Advertisement

ಮಂದಾರ ತ್ಯಾಜ್ಯ; ವಾರದೊಳಗೆ ಸರಕಾರದ ಪರಿಹಾರ ಪ್ಯಾಕೇಜ್‌ ನಿರೀಕ್ಷೆ

09:34 PM Oct 01, 2019 | mahesh |

ಮಹಾನಗರ: ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಜರಿದು ಮಂದಾರ ವ್ಯಾಪ್ತಿಯಲ್ಲಿ ಹರಡಿ ನಿರ್ವಸಿತರಿಗೆ ಆಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ತ್ಯಾಜ್ಯವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಈ ವಾರದೊಳಗೆ ಸೂಕ್ತ ಆದೇಶ ಸರಕಾರದಿಂದ ಪ್ರಕಟವಾಗುವ ನಿರೀಕ್ಷೆಯಿದೆ.

Advertisement

ಮಂದಾರ ತ್ಯಾಜ್ಯ ಘಟನೆ ನಡೆದ ಅನಂತರ ಖಾಸಗಿ-ಸರಕಾರಿ ಸಹಿತ ಹಲವರ ನೇತೃತ್ವದ ಸಮಿತಿಗಳು ಸ್ಥಳಕ್ಕೆ ಭೇಟಿ ನೀಡಿತಾದರೂ, ಇಲ್ಲಿಯವರೆಗೆ ಯಾವುದೇ ಪರಿಹಾರ ಪ್ಯಾಕೇಜ್‌ ನಿರ್ವಸಿತರಿಗೆ ದೊರೆತಿರಲಿಲ್ಲ. ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಸಿತರಿಗೆ ಸೂಕ್ತ ಪರಿಹಾರ ಸಿಗುವ ಬಗ್ಗೆ ಕಾಯುತ್ತಿದ್ದರೂ, ಸರಕಾರ ಮಾತ್ರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿರಲಿಲ್ಲ. ಹೀಗಾಗಿ ನಿರ್ವಸಿತರು ಯಾವುದೇ ಸೌಕರ್ಯ ಪಡೆಯದೆ ಗೃಹಮಂಡಳಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಸೂಕ್ತ ಕ್ರಮ
ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ ಅವರು ಮಾತನಾಡಿ, ಕೆಲ ದಿನಗಳ ಹಿಂದೆ ಪಚ್ಚನಾಡಿಗೆ ಭೇಟಿ ನೀಡಿದ್ದ ಸರಕಾರದ ಉನ್ನತ ಮಟ್ಟದ ತಜ್ಞರ ತಂಡ ಇತರ ತಜ್ಞ ಅಧ್ಯಯನ ಸಮಿತಿಗಳ ವರದಿಯನ್ನೂ ಪರಿಶೀಲಿಸಿ ಸೂಕ್ತ ವರದಿಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಿದೆ.

ಒಂದೆರಡು ದಿನದಲ್ಲಿ ಇದಕ್ಕೆ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಇದರಂತೆ ಜಿಲ್ಲಾಧಿಕಾರಿಗಳು ನೀಡುವ ಸೂಕ್ತ ಮಾರ್ಗದರ್ಶನದಂತೆ ನಾವು ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ಬಯೋ ಮೈನಿಂಗ್‌ ಸೂಕ್ತ
ಕಸದ ರಾಶಿಯಡಿ ಮರಗಳು ಕೂಡ ಧರಶಾಯಿಯಾಗಿರುವುದರಿಂದ ಇಲ್ಲಿ ತ್ಯಾಜ್ಯ ತೆರವಿಗೆ ಕಸವನ್ನು ಸಂಗ್ರಹಿಸಿ, ಅದರಿಂದ ಕಲ್ಲು ಮಣ್ಣನ್ನು ಬೇರ್ಪಡಿಸಿ, ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬೇರ್ಪಡಿಸುವ ಬಯೋ ಮೈನಿಂಗ್‌ ಪ್ರಕ್ರಿಯೆ ಸೂಕ್ತವೆನಿಸುತ್ತಿದೆ.

Advertisement

ಮಂದಾರಕ್ಕೆ ಜರಿದಿರುವ ಕಸದ ತ್ಯಾಜ್ಯದ ಪ್ರಮಾಣವನ್ನು ಅಂದಾಜಿಸುವ ಕಾರ್ಯ ನಡೆಯುತ್ತಿದೆ. ಡ್ರೋನ್‌ ಸರ್ವೆ ನಡೆಸಲಾಗಿದೆ. ಅಲ್ಲಿ ಮರಗಳಿವೆ. ಹಾಗಾಗಿ ಇಲ್ಲಿ ಕೇವಲ ಜೇಸಿಬಿಯನ್ನು ಉಪಯೋಗಿಸುವುದು ಕಷ್ಟಸಾಧ್ಯ. ಕಟ್ಟರ್‌ಗಳ ಅಗತ್ಯವಿದೆ. ಜತೆಗೆ 19 ಕುಟುಂಬಗಳು ಅಲ್ಲಿ ಮತ್ತೆ ನೆಲೆಸಲು ಹಿಂದೇಟು ಹಾಕಿದ್ದಾರೆ. ಹಾಗಾಗಿ ಅವರಿಗೆ ಪರ್ಯಾಯ ಶಾಶ್ವತ ವ್ಯವಸ್ಥೆ ಮಾಡಬೇಕಾಗಿದೆ.

ಬಯೋ ಮೈನಿಂಗ್‌ ಮಾಡುವುದದರೆ ಮತ್ತೆ ಆ ಪ್ರದೇಶವನ್ನು ಬಫ‌ರ್‌ ಝೋನ್‌ ಆಗಿ ಪರಿವರ್ತಿಸಿದರೆ, ಅಲ್ಲಿ ಮತ್ತೆ ತ್ಯಾಜ್ಯ ಹಾಕುವ ಪ್ರಮೇಯ ಬರುವುದಿಲ್ಲ. ಮಂದಾರದಲ್ಲಿ ಹರಿದಿರುವ ತ್ಯಾಜ್ಯವನ್ನು ಈಗ ಬಯೋ ಮೈನಿಂಗ್‌ ಪ್ರಕ್ರಿಯೆ ಮೂಲಕ ತೆರವುಗೊಳಿಸುವಾಗ ಶೇ. 70ರಷ್ಟು ಕಲ್ಲು ಮಣ್ಣೇ ಬರಲಿದೆ. ಅದನ್ನು ಸಂಗ್ರಹಿಸಲು ಜಾಗದ ಅಗತ್ಯವಿದೆ. ಮಾತ್ರವಲ್ಲದೆ ಈ ತೆರವುಗೊಳಿಸಿದ ತ್ಯಾಜ್ಯವನ್ನು ಕಾರ್ಖಾನೆಗೆ ಸಾಗಿಸಲು ದುಬಾರಿ ವೆಚ್ಚವಾಗಲಿದೆ ಎನ್ನುತ್ತಾರೆ.

ಲ್ಯಾಂಡ್‌ ಫಿಲ್ಲಿಂಗ್‌
ಪರಿಸರ ಅಭಿಯಂತರ ಮಧು ಅವರು ಹೇಳುವಂತೆ, ಮಂದಾರದ ತ್ಯಾಜ್ಯರಾಶಿಯನ್ನು ಬೇಲಿಂಗ್‌ ಯುನಿಟ್‌ ಸಹಾಯದಿಂದ ತಲಾ ಒಂದೊಂದು ಟನ್‌ ಗಾತ್ರದ ಬಾಕ್ಸ್‌ ಮಾದರಿಯಲ್ಲಿ ಸಂಗ್ರಹಿಸಿ ಅದನ್ನು ಕಂಪ್ರಸ್‌ ಯಂತ್ರದ ಮೂಲಕ ಪುಡಿ ಮಾಡಿ ಮತ್ತೆ ಡಂಪಿಂಗ್‌ ಯಾರ್ಡ್‌ ಗೆ ಕೇಬಲ್‌ ಮಾದರಿಯಲ್ಲಿ ಎಳೆದು ತರುವ ಪ್ರಯೋಗದ ಬಗ್ಗೆ ಕೊಯಮುತ್ತೂರಿನ ಸುಧೀರ್‌ ಜೈಸ್ವಾಲ್‌ ನೇತೃತ್ವದ ಅಧ್ಯಯನ ತಂಡ ವರದಿ ಸಲ್ಲಿಸಿತ್ತು. ಇದರ ಜತೆಯಲ್ಲೇ ಈ ಹಿಂದಿನಂತೆಯೇ ಪಚ್ಚನಾಡಿ ತ್ಯಾಜ್ಯ ರಾಶಿಯಲ್ಲಿ ಅನುಸರಿಸಲಾಗುತ್ತಿದ್ದ ಲ್ಯಾಂಡ್‌ ಫಿಲ್ಲಿಂಗ್‌ ಮಾಡುವ ಬಗ್ಗೆಯೂ ಇನ್ನೊಂದು ತಂಡ ವರದಿ ನೀಡಿತ್ತು. ಆದರೆ ಇದರಿಂದ ಆ ಪ್ರದೇಶ ಮತ್ತಷ್ಟು ಬೆಟ್ಟದ ರೀತಿಯಾಗುವುದಲ್ಲದೆ, ಆ ಭೂಮಿ ಕೂಡ ಮರು ಬಳಕೆಗೆ ಅಸಾಧ್ಯವಾಗಲಿದೆ. ಹಾಗಾಗಿ ಈಗ ಹರಡಿರುವ ತ್ಯಾಜ್ಯವನ್ನು ತೆರವು ಮಾಡಬೇಕಿದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next