Advertisement
ಜ.1ರಿಂದ ಸೇವಾ ಅವಧಿಯನ್ನು ರಾತ್ರಿ 11.30ರಿಂದ 12 ಗಂಟೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ಧರಿಸಿದೆ. ಇದಾಗಿ 8ರಿಂದ 10 ತಿಂಗಳ ಅಂತರದಲ್ಲಿ ತಲಾ 6.46 ಕಿ.ಮೀ. ಹಾಗೂ 6.29 ಕಿ.ಮೀ. ಉದ್ದದ ಎರಡು ಮಾರ್ಗಗಳನ್ನು ಸೇವೆಗೆ ಮುಕ್ತಗೊಳಿಸುವ ಗುರಿಯನ್ನೂ ನಿಗಮ ಹೊಂದಿದೆ. ಸಹಜವಾಗಿ ಅದಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ಮೆಟ್ರೋ ರೈಲುಗಳೂ ಸೇರ್ಪಡೆ ಆಗಲಿವೆ. ಆದರೆ ನಿರ್ವಹಣಾ ಸಾಮರ್ಥ್ಯ ಮಾತ್ರ ಹೆಚ್ಚಾಗಿಲ್ಲ. ಇದರಿಂದ ಈಗಿರುವ ಸಿಬ್ಬಂದಿ ಮೇಲೆ ಹೊರೆ ಬೀಳಲಿದ್ದು, ಪರೋಕ್ಷವಾಗಿ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
Related Articles
Advertisement
ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ. ಆದರೆ, ಅದಕ್ಕೆ ತಕ್ಕಂತೆ ನಿರ್ವಹಣಾ ಸಾಮರ್ಥ್ಯವನ್ನೂ ಹೆಚ್ಚಿಸಬೇಕು. ಅದರಲ್ಲಿ ಕಾರ್ಯನಿರ್ವಹಿಸುವವರಿಗೂ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ವಿಚಿತ್ರವೆಂದರೆ ವಾಸ್ತವ ಹಾಗಿಲ್ಲ. ನಿರಂತರ ವಾರಗಟ್ಟಲೆ ರಾತ್ರಿ ಪಾಳಿ ಹಾಕಲಾಗುತ್ತದೆ. ಒಂದು ದಿನ ರಜೆ ನೀಡಲಾಗುತ್ತದೆ. ಆದರೆ, ಭಾರತೀಯ ರೈಲ್ವೆಯಲ್ಲಿ ಒಂದು ದಿನ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದವನಿಗೆ “ನೈಟ್ ಆಫ್’ ಎಂದು ನೀಡಲಾಗುತ್ತದೆ. ಅಂದರೆ ಮರುದಿನ ಸಂಪೂರ್ಣ ರಜೆ ಇರುತ್ತದೆ. ಜತೆಗೆ ಭತ್ಯೆ ಮತ್ತಿತರ ಸೌಕರ್ಯಗಳೂ ಇರುತ್ತವೆ. ಈ ಒತ್ತಡ ಮತ್ತು ತಾರತಮ್ಯವು ಕಾರ್ಯದಕ್ಷತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಮೆಟ್ರೋ ರೈಲು ಓಡಿಸುವವರ ಮೇಲೂ ಇದರಿಂದ ಒತ್ತಡ ಬೀಳಲಿದೆ ಎಂದು ಅವರು ಹೇಳುತ್ತಾರೆ.
ಏನೇನು ನಿರ್ವಹಣೆ?: 12 ಗಂಟೆಗೆ ಟರ್ಮಿನಲ್‌ಗೆ ಬರುವ ರೈಲುಗಳು ಇನ್ನು ಮುಂದೆ 12.30ಕ್ಕೆ ಪ್ರವೇಶಿಸುತ್ತವೆ. ಬೆಳಗಿನ ಜಾವ 4.15ಕ್ಕೆ ಪುನಃ ಕಾರ್ಯಾಚರಣೆಗೆ ಅಣಿಗೊಳಿಸಬೇಕಾದ ಸಮಯ ಈಗ 3.30ಕ್ಕೆ ಸೀಮಿತವಾಗಲಿದೆ. ನಿತ್ಯ ರೈಲುಗಳು ಟರ್ಮಿನಲ್ ಪ್ರವೇಶಿಸುತ್ತಿದ್ದಂತೆ ಅತ್ತ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ನಂತರ ಎರಡೂ ಹಳಿಗಳ ನಡುವಿನ ಅಂತರದಲ್ಲಿ ವ್ಯತ್ಯಾಸ ಪರೀಕ್ಷಿಸಬೇಕಾಗುತ್ತದೆ. ಅಲ್ಟ್ರಾಸೋನಿಕ್ ಫ್ಲಾ ಡಿಟೆಕ್ಟರ್ ಯಂತ್ರವನ್ನು ಹಳಿಗಳ ಮೇಲಿಟ್ಟು ತಳ್ಳಿಕೊಂಡು ಹೋಗುವ ಮೂಲಕ ಹಳಿಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಈ ಮಧ್ಯೆ ಆಪರೇಟರ್‌ಗಳು ಯಾವುದೇ ಲೋಪಗಳಿದ್ದರೆ, ನಿರ್ವಹಣಾ ವಿಭಾಗಕ್ಕೆ ವರದಿ ಮಾಡುತ್ತಾರೆ. ನಿರ್ವಹಣಾ ಸಿಬ್ಬಂದಿ ಆ ಲೋಪವನ್ನು ಸರಿಪಡಿಸುತ್ತಾರೆ. ರೈಲು ದ್ವಾರಗಳು ಮುಚ್ಚುವುದು- ತೆರೆಯುವುದು,
ವೈಪರ್, ಹೆಡ್‌ಲೈಟ್‌ಗಳು, ಬ್ರೇಕ್ ಮತ್ತಿತರ ಅಂಶಗಳನ್ನು ಗಮನಿಸಲಾಗುತ್ತದೆ. ಪ್ರತಿ ರೈಲಿನ ನಿರ್ವಹಣೆಗೆ 4-5 ಜನರನ್ನು ನಿಯೋಜಿಸಲಾಗಿರುತ್ತದೆ. ಇದರಲ್ಲಿ ಕೂಡ ಬೇರೆ ಬೇರೆ ವಿಭಾಗಗಳಿರುತ್ತವೆ. ನಿತ್ಯ ಬೆಳಗ್ಗೆ ಮೊದಲ ಟ್ರಿಪ್ ಯಾವ ರೈಲು ಹೋಗಬೇಕು ಎನ್ನುವುದು ಮೊದಲೇ ನಿರ್ಧಾರ ಆಗಿರುತ್ತದೆ. ಹಾಗಾಗಿ, ಅದನ್ನು ಆದ್ಯತೆಯ ಮೇರೆಗೆ ನಿರ್ವಹಣೆ ಮಾಡಲಾಗುತ್ತದೆ. ಮಧ್ಯರಾತ್ರಿ 3.30ರ ಒಳಗೆ ಈ ಎಲ್ಲ ಪ್ರಕ್ರಿಯೆಗಳು ಮುಗಿಯಲೇಬೇಕು. ಈ ಮೊದಲು 4.15ರವರೆಗೆ ಸಮಯ ಇತ್ತು. ಮೆಟ್ರೋ ನಿರ್ವಹಣೆಯಲ್ಲಿ ಟ್ರ್ಯಾಕ್ಷನ್, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಸಿವಿಲ್ ಸೇರಿದಂತೆ ಹತ್ತಾರು ವಿಭಾಗಗಳಿವೆ. ಒತ್ತಡ ಹೆಚ್ಚಿರುವುದರಿಂದ ಈ ವಿಭಾಗದಲ್ಲಿ ನೌಕರರು ತುಂಬಾ ದಿನಗಳು ನಿಲ್ಲುವುದಿಲ್ಲ. ಬದಲಾಗುತ್ತಲೇ ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.
-ವಿಜಯಕುಮಾರ್ ಚಂದರಗಿ