Advertisement

ಕಡ್ಡಾಯವಾಗಿ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸಿ: ಡೀಸಿ

09:55 PM Jan 19, 2020 | Lakshmi GovindaRaj |

ಚಾಮರಾಜನಗರ: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಜಿಲ್ಲಾದ್ಯಂತ ಭಾನುವಾರದಿಂದ ನಾಲ್ಕು ದಿನಗಳವರೆಗೆ ಹಮ್ಮಿಕೊಳ್ಳಲಾಗಿರುವ ಪಲ್ಸ್‌ ಪೋಲಿಯೋದಲ್ಲಿ 5 ವರ್ಷದೊಳಗಿನ ಯಾವುದೇ ಮಗುವೂ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದ ಬೀಡಿ ಕಾಲೋನಿಯ ಟಿಪ್ಪು ಮಸೀದಿ ಬಳಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಗುವಿನ ಬಾಯಿಗೆ ಪೋಲಿಯೋ ಲಸಿಕೆ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪೋಲಿಯೋ ಮುಕ್ತ ಅವಶ್ಯ: 2016ರಲ್ಲಿಯೇ ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಿಸಲಾಗಿದ್ದು, ಪ್ರಸ್ತುತ ನಮ್ಮ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣ ವರದಿಯಾಗಿಲ್ಲ. ಹಾಗಿದ್ದರೂ ವಿದೇಶಿಯರಿಂದ ಮರುಕಳಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೋಲಿಯೋವನ್ನು ಶಾಶ್ವತವಾಗಿ ತಡೆಗಟ್ಟಲು ಆಗತಾನೇ ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ತಪ್ಪದೇ ಹಾಕಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮಾಡಿದೆ ಎಂದರು.

ಗಮನಹರಿಸಿ: ಈ ಬಾರಿ ಒಂದೇ ಹಂತದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪೋಲಿಯೋ ಲಸಿಕೆ ನಿರ್ಲಕ್ಷಿ$Âಸಿದರೆ ಮಗುವಿಗೆ ಜೀವನ ಪರ್ಯಂತ ಅಂಗವಿಕಲತೆ ಕಾಡುತ್ತದೆ. ಮಗುವಿನ ತಾಯಂದಿರು, ಪೋಷಕರು ಇದಕ್ಕೆ ಸಹಕರಿಸಬೇಕು. ಜ.20, 21, 22ರಂದು ಪಟ್ಟಣದ ಮನೆಮನೆಗೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವಿದೆ. ಜಿಲ್ಲೆಯಲ್ಲಿ 67,504 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಶೇ. 100 ಪ್ರಗತಿ ಸಾಧಿಸಲು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಬಿ.ಎಚ್‌.ನಾರಾಯಣರಾವ್‌, ಪೋಲಿಯೋ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವುದರ ಮಹತ್ವವನ್ನು ನೆರೆಹೊರೆಯವರು ಸೇರಿದಂತೆ ಎಲ್ಲರಿಗೂ ತಿಳಿಸಿ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದರು. ನಗರಸಭೆ ಸದಸ್ಯ ಖಲೀಲ್‌ ಅಹಮದ್‌, ರಾಜ್ಯಮಟ್ಟದ ಪಲ್ಸ್‌ ಪೋಲಿಯೋ ವ್ಯವಸ್ಥಾಪಕ ವೆಂಕಟೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ. ರವಿ, ಜಿಲ್ಲಾ ಲಸಿಕಾ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಪಿಸಿಪಿಎನ್‌ಡಿಟಿ ಉಪನಿರ್ದೇಶಕರು ಹಾಗೂ

Advertisement

ಜಿಲ್ಲಾ ನೋಡೆಲ್‌ ಅಧಿಕಾರಿ ಡಾ.ಚಂದ್ರಕಲಾ, ಟಿಪ್ಪು ಮಸೀದಿ ಧರ್ಮಗುರು ಮೌಲಾನ ಸಮೀವುಲ್ಲಾ, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ ಇದ್ದರು. ಇದೇ ಸಂದರ್ಭದಲ್ಲಿ ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗದ ವತಿಯಿಂದ ಪಲ್ಸ್‌ ಪೋಲಿಯೋ ಕುರಿತು ಯಳಂದೂರಿನ ರಂಗದೇಗುಲ ಕಲಾವೇದಿಕೆ ಶಾಂತರಾಜು ಹಾಗೂ ತಂಡ ಬೀದಿನಾಟಕ ಪ್ರದರ್ಶನ ನಡೆಯಿತು.

ನಾಳೆ ವಿದ್ಯುತ್‌ ವ್ಯತ್ಯಯ
ಚಾಮರಾಜನಗರ: ತಾಲೂಕಿನ ಹರವೆ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ 220ಕೆವಿ ಮತ್ತು 66ಕೆವಿ ಒವರ್‌ಹೆಡ್‌ ಪ್ರಸರಣ ಮಾರ್ಗಗಳ ನಿರ್ವಹಣಾ ಕಾರ್ಯವನ್ನು ಜ. 21ರಂದು ಹಮ್ಮಿಕೊಳ್ಳಲಾಗಿದ್ದು ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಜ. 21ರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಉತ್ತುವಳ್ಳಿ, ಹೊಸಹಳ್ಳಿ, ದೇವಲಾಪುರ, ಉಡಿಗಾಲ, ಮೂಡ್ನಾಕೂಡು, ತಮ್ಮಡಹಳ್ಳಿ, ನಂಜದೇವನಪುರ, ವೀರನಪುರ, ಕಾಳನಹುಂಡಿ, ಉಗನೇದಹುಂಡಿ.

ಚಿಕ್ಕಕೆಂಪಿಹುಂಡಿ, ಬಡಗಲಪುರ, ಸಾಣೇಗಾಲ, ಲಕ್ಷ್ಮೀಪುರ, ಸಿದ್ದಲಿಂಗಪುರ, ಮಹದೇಶ್ವರ ಕಾಲೋನಿ, ಕೇತಹಳ್ಳಿ, ಸಾಗಡೆ, ಬೆಟ್ಟದಪುರ, ಕುಮಚಹಳ್ಳಿ, ಕೆಂಗಾಕಿ, ಬೊಕ್ಕೆಪುರ, ಹಳೀಪುರ, ಕಲ್ಪುರ, ದೇಸಿಗೌಡನಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಹರದನಹಳ್ಳಿ ಉಪವಿಭಾಗದ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next