Advertisement

ಪ್ರಾಣಿ ಸಂಕುಲ ಸಂರಕ್ಷಣೆ ಎಲ್ಲರ ಹೊಣೆ

06:49 PM Mar 06, 2021 | Team Udayavani |

ಚಿತ್ರದುರ್ಗ: ಪ್ರಾಣಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟುವುದು, ಪ್ರಾಣಿ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಪ್ರೇಮಾವತಿ ಮನಗೂಳಿ ತಿಳಿಸಿದರು.

Advertisement

ಕ್ರೀಡಾಭವನದಲ್ಲಿ ಶುಕ್ರವಾರ ಪಶುಪಾಲನಾ ಇಲಾಖೆ, ಜಿಲ್ಲಾ ಪ್ರಾಣಿ ದಯಾ ಸಂಘ, ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರದಿಂದ ಆಯೋಜಿಸಿದ್ದ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ-2020 ಹಾಗೂ ಪ್ರಾಣಿ ದೌರ್ಜನ್ಯ  ತಡೆಗಟ್ಟುವಿಕೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಕಾನೂನುಗಳಲ್ಲಿ ಅನೇಕ ದೌರ್ಜನ್ಯಗಳನ್ನು ತಡೆಗಟ್ಟುವ ಕಾಯ್ದೆಗಳು ಬಂದಿವೆ. ಮಹಿಳಾ ದೌರ್ಜನ್ಯ ಕಾಯ್ದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆಗಳು ಮನುಷ್ಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆದು, ಹಕ್ಕುಗಳ ರಕ್ಷಣೆಗೆ ಜಾರಿಯಲ್ಲಿವೆ. ಹಾಗೆಯೇ ಮೂಕ ಪ್ರಾಣಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗೆ ಸರ್ಕಾರ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ-2020 ವಿಶೇಷ ಕಾಯ್ದೆ ಜಾರಿಗೊಳಿಸಿದೆ ಎಂದರು.

ಜಿಲ್ಲಾ ಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾತನಾಡಿ, ಜಾನುವಾರುಗಳ ಮೇಲಾಗುತ್ತಿರುವ ಹಿಂಸಾತ್ಮಕ ಕೃತ್ಯ ಮತ್ತು ದೌರ್ಜನ್ಯವನ್ನು ಮನಗಂಡ ರಾಜ್ಯ ಸರ್ಕಾರ ಅವುಗಳ ಸಂರಕ್ಷಣೆಗೆ ಈ ಕಾಯ್ದೆ ಜಾರಿಗೆ ತಂದಿದೆ. ಕಾಯ್ದೆ ಬಗೆಗಿನ ಸಾಧಕ ಮತ್ತು ಬಾಧಕಗಳ ಚರ್ಚೆಯಿಂದ ಮಾರ್ಗಸೂಚಿ ರಚನೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾ ಧೀಶರಾದ ಬಿ.ಕೆ. ಗಿರೀಶ್‌ ಮಾತನಾಡಿ, ಎಲ್ಲಾ ವಯಸ್ಸಿನ ಆಕಳು, ಕರು ಮತ್ತು ಗೂಳಿ, ಎತ್ತು ಮತ್ತು 13 ವರ್ಷದೊಳಗಿನ ಎಮ್ಮೆ ಅಥವಾ ಕೋಣಗಳು ಕಾನೂನು ಪ್ರಕಾರ ಜಾನುವಾರುಗಳ ವ್ಯಾಪ್ತಿಗೆ ಬರುತ್ತವೆ ಎಂದರು. ಪ್ಯಾನಲ್‌ ವಕೀಲ ಎಚ್‌.ಬಿ.ದೇವಿಪ್ರಸಾದ್‌ ಮಾತನಾಡಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ-2020 ಕಾಯ್ದೆಗೆ ಫೆಬ್ರುವರಿ 12 2021ರಂದು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಯಾರೊಬ್ಬರೂ ಕಾನೂನಿಗೆ ವಿರುದ್ಧವಾಗಿ ಜಾನುವಾರುಗಳಾದ ಹಸು, ಕರು, ಗೂಳಿ, ಎತ್ತು ಮತ್ತು 13 ವರ್ಷದೊಳಗಿನ ಎಮ್ಮೆ ಅಥವಾ ಕೋಣಗಳ ಹತ್ಯೆ ಮತ್ತು ಮಾರಾಟ ಮಾಡುವಂತಿಲ್ಲ. ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದ ಜಾನುವಾರುಗಳ ಹತ್ಯೆಗೆ ಅವಕಾಶವಿದೆ ಎಂದು ಎಚ್ಚರಿಸಿದರು.

Advertisement

ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಜಾನುವಾರುಗಳ ಖರೀದಿ ಮತ್ತು ಮಾರಾಟಕ್ಕೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ವಯಸ್ಸಾದ ಜಾನುವಾರುಗಳ ಹತ್ಯೆ ಮತ್ತು  ಮಾರಾಟ ಕಾನೂನು ಪ್ರಕಾರ ಅಪರಾಧವಾಗಿದೆ. ಅಕ್ರಮವಾಗಿ ಜಾನುವಾರುಗಳನ್ನು ರಾಜ್ಯದೊಳಗೆ ಅಥವಾ ಬೇರೆ ರಾಜ್ಯಕ್ಕೆ ಸಾಗಾಟ ಮಾಡುವುದನ್ನು ನಿಷೇ ಸಲಾಗಿದೆ. ಜಾನುವಾರು ಸಾಗಾಣಿಕೆ ಮಾಡುವ ವೇಳೆ ಹಲವಾರು ಮಾರ್ಗಸೂಚಿ ಪಾಲಿಸಬೇಕಾಗುತ್ತದೆ ಎಂದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ|ಕೃಷ್ಣಪ್ಪ ಮಾತನಾಡಿ, ಪ್ರಾಣಿಗಳಿಲ್ಲದೇ ಮನುಷ್ಯ ಜೀವನ ಸಾಗಿಸುವುದು ಕಷ್ಟ. ಮನುಷ್ಯನಿಲ್ಲದೇ ಪ್ರಾಣಿಗಳು ಬದುಕುತ್ತವೆ. ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಯುತ್ತಿವೆ ಅವುಗಳ ಉಳುವಿಕೆಗಾಗಿ ಸರ್ಕಾರ ಈ ವಿಶೇಷ ಕಾಯ್ದೆ ಜಾರಿಗೆ ತಂದಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಈ ಕಾಯ್ದೆ ಜಾರಿಗೊಳಿಸಿರುವುದರಿಂದ ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವುಗಳ ನಿರ್ವಹಣೆಗೆ ಖಾಸಗಿ ಗೋಶಾಲೆಗಳಿಗೆ ಕಳುಹಿಸಲಾಗುತ್ತಿದೆ. ಬೀಡಾಡಿ ದನಗಳ ನಿರ್ವಹಣೆಗಾಗಿ ದಿನಕ್ಕೆ 17 ರೂ. ವೆಚ್ಚ ಭರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಲಿದೆ. ಹೊಸದಾಗಿ ಪ್ರತಿ ತಾಲೂಕಿನಲ್ಲಿ ಎರಡು ಗೋಶಾಲೆಗಳ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಿ ಜಮೀನನ್ನು ಗುರುತಿಸಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ವಕೀಲರ ಸಂಘ ಅಧ್ಯಕ್ಷ ಎಸ್‌.ವಿಜಯ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಬಿ.ಎಂ. ಅನಿಲ್‌ ಕುಮಾರ್‌ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು, ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next