“ಬ್ಲೂ ವೇಲ್ ಗೇಮ್’ ಕುರಿತಂತೆ ಮಕ್ಕಳ ಮನಸ್ಸಿನ ಮೇಲೆ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಎಂಬ ಅಂಶಗಳೊಂದಿಗೆ ಹೀಗೊಂದು ಚಿತ್ರ ಮೂಡಿಬಂದಿದೆ. ಅದಕ್ಕೆ ಇಟ್ಟ ಹೆಸರು “ಮನಸ್ಸಿನಾಟ’. “ನೀಲಿ ತಿಮಿಂಗಿಲ’ ಎಂಬ ಅಡಿಬರಹವೂ ಇದೆ. ಈ ಚಿತ್ರವನ್ನು ಆರ್.ರವೀಂದ್ರ ನಿರ್ದೇಶನ ಮಾಡಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ “ಮನಸ್ಸಿನಾಟ’ ಬಗ್ಗೆ ಹೇಳಲೆಂದೇ ಚಿತ್ರತಂಡದೊಂದಿಗೆ ಆಗಮಿಸಿದ್ದರು ನಿರ್ದೇಶಕ ರವೀಂದ್ರ.
“ಈ ಚಿತ್ರದಲ್ಲಿರುವುದು ಹೊಸ ಕಥೆ ಅಲ್ಲ. ಎಲ್ಲರಿಗೂ ತಿಳಿದಿರುವಂಥದ್ದು. ಶೇ.90 ರಷ್ಟು ವಿದ್ಯಾರ್ಥಿಗಳು ಈ ಬ್ಲೂ ವೇಲ್ ಗೇಮ್ ಆಡುತ್ತಿದ್ದಾರೆ ಎಂಬ ಬಗ್ಗೆ ಸಂಶೋಧನೆಯಿಂದ ತಿಳಿದುಕೊಂಡು ಇದರ ಮೇಲೊಂದು ಚಿತ್ರ ಮಾಡಿ, ಮುಗ್ಧ ವಿದ್ಯಾರ್ಥಿಗಳಿಗೂ ಮತ್ತು ಪೋಷಕರಿಗೊಂದು ಸಂದೇಶ ಕೊಡಬೇಕೆಂಬ ನಿಟ್ಟಿನಲ್ಲಿ ಚಿತ್ರ ಮಾಡಲಾಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ. ಕೊಟ್ಟರೆ, ಅವರ ಮನಸ್ಸು ಹೇಗೆಲ್ಲಾ ಪರಿವರ್ತನೆಯಾಗುತ್ತೆ. ಕೆಲವೊಂದು ಆಟಗಳಿಂದ ಅವರು ಹೇಗೆ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬ ಅಂಶಗಳಿವೆ. ಟೀನೇಜ್ ಮನಸ್ಸಿನವರಿಗೆ ಮೊಬೈಲ್ ಎಷ್ಟು ಅಪಾಯಕಾರಿ ಎಂಬುದು ಚಿತ್ರದ ಮುಖ್ಯ ಉದ್ದೇಶ’ ಅಂದರು ರವೀಂದ್ರ.
ಮಾ.ಹರ್ಷಿತ್ ಇಲ್ಲಿ ಪ್ರಮುಖ ಆಕರ್ಷಣೆ. 9 ನೇ ತರಗತಿ ಓದುತ್ತಿರುವ ಹರ್ಷಿತ್, “ಇದೊಂದು ಜಾಗೃತಿ ಮೂಡಿಸುವ ಚಿತ್ರ. ಮೊಬೈಲ್‌ಗೆ ಜೋತು ಬಿದ್ದಿರುವ ಹುಡುಗರು ಈ ಚಿತ್ರ ನೋಡಬೇಕು. ಇದರಿಂದ ಸಾಕಷ್ಟು ಸಂದೇಶವಿದೆ’ ಎಂದರು. ಪ್ರೀತಿಕಾ ಕೂಡ ಇಲ್ಲಿ ಅರ್ಪಿತಾ ಎಂಬ ಪಾತ್ರ ಮಾಡಿದ್ದು, ಅವರಿಲ್ಲಿ ಡ್ರಗ್ಸ್ ಸೇವಿಸುವ ಹುಡುಗಿಯಾಗಿ ಕಾಣಸಿಕೊಂಡಿದ್ದಾರಂತೆ. ದತ್ತಣ್ಣ ಇಲ್ಲಿ ತಾತನ ಪಾತ್ರ ಮಾಡಿದ್ದಾರಂತೆ. ಅವರಿಗೆ ಈ ಬ್ಲೂ ವೇಲ್ ಗೇಮ್ ಬಗ್ಗೆ ಗೊತ್ತಿಲ್ಲವಂತೆ. ಅಷ್ಟಕ್ಕೂ ಅವರು ಈಗಲೂ ಸರಿಯಾಗಿ ಮೊಬೈಲ್ ಬಳಸುವುದಿಲ್ಲವಂತೆ. ಒಂದು ದಿನದ ಪಾತ್ರ ಅಂದರು. ಹೋದೆ, ಒಂದು ದಿನದಲ್ಲಿ ನಾಲ್ಕು ಲೊಕೇಷನ್‌ಗೆ ಹೋಗಿ 8 ಸೀನ್ ಚಿತ್ರೀಕರಿಸಿದರು. 14 ವರ್ಷದ ಒಳಗಿರುವ ಮಕ್ಕಳು ಮೊಬೈಲ್ ಹಿಡಿದರೆ, ಆಗುವ ದುಷ್ಪರಿಣಾಮಗಳ ಕುರಿತಾದ ಚಿತ್ರವಿದು. ಪೋಷಕರು ಸಹ ಚಿತ್ರ ನೋಡಬೇಕು. ಸರ್ಕಾರ ಇಂತಹ ಚಿತ್ರವನ್ನು ಎಲ್ಲಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವೀಕ್ಷಿಸುವಂತೆ ಮಾಡಬೇಕು’ ಎಂದರು ದತ್ತಣ್ಣ.
ಇದಕ್ಕೂ ಮುನ್ನ ಚಿತ್ರದ ಟ್ರೇಲರ್ ಮತ್ತು ಹಾಡು ತೋರಿಸಲಾಯಿತು. ಉಮೇಶ್ ಬಣಕಾರ್ ಹಾಗು ಭಾ.ಮ.ಗಿರೀಶ್ ಟ್ರೇಲರ್, ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ನಿರ್ಮಾಪಕದ್ವಯರಾದ ಮಂಜುನಾಥ್ ಮತ್ತು ಹನುಮೇಶ್ ಪಾಟೀಲ್‌ಗೆ ಇದು ಮೊದಲ ಅನುಭವ. ಸಚಿನ್, ಹನುಮೇಶ್ ಸಂಗೀತವಿದೆ. ಮಂಜುನಾಥ್ ಬಿ.ನಾಯ್ಕ ಛಾಯಾಗ್ರಹಣವಿದೆ. ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಯಮುನಾ ಶ್ರೀನಿಧಿ, ರಾಮಸ್ವಾಮಿ, ಚಂದನ್, ಮಂಜುನಾಥ್ ಹೆಗಡೆ ಇದ್ದಾರೆ.