಕೀಯ ಇರುವ ಕಡೆಯಲ್ಲಿ ನಿಜವಾದ ಪ್ರಜಾಪ್ರಭುತ್ವ ಇರುತ್ತದೆ. ಹೀಗಾಗಿ, ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದರು.
ಮುಖ್ಯ ಅತಿಥಿಗಳಾಗಿ ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿ, ಪ್ರಜಾತಂತ್ರ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಮತಚಲಾವಣೆ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ಪ್ರಜಾಪ್ರಭುತ್ವದ ನ್ಯೂನತೆಗಳನ್ನು ಸರಿಪಡಿಸಲು ಕಡ್ಡಾಯ ಮತದಾನವೇ ಸರಿಯಾದ ಮಾರ್ಗ ಎಂದರು.
ಈ ವೇಳೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು “ಯುವ ಮತದಾರರಿಗೆ” ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ಜಾಗೃತಿ ಕುರಿತು ವಿದ್ಯುನ್ಮಾನ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು ರಚಿಸಿ, ನಿರ್ದೇಶಿಸಿದ ಬೀದಿ ನಾಟಕ ಪ್ರದರ್ಶಿಸಿದರು. ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.