ಹುಬ್ಬಳ್ಳಿ: ಅಣ್ಣಿಗೇರಿ ತಾಲೂಕು ಮಣಕವಾಡ-ಹಿರೇವಡ್ಡಟ್ಟಿಯ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರ ಮಹಾಮಠದ ಶ್ರೀ ಸಿದ್ಧರಾಮ ದೇವರ ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಬಸವ ಪುರಾಣ ಪ್ರಾರಂಭೋತ್ಸವ ಜ.18ರಂದು ಸಂಜೆ 6:00ಗಂಟೆಗೆ ನಡೆಯಲಿದ್ದು, ಫೆ.15ರ ವರೆಗೆ ಪುರಾಣ ನಡೆಯಲಿದೆ ಎಂದು ಅಕ್ಕಿಆಲೂರಿನ ಮುತ್ತಿನಕಂತಿ ಗುರುಪೀಠದ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.
ಬುಧವಾರ ಮಣಕವಾಡದ ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪುರಾಣ ಪ್ರಾರಂಭೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಶಿರಹಟ್ಟಿಯ ಫಕೀರ ಸಿದ್ಧರಾಮ ಸ್ವಾಮೀಜಿ, ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವಯೋಗಮಂದಿರದ ಡಾ| ಅಭಿನವ ಅನ್ನದಾನ ಸ್ವಾಮೀಜಿ, ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ನಾಡಿನ ವಿವಿಧ ಮಠಾಧೀಶರು ವಹಿಸಲಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ, ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ. ಬಡ್ನಿ ಮೊದಲಾದವರು ಆಗಮಿಸಲಿದ್ದಾರೆ ಎಂದರು.
ಜ.18ರಂದು ಮಧ್ಯಾಹ್ನ 2:00ಗಂಟೆಗೆ ಬಸವ ಪುರಾಣ ಗ್ರಂಥ ಹಾಗೂ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಮೂರ್ತಿ ಮೆರವಣಿಗೆಯೊಂದಿಗೆ ಬೃಹತ್ ಬೈಕ್‌ರ್ಯಾಲಿ ತಾಲೂಕಿನ ಕಿರೇಸೂರ ಗ್ರಾಮದಿಂದ ಆರಂಭವಾಗಿ ಯಮನೂರ, ನವಲಗುಂದ, ಅಣ್ಣಿಗೇರಿ, ನಲವಡಿ ಮಾರ್ಗವಾಗಿ ಸಂಜೆ 6:00ಗಂಟೆಗೆ ಮಣಕವಾಡ ಗ್ರಾಮಕ್ಕೆ ಆಗಮಿಸಲಿದೆ. ಇದೇ ಸಂದರ್ಭದಲ್ಲಿ ಶ್ರೀಮಠದ ಮಹಾದ್ವಾರ ಉದ್ಘಾಟನೆ ನಡೆಯಲಿದೆ. ಬೈಕ್ ರ್ಯಾಲಿಯಲ್ಲಿ ಅಂದಾಜು 1 ಸಾವಿರ ದ್ವಿಚಕ್ರ ವಾಹನ ಸವಾರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 20-30 ಗ್ರಾಮಗಳ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಮಹೋತ್ಸವ ಅಂಗವಾಗಿ ಜ.19ರಿಂದ ಪ್ರತಿದಿನ ಎರಡು ಗ್ರಾಮಗಳಿಂದ ಬಸವ ಭೋಜನ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಗ್ರಾಮಸ್ಥರೆಲ್ಲ ಸೇರಿ ಸಾಮೂಹಿಕವಾಗಿ ಭೋಜನ ಮಾಡಲಿದ್ದಾರೆ.
ಫೆ.2ರಂದು ಮಹಿಳೆಯರಿಗಾಗಿ ಆರೋಗ್ಯ ತಪಾಸಣೆ ಶಿಬಿರ, ನಂತರ ಪುರುಷರಿಗಾಗಿ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಫೆ.16ರಂದು ರಾತ್ರಿ 8:00ಗಂಟೆಗೆ ಭಾವೈಕ್ಯತಾ ಧರ್ಮ ಸಮಾರಂಭ, ರೈತ ಸಮಾವೇಶ, ಕೃಷಿ ಪರಿಕರ, ಉತ್ಪನ್ನ ಪ್ರದರ್ಶನ, ಮಹಿಳಾ ಸಮಾವೇಶ ನಡೆಯಲಿದೆ. 17ರಂದು ಯುವ ಸಮಾವೇಶ ನಡೆಯಲಿದೆ. 1 ಸಾವಿರ ಜನರಿಂದ ರಕ್ತದಾನ ಶಿಬಿರ ನಡೆಯಲಿದೆ ಎಂದರು.
ದೇವಮಂದಿರದ ಮಹಾಮಠದ ಸಿದ್ಧರಾಮ ದೇವರು, ಬೊಮ್ಮನಹಳ್ಳಿಯ ಚನ್ನವೀರೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರಮಠದ ಬಸವಣ್ಣಜ್ಜನವರು, ತುಪ್ಪದ ಕುರಹಟ್ಟಿಯ ಭೂಸನೂರ ಸಂಸ್ಥಾನಮಠದ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗ ಶಾಸ್ತ್ರಿಗಳು, ಎ.ಸಿ. ಅಣ್ಣಿಗೇರಿ, ಶೇಖರ ಕುಂದಗೋಳ, ಬಿ.ಸಿ. ಭರಮಗೌಡ್ರ, ಗಿರೀಶ ನಲವಡಿ, ಪಾಂಡು ಹುಲಕೋಟಿ, ಯಶವಂತ ನಲವಡಿ, ಈಶ್ವರಗೌಡ್ರ ಪಾಟೀಲ, ಐ.ಕೆ. ಕಮ್ಮಾರ ಮೊದಲಾದವರಿದ್ದರು.
.