Advertisement

ಜೀವವೈವಿಧ್ಯತೆ ಸಂರಕ್ಷಣೆಗೆ ನಿರ್ವಹಣಾ ಸಮಿತಿ

01:33 AM Dec 20, 2019 | Sriram |

ಬೆಂಗಳೂರು: ಜೀವವೈವಿಧ್ಯತೆಯ ಬಲವರ್ಧನೆಗೆ ಗ್ರಾಮ ಪಂಚಾಯತ್‌ ಮಟ್ಟದಲ್ಲಿ “ನಿರ್ವಹಣ ಸಮಿತಿ’ ಸ್ಥಾಪನೆ, ಪ್ರಾಣಿ ಸಂಪತ್ತಿನ ಸಮಗ್ರ ದಾಖಲೆ ಸಹಿತ ರಾಜ್ಯಮಟ್ಟದ ಮಾಹಿತಿ ಕೋಶ ರಚನೆ, ಕೃಷಿ-ಜಲಮೂಲ ವೈವಿಧ್ಯತೆ ಕುರಿತು ಅಧ್ಯಯನ ಮತ್ತು ಕಾರ್ಯ ಯೋಜನೆ ರೂಪಿಸುವುದು…

Advertisement

– ಇವು ರಾಜ್ಯ ಜೀವವೈವಿಧ್ಯ ಮಂಡಳಿಯ ಭವಿಷ್ಯದ ಚಿಂತನೆಗಳಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಪೂರಕ ಕ್ರಮಗಳನ್ನು ಕೈಗೊಳ್ಳುವ ಆವಶ್ಯಕತೆ ಇದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಗೃಹ ಕಚೇರಿ “ಕೃಷ್ಣಾ’ದಲ್ಲಿ ಗುರುವಾರ “ಕರ್ನಾಟಕ ಸಸ್ಯ ಸಂಪದ’ ಪುಸ್ತಕ ಬಿಡುಗಡೆ ವೇಳೆ ಮಂಡಳಿಯು ತನ್ನ ಸಾಧನೆ ಮತ್ತು ಮುಂದಿನ ರೂಪುರೇಷೆಗಳ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿತು.

ಕಾರ್ಯಕ್ರಮದಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಸಸ್ಯ ಸಂಪತ್ತಿನ ಸಂಪೂರ್ಣ ಮಾಹಿತಿ ಕೋಶವನ್ನು ರಾಜ್ಯ ಜೀವವೈವಿಧ್ಯ ಮಂಡಳಿ ಪ್ರಕಟಿಸುತ್ತಿದೆ. ಪ್ರಾಣಿಗಳ ಗಣತಿಯಂತೆ ಸಸ್ಯಗಳ ಗಣತಿ ಮಾಡಲಾಗಿದೆ. ರಾಜ್ಯದ ಪ್ರತಿ ಗ್ರಾ.ಪಂ. ಮತ್ತು ಪಟ್ಟಣಗಳಲ್ಲಿ ಆ ವ್ಯಾಪ್ತಿಯ ಸಕಲ ಜೀವಸಂಪತ್ತನ್ನು ದಾಖಲಿಸಿ, ಸಂರಕ್ಷಿಸಿ, ಸುಸ್ಥಿರವಾಗಿ ಬಳಸುವ ಸೂಕ್ತ ಮಾರ್ಗಗಳನ್ನು ನಿರ್ವಹಿಸಲು ಜೀವ ವೈವಿಧ್ಯ ನಿರ್ವಹಣ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸುಮಾರು 2,000 ಗ್ರಾ. ಪಂ. ಗಳಲ್ಲಿ ರಚನೆ ಮಾಡಲಾಗಿದ್ದು, ಇನ್ನೂ ಒಂದು ಸಾವಿರ ಗ್ರಾ.ಪಂ.ಗಳಲ್ಲಿ ರಚನೆ ಮಾಡುವ ಗುರಿ ಇದೆ ಎಂದರು.

ಅಲ್ಲದೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಅವುಗಳ ಕುರಿತ ಪಾರಂಪರಿಕ ಜ್ಞಾನವಿರುವ ವ್ಯಕ್ತಿ ಅಥವಾ ಸಮುದಾಯಗಳನ್ನು ಗುರುತಿಸಿ, ಅವರನ್ನು ಒಳಗೊಂಡು ಆ ಪ್ರದೇಶದ ಜೀವವೈವಿಧ್ಯ ಸಂರಕ್ಷಣೆಯ ಕಾರ್ಯನೀತಿ ರೂಪಿಸಬೇಕು. ಅದರ ಲಾಭವನ್ನು ನ್ಯಾಯಯುತವಾಗಿ ಹಂಚುವ ಕೆಲಸ ಆಗಬೇಕು. ಇದಕ್ಕಾಗಿ ಜನತಾ ಜೀವವೈವಿಧ್ಯ ದಾಖಲಾತಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸುಸ್ಥಿರ ಅಭಿವೃದ್ಧಿಗೆ ಹಿತಮಿತ ಬಳಕೆ ಅನಿವಾರ್ಯ: ಸಿಎಂ
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸುಸ್ಥಿರ ಅಭಿವೃದ್ಧಿಗೆ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಜೈವಿಕ ಸಂಪನ್ಮೂಲಗಳ ಹಿತಮಿತ ಬಳಕೆಯ ಅನಿವಾರ್ಯತೆ ಇದ್ದು, ಪರಿಸರ ರಕ್ಷಣೆ ವಿಚಾರದಲ್ಲಿ ಜೀವವೈವಿಧ್ಯ ಮಂಡಳಿಗೆ ಅರಣ್ಯ ಇಲಾಖೆ ಸಹಕಾರ ನೀಡಬೇಕು ಎಂದು ಹೇಳಿದರು.

Advertisement

ರಾಜ್ಯದ ಮಲೆನಾಡು, ಕರಾವಳಿ ಪ್ರದೇಶವು ವೈವಿಧ್ಯಮಯ ಭೌಗೋಳಿಕ ಪರಿಸರವನ್ನುಹೊಂದಿದೆ. ಕೇಂದ್ರದ ವರದಿ ಪ್ರಕಾರ ರಾಜ್ಯದಲ್ಲಿ ಹಸಿರು ಹೊದಿಕೆ ಹೆಚ್ಚಾಗಿದೆ. ಇದನ್ನು ಕಾಪಾಡಿಕೊಂಡು ಹೋಗಬೇಕಿದೆ. ಅಲ್ಲದೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಸುಸ್ಥಿರ ಅಭಿವೃದ್ಧಿ, ಜೀವವೈವಿಧ್ಯ ಸಂರಕ್ಷಣೆ, ಜೈವಿಕ ಸಂಪನ್ಮೂಲಗಳ ಹಿತಮಿತ ಬಳಕೆಯ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಮಲೆನಾಡು ಭಾಗದಲ್ಲಿ ಭೂ ಕುಸಿತ ಆತಂಕಕಾರಿ ಬೆಳವಣಿಗೆ. ಹೀಗಾಗಿ ಸುಸ್ಥಿರ ಅಭಿವೃದ್ಧಿ ಆವಶ್ಯಕತೆ ಇದೆ. ಮಂಡಳಿಗೆ ಅರಣ್ಯ ಇಲಾಖೆ ಸಹಕಾರ ನೀಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next