Advertisement

ಮನಪಾ-ಎಡಿಬಿ ನೆರವಿನ ಒಳಚರಂಡಿ ಯೋಜನೆ

01:08 PM Feb 16, 2018 | |

ಮಹಾನಗರ : ಎಡಿಬಿ (ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌) ನೆರವಿನ ಜಲಸಿರಿ ಮತ್ತು ಅಮೃತ್‌ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುವ ಒಳಚರಂಡಿ ಕಾಮಗಾರಿಗಳ ಕುರಿತಂತೆ ಸಾರ್ವಜನಿಕ ಸಮಾಲೋಚನ ಸಭೆ ಗುರುವಾರ ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ನಡೆಯಿತು. ಎಡಿಬಿ ಪ್ರಥಮ ಹಂತದ ಯೋಜನೆಯಲ್ಲಿಯೇ ಕಳಪೆ ಕಾಮಗಾರಿಗಳು ಆಗಿವೆ ಎಂಬ ಕುರಿತಂತೆ ಸಾರ್ವಜನಿಕರಿಂದ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.

Advertisement

ಅಧಿಕಾರಿ ಜಯ ಪ್ರಕಾಶ್‌ ಮಾತನಾಡಿ, ಕೆಯುಐಡಿಎಫ್ಸಿ (ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ)ದ ವತಿಯಿಂದ ದ್ವಿತೀಯ ಹಂತದ ಎಡಿಬಿ ಯೋಜನೆಯಡಿ 218.50 ಕೋ.ರೂ. ನೀರು ಸರಬರಾಜು, 195 ಕೋ. ರೂ. ಗಳ ಒಳಚರಂಡಿ ಕಾಮಗಾರಿ ಪ್ರಸ್ತಾವಿಸಲಾಗಿದೆ. ಅದರಡಿ ಪ್ರಥಮ ಹಂತದಲ್ಲಿ 93 ಕೋ.ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. 

ಇದರಲ್ಲಿ ಪ್ರಥಮವಾಗಿ 76.15 ಕೋ. ರೂ ವೆಚ್ಚದಲ್ಲಿ ನಗರದಲ್ಲಿನ ಹಳೆಯದಾದ ಒಳಚರಂಡಿ ಪಂಪಿಂಗ್‌ ಮೇನ್‌ ಪುನರ್‌ ನಿರ್ಮಾಣ ನಡೆಯಲಿದೆ. ಅದರಂತೆ ನಗರದ 11.40 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿಯ ಹಳೆಯ ಏರು ಕೊಳವೆ ಮಾರ್ಗವನ್ನು ಮುಂದಿನ 30 ವರ್ಷಗಳಿಗೆ ಅನುಗುಣವಾಗುವಂತೆ ಹೊಸ ಕೊಳವೆಗಳಿಗೆ ಬದಲಾವಣೆ, ಇತರ ಸಂಬಂಧಿತ ಕಾಮಗಾರಿ ನಡೆಯಲಿವೆ ಎಂದರು. 

ಕೊಳವೆ ಮಾರ್ಗ ಸುಧಾರಣೆ
ಎಡಿಬಿ ಪ್ರಥಮ ಹಂತದ ಯೋಜನೆಯಡಿ 1970ರಲ್ಲಿ ಅಂದಿನ ಜನಸಂಖ್ಯೆಗೆ ಅನಗುಣವಾಗಿ ರೂಪಿಸಲಾದ ಮೂಲ
ಯೋಜನೆಯ ಪ್ರಕಾರ ಮನಪಾ ವ್ಯಾಪ್ತಿಯ 250 ಕಿ.ಮೀ. ವ್ಯಾಪ್ತಿಯಲ್ಲಿ ಕೊಳವೆ ಮಾರ್ಗವನ್ನು ಅಳವಡಿಸಲಾಗಿದೆ.
ಇದರಲ್ಲಿ ಭೂಗತ ಒಳಚರಂಡಿ ಸಿಐ ಮುಖ್ಯ ಕೊಳವೆಗಳು ಸುಮಾರು 50 ವರ್ಷಗಳ ಹಿಂದೆ ಅಳವಡಿಸಲಾಗಿರುವುದರಿಂದ ಕೆಲವು ಕಡೆ ಜಖಂಗೊಂಡಿದ್ದು, ಸೋರಿಕೆಯಾಗುತ್ತಿದೆ.

ಒಳಚರಂಡಿ ತ್ಯಾಜ್ಯ ಸಾಗಿಸಲು ಅಸಮರ್ಥವಾಗಿ ಶುದ್ಧ ನೀರು ಸಮುದ್ರ ಸೇರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯ ವೆಟ್‌ ವೆಲ್‌ಗ‌ಳಾದ ಕುದ್ರೋಳಿ, ಪಾಂಡೇಶ್ವರ, ಕಂಡತ್‌ಪಳ್ಳಿ, ಮುಳಿಹಿತ್ಲು ಮತ್ತು ಜಪ್ಪು ಬಪ್ಪಾಲ್‌ನಿಂದ ಸೂಕ್ತ ವಿನ್ಯಾಸದ ಏರು ಕೊಳವೆ ಮಾರ್ಗವನ್ನು ಇದೀಗ ನೂತನ ಯೋಜನೆಯಡಿ ಅಳವಡಿಸಲಾಗುವುದು ಎಂದು ಅಧಿಕಾರಿ ಜಯಪ್ರಕಾಶ್‌ ವಿವರಿಸಿದರು.

Advertisement

ಸಾರ್ವಜನಿಕರ ಪರವಾಗಿ ಮಾತನಾಡಿದ ಹನುಮಂತ ಕಾಮತ್‌, ಕಾಮಗಾರಿಗಳು ಯಾವ ರೀತಿಯಲ್ಲಿ ನಡೆಯಬೇಕೆಂಬುದರ ಬಗ್ಗೆ ಪಟ್ಟಿ ತಯಾರಿಸಿದವರು ಯಾರು ಹಾಗೂ ಹೇಗೆ ಎಂದು ಪ್ರಶ್ನಿಸಿದರು. ಮನಪಾ ಹಾಗೂ ಕುಡ್ಸೆಂಪ್‌ ಅಧಿಕಾರಿಗಳು ಜಂಟಿಯಾಗಿ ಈ ಕುರಿತು ಚರ್ಚಿಸಿ ವಿಸ್ತೃತ ಯೋಜನ ವರದಿ ಸಿದ್ಧಪಡಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು. 

ಆದರೆ ನಗರದ ಬಹುಮುಖ್ಯವಾದ ಎಂಪಾಯರ್‌ ಮಾಲ್‌ ರಸ್ತೆಯಿಂದ ಕುದ್ರೋಳಿ ವೆಟ್‌ವೆಲ್‌ಗೆ ಒಳಚರಂಡಿಯನ್ನು ಸಂಪರ್ಕಿಸುವ ಕಾಮಗಾರಿಯನ್ನು ಇದರಲ್ಲಿ ಒಳಪಡಿಸಿಲ್ಲ. ಈ ರೀತಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಎಡಿಬಿ ಪ್ರಥಮ ಹಂತದ 308 ಕೋ.ರೂ. ನಾವು ಅರಬ್ಬಿ ಸಮುದ್ರಕ್ಕೆ ಸುರಿದಂತಾಗಿದೆ. ಇದೀಗ ಮತ್ತೆ ಅದೇ ರೀತಿಯ ಕಾಮಗಾರಿ ನಡೆಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು. ದ್ವಿತೀಯ ಎಡಿಬಿ ಕಾಮಗಾರಿಯ ಪ್ರಥಮ ಹಂತಕ್ಕೆ ಟೆಂಡರ್‌ ಆಗಿದ್ದು, ಮುಂದಿನ ಕಾಮಗಾರಿಯಲ್ಲಿ ಈ ಕಾಮಗಾರಿ ಒಳಗೊಳ್ಳಲಿದೆ. ಮಳೆಗಾಲ ಮುಗಿದ ಬಳಿಕ ಆ ಬಗ್ಗೆ ಡಿಪಿಆರ್‌ ಸಿದ್ಧಗೊಳ್ಳಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಎಡಿಬಿ ಸಾಲದ ಮರುಪಾವತಿ ಮತ್ತು ಎಷ್ಟು ಸಮಯ ಮರಪಾವತಿಯ ಅವಧಿ? ಎಂಬ ಬಗ್ಗೆ ರಾಘವ್‌ ಅವರು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಕುಡ್ಸೆಂಪ್‌ ಅನುಷ್ಠಾನ ಅಧಿಕಾರಿ ಪ್ರಭಾಕರ ಶರ್ಮಾ, ಮನಪಾದ ಶೇ.10, ಸರಕಾರದಿಂದ ಶೇ. 50 ಹಾಗೂ ಎಡಿಬಿಯಿಂದ ಶೇ. 40ರ ಅನುಪಾತದ ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದೆ. ಸಾಲ ಮರುಪಾವತಿ 2012ರಿಂದ 20 ವರ್ಷಗಳ ಅವಧಿ ಎಂದು ಹೇಳಿದರು.

2ನೇ ಹಂತ: ಮರು ಪರಿಶೀಲಿಸಲು ಆಗ್ರಹ
ಎಡಿಬಿ ಪ್ರಥಮ ಹಂತದ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿರುವುದಾಗಿ ಈಗಾಗಲೇ ಸಚಿವರೇ ಒಪ್ಪಿಕೊಂಡು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಇದೀಗ ಸೀವೇಜ್‌ ಪಂಪಿಂಗ್‌ಮೇನ್‌ ದುರಸ್ತಿ ಮತ್ತು ಬದಲಾವಣೆ ಯೋಜನೆಯ ಮೂಲ 60
ಕೋಟಿ ರೂ.ಗಳಿಂದ 99 ಕೋಟಿ ರೂ. ಗಳಿಗೆ ಏರಿಕೆಯಾಗಿದೆ. ಆದ್ದರಿಂದ ಗುತ್ತಿಗೆ ಟೆಂಡರ್‌ ಪರಿಶೀಲನೆ ಮಾಡಬೇಕು ಎಂದು ಮುನೀರ್‌ ಕಾಟಿಪಳ್ಳ ಆಗ್ರಹಿಸಿದರು. ಅಧಿಕಾರಿ ಪ್ರಭಾಕರ ಶರ್ಮಾ ಮಾತನಾಡಿ, ಯೋಜನೆಗೆ ಸಂಬಂಧಿಸಿ 2015-16ರಲ್ಲಿ ಡಿಪಿಆರ್‌ ಸಿದ್ಧವಾಗಿತ್ತು.

2017ರಲ್ಲಿ ಟೆಂಡರ್‌ ಅಂತಿಮಗೊಂಡಿತ್ತು. ಇದೀಗ ನಿಗದಿತ ದರ (ಎಸ್‌.ಆರ್‌.ದರ) ಹೆಚ್ಚಳವಾಗಿರುವುದರಿಂದ ಯೋಜನೆ ವೆಚ್ಚದಲ್ಲೂ ಏರಿಕೆಯಾಗಿದೆ ಎಂದರು. ಪ್ರಮುಖರಾದ ಶಶಿಧರ ಶೆಟ್ಟಿ, ಡಾ| ನಂಬಿಯಾರ್‌, ಮ್ಯಾಕ್ಸಿಂ ಡಿಸಿಲ್ವಾ, ಬಿ.ಕೆ. ಇಮ್ತಿಯಾಝ್, ಅಶ್ವಿ‌ನ್‌ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.

ಉಪ ಮೇಯರ್‌ ರಜನೀಶ್‌ ಕಾಪಿಕಾಡ್‌, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ವಿಪಕ್ಷ ನಾಯಕ ಗಣೇಶ್‌ ಹೊಸಬೆಟ್ಟು, ಜಂಟಿ ಆಯುಕ್ತ ಗೋಕುಲ್‌ದಾಸ್‌ ನಾಯಕ್‌ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತಿನ ಸಮರ; ಗದ್ದಲ
ನಗರದಲ್ಲಿ ಕೆಯುಐಡಿಎಫ್ಸಿ ಕೈಗೆತ್ತಿಕೊಂಡಿರುವ ಕಾಮಗಾರಿಯ ಗುತ್ತಿಗೆ ನೀಡುವಿಕೆಯಲ್ಲಿ ಅವ್ಯವಹಾರವಾಗಿದ್ದು, ಇದರಲ್ಲಿ ಸ್ಥಳೀಯ ಶಾಸಕರು ಶಾಮೀಲಾಗಿದ್ದಾರೆಂದು ಪ್ರಮುಖರಾದ ಮುನೀರ್‌ ಕಾಟಿಪಳ್ಳ ಅವರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಸಭೆಯಲ್ಲಿ ಉಲ್ಲೇಖೀಸಿ ಮಾತನಾಡಿದ ಶಾಸಕ ಮೊದಿನ್‌ ಬಾವಾ, ಆದರೆ ಗುತ್ತಿಗೆದಾರರು ಯಾರು ಎಂಬುದೇ ನನಗೆ ತಿಳಿದಿಲ್ಲ. ಈ ಆರೋಪದ ಬಗ್ಗೆ ಮುಖ್ಯಮಂತ್ರಿಯನ್ನು ಸಂಪರ್ಕಿಸಿ ಅವ್ಯವಹಾರ ಮಾಡಿರುವವರ ಬಗ್ಗೆ ತನಿಖೆಗೆ ನಾನೇ ಖುದ್ದಾಗಿ ಒತ್ತಾಯಿಸಲಿದ್ದೇನೆ. ಈ ಆರೋಪದಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಎಡಿಬಿ ಅವ್ಯವಹಾರದ ತನಿಖೆಗೆ ನಾನು ಸಿದ್ಧ’ ಎಂದು ಅವರು ಹೇಳಿದರು.

 ಸಭೆಯಲ್ಲಿ ಉಪಸ್ಥಿತರಿದ್ದ ಮುನೀರ್‌ ಕಾಟಿಪಳ್ಳ ಪ್ರತಿಕ್ರಿಯಿಸಲು ಮುಂದಾದಾಗ, ಇದು ಸಾರ್ವಜನಿಕ ಸಭೆ. ಇಲ್ಲಿ ಒಬ್ಬರಿಗೊಬ್ಬರು ಆರೋಪ- ಪ್ರತ್ಯಾರೋಪ ಮಾಡುವುದು ಬೇಡ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು. ‘ಹಾಗಾದರೆ ಶಾಸಕರಿಗೆ ಈ ಬಗ್ಗೆ ಮಾತನಾಡಲು ಅವಕಾಶ ನೀಡಿದ್ದೇಕೆ?’ ಎಂದು ಮನಪಾ ವಿಪಕ್ಷ ನಾಯಕ ಗಣೇಶ್‌ ಹೊಸಬೆಟ್ಟು ಪ್ರಶ್ನಿಸಿದರು. ಇದರಿಂದಾಗಿ ಸಭೆಯಲ್ಲಿ ಮನಪಾ ಸದಸ್ಯರು, ಸಾರ್ವಜನಿಕರ ನಡುವೆ ವಾಗ್ವಾದ ಆರಂಭವಾಗಿ ಕೆಲವು ಹೊತ್ತು ಗೊಂದಲದ ವಾತವರಣ ಸೃಷ್ಟಿಯಾಯಿತು. 

ಸಾರ್ವಜನಿಕರ ಆಕ್ಷೇಪ
ಮನಪಾ ಬಿಜೆಪಿ ಸದಸ್ಯ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ಕೆಯುಐಡಿಎಫ್ಸಿ ಹಗರಣದಲ್ಲಿ ನೀವೂ ಭಾಗಿಯಾಗಿದ್ದೀರಿ ಎಂದು ಶಾಸಕರನ್ನುದ್ದೇಶಿಸಿ ಆರೋಪಿಸಿದರು. ಇದರಿಂದ ಪಾಲಿಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ಮಧ್ಯೆಯೇ ಮಾತಿನ ಸಮರ ಏರ್ಪಟ್ಟಿತು. ಗದ್ದಲ ಮಿತಿಮೀರಿದಾಗ, ಸಭೆಯಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರು ಮಾತನಾಡಿ, ‘ಸಾರ್ವಜನಿಕರ ಸಲಹೆ ಪಡೆಯಲು ಕರೆದು ಈ ರೀತಿ ಗಲಾಟೆ ಮಾಡುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು. ಮುನೀರ್‌ ಕಾಟಿಪಳ್ಳ ಮತ್ತೆ ಪ್ರತಿಕ್ರಿಯಿಸಲು ಮುಂದಾದಾಗ, ಮಧ್ಯ ಪ್ರವೇಶಿಸಿದ ಮೇಯರ್‌ ಕವಿತಾ ಸನಿಲ್‌ ‘ಈ ಬಗ್ಗೆ ಏನಿದ್ದರೂ ಹೊರಗಡೆ ಮಾತನಾಡಿ, ಇಲ್ಲಿ ಮಾತನಾಡುವುದು ಬೇಡ’ ಎಂದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next